ಕೇಂದ್ರ ಸರ್ಕಾರವು ಈಗಾಗಲೇ ಕಬ್ಬಿಗೆ ಎಫ್.ಆರ್.ಪಿ ದರ ನಿಗದಿ ಮಾಡಿದೆ. ಹಣದ ಕೊರತೆ ಇದ್ದರೆ ನನ್ನ ಸರ್ಕಾರದಲ್ಲಿ ಹಣದ ಕೊರತೆ ಇದೆ ಅಂತ ಮುಖ್ಯಮಂತ್ರಿ ಹೇಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಮೈಸೂರು (ನ.08): ಕೇಂದ್ರ ಸರ್ಕಾರವು ಈಗಾಗಲೇ ಕಬ್ಬಿಗೆ ಎಫ್.ಆರ್.ಪಿ ದರ ನಿಗದಿ ಮಾಡಿದೆ. ಹಣದ ಕೊರತೆ ಇದ್ದರೆ ನನ್ನ ಸರ್ಕಾರದಲ್ಲಿ ಹಣದ ಕೊರತೆ ಇದೆ ಅಂತ ಮುಖ್ಯಮಂತ್ರಿ ಹೇಳಬೇಕು. ಅದನ್ನು ಬಿಟ್ಟು ಕೇಂದ್ರದ ಕಡೆ ಬೊಟ್ಟು ಮಾಡೋದು ಸರಿಯಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರೈತರು ಹಾಗೂ ಕಾರ್ಖಾನೆ ಮಾಲೀಕರ ಜೊತೆ ಸಭೆ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಇವರ ತಪ್ಪಿಗೆ ಪ್ರಧಾನಿಯನ್ನು ಇಕ್ಕಟಿಗೆ ಸಿಲುಕಿಸುವ ತಂತ್ರ ಮಾಡಿದ್ದಾರೆ. ಅದಕ್ಕೆ ಪತ್ರ ಬರೆದಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಸ್ಕೀಮ್ ಉಸ್ತುವಾರಿ ನೋಡಿಕೊಳ್ಳಲು ಕ್ಯಾಬಿನೆಟ್ ಮಟ್ಟದ ಸ್ಥಾನಮಾನ ಕೊಟ್ಟು ದುಡ್ಡು ವೆಚ್ಚ ಮಾಡ್ತೀರಾ?ರೈತರಿಗೆ ಹಣ ಕೊಡಲು ಆಗಲ್ವಾ? ರೈತರ ಬಗ್ಗೆ ಅಸಡ್ಡೆ, ಕೆಲ ಒತ್ತಡಕ್ಕೆ ಮಣಿದಿರಬಹುದು. ಜನಪ್ರತಿನಿಧಿಗಳ ಕಾರ್ಖಾನೆ ಉಳಿಸುವ ಒತ್ತಡ ಇರಬಹುದು ಎಂದು ಅವರು ಆರೋಪಿಸಿದರು. ಈ ಸರ್ಕಾರದ ಬಗ್ಗೆ ಆಕ್ರೋಶವಿದೆ. ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ ಗೊತ್ತಿಲ್ಲ. ಸಿದ್ದರಾಮಯ್ಯ ಸೀನಿಯರ್ ಲೀಡರ್ ಇದ್ದಾರೆ. ಎರಡು ಬಾರಿ ಸಿಎಂ ಆಗಿದ್ದಾರೆ. ಡಿಸಿಎಂ ಆಗಿದ್ದರು. ಹೆಚ್ಚು ಬಜೆಟ್ ಮಂಡನೆ ಮಾಡಿದ ಖ್ಯಾತಿ ಇದೆ.
ಸಿಎಂಗೆ ಕನಿಷ್ಠ ಏನು ತೀರ್ಮಾನ ಮಾಡಬೇಕು ಅಂತ ಗೊತ್ತಿಲ್ವಾ? ವಿರೋಧ ಪಕ್ಷದ ಪ್ರಮುಖರಿಗೆ ಆಹ್ವಾನ ಇದೆ. ಸಭೆ ಕರೆದಿದ್ದಾರೆ ಅಂತೆ. ಇದು ನಾವು ಮಾಡುವ ತೀರ್ಮಾನ ಅಲ್ಲ. ಸಿಎಂ ಮಾಡುವ ತೀರ್ಮಾನ. ಸಣ್ಣ ವಿಷಯವನ್ನು ದೊಡ್ಡದು ಮಾಡಿದ್ದಾರೆ ಎಂದು ಅವರು ಟೀಕಾಪ್ರಹಾರ ನಡೆಸಿದರು. ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಬೇಕು ಅಂತಾರೆ. ಯಾವ ರಾಜ್ಯದಲ್ಲಿ ಸಿಎಂಗಳು ಪ್ರಧಾನಿಗೆ ಪತ್ರ ಬರೆಯುತ್ತಿದ್ದಾರೆ?ಸಿದ್ದರಾಮಯ್ಯ ಅವರಿಗೆ ರೈತರ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಇದೆ. ನಾನೇ ಎರಡು ಬಾರಿ ಆಕಸ್ಮಿಕವಾಗಿ ಸಿಎಂ ಆಗಿದ್ದೆ.
ಸಮಸ್ಯೆಗಳನ್ನು ನಾನೇ ಬಗೆಹರಿಸಿದ್ದೇನೆ
ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದೆ. ಎರಡು ಸಂದರ್ಭದಲ್ಲೂ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ನಾನೇ ಬಗೆಹರಿಸಿದ್ದೇನೆ. ಕೇಂದ್ರದ ಕಡೆ ನೋಡಲಿಲ್ಲ. ವೈಯಕ್ತಿಕ ನಿರ್ಧಾರ ಮಾಡಿದ್ದೆ ಎಂದು ಅವರು ತಿಳಿಸಿದರು. ಮೂರು ಪಕ್ಷಗಳಲ್ಲಿ ಸಕ್ಕರೆ ಮಾಲೀಕರಿದ್ದಾರೆ ಎನ್ನುವ ಆರೋಪವಿದೆ. ನಮ್ಮ ಪಕ್ಷದಲ್ಲಿ ಬಂಡಪ್ಪ ಕಾಶಪ್ಪನವರ್ ಕಾರ್ಖಾನೆ ಇರಿಸಿಕೊಂಡಿದ್ದರು. ಈಗ ಅವರು ಮಾರಾಟ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಯಾರು ಸಕ್ಕರೆ ಕಾರ್ಖಾನೆ ಮಾಲೀಕರು ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
