ಬಿಜೆಪಿ, ಕಾಂಗ್ರೆಸ್‌ನವರಿಗೆ ರಾಜ್ಯದ ಜನರ ಹಿತ ಬೇಕಾಗಿಲ್ಲ. ಈ ಬಾರಿ ರಾಜ್ಯದ ಜನತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದ ದೇವೇಗೌಡ. 

ಸಕಲೇಶಪುರ/ಅರಸೀಕೆರೆ/ಬೇಲೂರು(ಮೇ.05): ಮೇ. 10ರಂದು ಮತದಾನ, 13ಕ್ಕೆ ಎಣಿಕೆ, 18ರಂದು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸುವುದು ಶತಃಸಿದ್ಧ. ತಾಲೂಕಿನ ನಿಷ್ಠಾವಂತ, ಸರಳ, ಸಜ್ಜನಿಕೆಯ ಕೆ.ಎಸ್‌.ಲಿಂಗೇಶ್‌ ಅವರನ್ನು ಮತ್ತೆ ಗೆಲ್ಲಿಸಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಿಳಿಸಿದರು.

ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಅರಸೀಕೆರೆ ಮತ್ತಿತರ ಕ್ಷೇತ್ರಗಳಲ್ಲಿ ಗುರುವಾರ ನಡೆದ ಬೃಹತ್‌ ಸಭೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮಾತನಾಡಿ ಬಿಜೆಪಿ, ಕಾಂಗ್ರೆಸ್‌ನವರಿಗೆ ರಾಜ್ಯದ ಜನರ ಹಿತ ಬೇಕಾಗಿಲ್ಲ. ಈ ಬಾರಿ ರಾಜ್ಯದ ಜನತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದರು.

ನುಡಿದಂತೆ ನಡೆಯುವ ಕುಮಾರಸ್ವಾಮಿ ಕೈ ಬಲಪಡಿಸಿ: ಎಚ್‌.ಡಿ.ದೇವೇಗೌಡ

ಪ್ರಾದೇಶಿಕ ಪಕ್ಷದ ಉಳಿವಿಗಾಗಿ ನನ್ನ ಈ ಇಳಿವಯಸ್ಸಿನಲ್ಲಿ ರಾಜ್ಯ ಸುತ್ತಾಟ ನಡೆಸುತ್ತಿದ್ದೇನೆ. ರಾಜ್ಯದ ನೆಲ, ಜಲ ಸಂರಕ್ಷಣೆಗಾಗಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ರಾಜ್ಯದ ಜನರಿಗೆ ನೀರಿಲ್ಲದಿದ್ದರೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂಥ ಅನಿವಾರ್ಯತೆ ಸೃಷ್ಟಿಸಲಾಗಿದೆ. ಈ ಬಗ್ಗೆ ಲೋಕಸಭೆಯಲ್ಲಿ ಏಕಾಂಗಿ ಹೋರಾಟ ನಡೆಸಿದೆ. ಆದರೆ ಬಿಜೆಪಿಯ 18 ಲೋಕಸಭಾ ಸದಸ್ಯರಿದ್ದರೂ ನನಗೆ ಸಹಕಾರ ನೀಡಲಿಲ್ಲ. ನಮಗೆ ಮೇಕೆದಾಟಿನಲ್ಲಿ ಡ್ಯಾಂ ನಿರ್ಮಾಣ ಮಾಡುವ ಶಕ್ತಿ ಇಲ್ಲವೇ ಎಂದು ಪ್ರಶ್ನಿಸಿದರು.

ಜೆಡಿಎಸ್‌ನ ಬೃಹತ್‌ ಸಮಾವೇಶದಲ್ಲಿ ಬಿಜೆಪಿ, ಕಾಂಗ್ರೆಸ್‌, ಬಜರಂಗದಳ, ಶ್ರೀರಾಮಸೇನೆ ಕಾರ್ಯಕರ್ತರು ಹಾಗೂ ಮುಸ್ಲಿಂ ಬಾಂಧವರು ನೂರಾರು ಸಂಖ್ಯೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.