ಬೇಡವೆಂದರೂ ನೀವೇ ನನ್ನನ್ನು ಸಿಎಂ ಮಾಡಿದಿರಿ: ಎಚ್‌ಡಿಕೆ ಕಿಡಿ!

‘ಬೇಡವೆಂದರೂ ನನ್ನನ್ನು ಸಿಎಂ ಮಾಡಿದಿರಿ’|  ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕುಮಾರಸ್ವಾಮಿ| ನಡು ಬಗ್ಗಿಸಿ ಜೆಡಿಎಸ್‌ ಎದುರು ನಿಂತಿರಿ| ನಂತರ ನೀವು ‘ಬ್ಯಾಕ್‌ಸೀಟ್‌ ಡ್ರೈವಿಂಗ್‌’ ಮಾಡಿದಾಗ ಎಲ್ಲಿತ್ತು ನೈತಿಕತೆ?| ಟೀಕೆಗಾಗಿ ಟೀಕೆ ಮಾಡುವ ಮನಸ್ಥಿತಿಯಿಂದಲೇ ಕಾಂಗ್ರೆಸ್‌ಗೆ ದುಃಸ್ಥಿತಿ| ನನ್ನನ್ನು ನೇರ ಪ್ರಶ್ನಿಸಲಾಗದೇ ಟ್ವೀಟ್‌ ಮೂಲಕ ದಾಳಿ ಮಾಡಿ ಓಡಿದ್ದಾರೆ| ಖರ್ಗೆ ಸಿಎಂ ಆಗಲು ಕಾಂಗ್ರೆಸ್ಸಿಗರಿಂದಲೇ ಅಡ್ಡಗಾಲು| ಎಚ್‌ಡಿಕೆ ಟೀಕಾ ಪ್ರಹಾರ

HD Kumaraswamy Slams Karnataka Congress On Alliance

ಬೆಂಗಳೂರು(ಜು.30): ‘ಬೇರೆ ಪಕ್ಷದ ಶಾಸಕರಿಗೆ ಸ್ವಯಂ ಸೇರ್ಪಡೆಯ ಮಾರುವೇಷ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೂ ಬಿಜೆಪಿ ಅವರು ಆಪರೇಷನ್‌ ಅಸ್ತ್ರ ಬಳಸಿ ಸರ್ಕಾರವೊಂದನ್ನು ಬುಡಮೇಲು ಮಾಡುವುದಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಒಂದು ತೆಳುಗೆರೆಯಷ್ಟೇ ಅಂತರ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

‘ಕಾಂಗ್ರೆಸ್‌ ಇದರ ಅರ್ಥ ತಿಳಿಯದಷ್ಟುಕುಬ್ಜ ಸ್ಥಿತಿ ತಲುಪಿರುವುದು ಚೋದ್ಯವೆನಿಸಿದೆ. ಟೀಕೆಗಾಗಿ ಟೀಕೆ ಮಾಡುವ ಇಂತಹ ಮನಸ್ಥಿತಿಯಿಂದಾಗಿಯೇ ಕಾಂಗ್ರೆಸ್‌ ಇಂದು ಇಂತಹ ದುಃಸ್ಥಿತಿಗೆ ತಲುಪಿದೆ. ಕಪಟ ರಾಜಕಾರಣವನ್ನು ಯಾವ ಬಾಗಿಲಿನಿಂದ ಮಾಡಿದರೂ ಅದು ಅನೀತಿಯೇ ಆಗಿದೆ’ ಎಂದೂ ಅವರು ಟೀಕಿಸಿದ್ದಾರೆ.

'ನೇರವಾಗಿ ಪ್ರಶ್ನಿಸಲಾಗದ ಅತಿರಥ ಮಹಾರಥರು ಟ್ವಿಟರ್ ಮೂಲಕ ದಾಳಿ ಮಾಡಿ ಓಡಿದ್ದಾರೆ'

ಮಂಗಳವಾರ ಕಾಂಗ್ರೆಸ್‌ ಪಕ್ಷದ ಟ್ವೀಟ್‌ಗೆ ಸರಣಿ ಟ್ವೀಟ್‌ಗಳ ಮೂಲಕವೇ ತಿರುಗೇಟು ನೀಡಿದ ಅವರು, ‘ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸ್‌ ಅತಿರಥ ಮಹಾರಥರು ಪಕ್ಷದ ಟ್ವೀಟರ್‌ ಖಾತೆ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

