* ಜೆಡಿಎಸ್ ತೊರೆಯಲು ಸಿದ್ಧರಾಗಿರುವ ಜಿಟಿ ದೇವೇಗೌಡಗೆ ಟಾಂಗ್ ಕೊಟ್ಟ ಎಚ್‌ಡಿಕೆ* ಬರುವವರು ಬರಬಹುದು, ಹೋಗೋರು ಹೋಗಬಹುದು ಎಂದ ಕುಮಾರಸ್ವಾಮಿ* ವಿಧಾನಸಭಾ ಚುನಾವಣಾ  ಸಿದ್ಧತೆಗೆ ತೋಟದಲ್ಲಿ ಎರಡು ದಿನದ ಕಾರ್ಯಗಾರ

ಬೆಂಗಳೂರು, (ಸೆ.01): ವಿಧಾನಸಭಾ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಬಾಕಿ ಇದೆ. ಆಗಲೇ ರಾಜ್ಯದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ.

 ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡ ಪಕ್ಷ ತೊರೆದು ಕಾಂಗ್ರೆಸ್ ಸೇರುವುದಾಗ ಹೇಳಿಕೊಂಡ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಜೆಡಿಎಸ್ ಬಾಗಿಲು ದೊಡ್ಡದಾಗಿ ತೆರೆದಿದೆ. ಬರುವವರು ಬರಬಹುದು, ಹೋಗೋರು ಹೋಗಬಹುದು ಎಂದಿದ್ದಾರೆ.

ಜೆಡಿಎಸ್-ಕಾಂಗ್ರೆಸ್‌ ನಡುವೆ ಶುರುವಾಯ್ತು ಫ್ಯೂಸ್ ಫೈಟ್

ಎರಡು ವರ್ಷದ ಹಿಂದೆನೇ ಪಕ್ಷದಿಂದ ದೂರ ಸರಿದಿದ್ದೇನೆ ಎಂದು ಅವರೇ ಹೇಳಿದ್ದಾರೆ. ಈಗ ಒಂದು ನೆಪ ಹೇಳಿ ಹೋಗೋಕೆ ಮುಂದಾಗಿದ್ದಾರೆ. ದ್ರಾಕ್ಷಿ ಕೈಗೆಟುಕದಿದ್ದಾಗ ನರಿ ಹೇಳುವ ಕಥೆಯಂತಾಗಿದೆ. ಈಗ ನನ್ನಿಂದ ಹೊರಹೋಗುವುದಾದರೆ 2008 ರಲ್ಲಿ ಯಾವ ಕಾರಣಕ್ಕಾಗಿ ಬಿಜೆಪಿಗೆ ಹೋದರು ಎಂದು ಜಿಟಿಡಿಗೆ ಟಾಂಗ್‌ ಕೊಟ್ಟರು.

ಮುಂದಿನ 2023ರ ವಿಧಾನಸಭಾ ಚುನಾವಣಾ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್‌ಡಿಕೆ, ಮೊದಲ ಹಂತದಲ್ಲಿ 108 ಅಭ್ಯರ್ಥಿಗಳ ಹೆಸರು ಫೈನಲ್ ಮಾಡಲಾಗುವುದು. ಇನ್ನೂ ಎಂಟತ್ತು ಅಭ್ಯರ್ಥಿಗಳ ಹೆಸರು ಪಟ್ಟಿಗೆ ಸೇರಿಕೊಳ್ಳಬಹುದು ಎಂದರು.

 ಸಿದ್ಧತೆ ದೃಷ್ಟಿಯಿಂದ ಎಲ್ಲರಿಗೂ ನನ್ನ ತೋಟದಲ್ಲೇ ಕಾರ್ಯಗಾರ ನಡೆಯಲಿದೆ. ಬಿಡದಿಯ ನನ್ನ ತೋಟದ ಮನೆಯಲ್ಲಿ ಎರಡು ದಿನದ ಕಾರ್ಯಗಾರ ನಡೆಯಲಿದೆ. ಮಿಷನ್ 123 ಅನ್ನೋದು ನನ್ನ ಸ್ಪಷ್ಟ ಧ್ಯೇಯ. ಮುಂದಿನ ಬಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.