‘ಚರ್ಚೆ ಆರಂಭವಾಗಿದೆ. ಅದನ್ನು ನಾನು ಪೂರ್ತಿಗೊಳಿಸುತ್ತೇನೆ. ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ರಾಜ್ಯದ ನಾಯಕರು ಜೆಡಿಎಸ್‌ ಎದುರು ನಡು ಬಗ್ಗಿಸಿ ನಾವು ಬೇಡವೆಂದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದಿರಿ. ಅನಂತರ ಒತ್ತಡಗಳನ್ನು ಹೇರಿ ಬ್ಯಾಕ್‌ ಸೀಟ್‌ ಡ್ರೈವಿಂಗ್‌ ಮಾಡಿದಾಗ ಕಾಂಗ್ರೆಸ್‌ ನೈತಿಕತೆ ಎಲ್ಲಿತ್ತು?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

‘ರೈತರ ಸಾಲ ಮನ್ನಾ ಮಾಡಿ ರಾಜಧರ್ಮ ಪಾಲಿಸಬೇಕಿತ್ತು. ನಿಮ್ಮೆಲ್ಲಾ ಆಟಗಳು ಗೊತ್ತಿದ್ದರೂ ಸಹ ರಾಜ್ಯದ ಜನತೆಯ ಹಿತಕ್ಕಾಗಿ ನಾನು ಸಹ ಚಾಣಕ್ಯ ನೀತಿ ಪ್ರದರ್ಶಿಸಿ ರೈತರ ಹಿತ ರಕ್ಷಿಸಿದೆ. ಇದರಲ್ಲಿ ನನ್ನ ವೈಯಕ್ತಿಕ ಲಾಭವೇನಿಲ್ಲ. ಬೇಡವೆಂದರೂ ನಮ್ಮ ಮನೆ ಬಾಗಿಲಿಗೆ ಬಂದವರು ನೀವು, ನಾನು ಅಮಾಯಕನಾಗಿರಲಿಲ್ಲ. ಕಾಂಗ್ರೆಸ್‌ನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದರು. ಆದರೆ, ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ’ ಎಂದು ಕಿಡಿಕಾರಿದ್ದಾರೆ.

ನಿಗಮ-ಮಂಡಳಿ ಸ್ಥಾನ ಒಲ್ಲೆ ಎಂದ ಶಾಸಕರು: ಬಿಜೆಪಿಯಲ್ಲಿ ಅಸಮಧಾನದ ಹೊಗೆ..!

ಖರ್ಗೆಗೆ ಕಾಂಗ್ರೆಸ್ಸಿಗರಿಂದಲೇ ಅಡ್ಡಗಾಲು:

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್‌ನ ರಾಷ್ಟ್ರ, ರಾಜ್ಯ ನಾಯಕರು ಇದ್ದ ಸಭೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಾಂಗ್ರೆಸ್‌ಗೆ ಸಲಹೆ ನೀಡಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲಿ ಎಂದರು. ಖರ್ಗೆ ಮುಖ್ಯಮಂತ್ರಿಯಾಗುವುದನ್ನು ಕಾಂಗ್ರೆಸ್‌ನ ಒಳಗಿನ ನಾಯಕರೇ ತಡೆದರು. ಆ ನಾಯಕರು ಯಾರು ಎಂದು ಕಾಂಗ್ರೆಸ್‌ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದು. ಕುಮಾರಸ್ವಾಮಿ ಅಜ್ಞಾತ, ಅಪ್ರಸ್ತುತರಾಗಿದ್ದಾರೆ’ ಎಂದೂ ಕಾಂಗ್ರೆಸ್‌ ನಾಯಕರು ಪಕ್ಷದ ಟ್ವೀಟರ್‌ ಮೂಲಕ ದಾಳಿ ಮಾಡಿದ್ದಾರೆ.

‘ದೇಶದ ಎಷ್ಟುರಾಜ್ಯಗಳಲ್ಲಿ ಕಾಂಗ್ರೆಸ್‌ ಪ್ರಸ್ತುತವಾಗಿದೆ? ಪ್ರತ್ಯಕ್ಷವಾಗಿ ರಾಜಕಾರಣ ಮಾಡುತ್ತಿದೆ? ಅನಾಥವಾಗಿದೆ? ಇದಕ್ಕೆ ಉತ್ತರಿಸಲು ನಾಯಕರು ಯಾರಾದರೂ ಇದ್ದಾರೋ? ಇಲ್ಲ ಕಾಂಗ್ರೆಸ್‌ ಟ್ವಿಟರ್‌ ಖಾತೆಗೆ ಸೀಮಿತವೋ?’ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios