ನನಗೆ ಸಿದ್ದರಾಮಯ್ಯ ಅವರ ಗುಣ ಗೊತ್ತಿದೆ. ಅವರು ನಮ್ಮ ಪಕ್ಷದಲ್ಲಿ ಇದ್ದಾಗಲೇ ಅವರ ಗುಣ ತಿಳಿದುಕೊಂಡಿದ್ದೇನೆ. ಹೀಗಾಗಿ, ಯಾವ ಬದಲಾವಣೆಯೂ ಅಗುವುದಿಲ್ಲ. ಯಾವ ಕ್ರಾಂತಿನೂ ಆಗಲ್ಲ ಎಂದರು ಎಚ್.ಡಿ.ಕುಮಾರಸ್ವಾಮಿ.

ಮೈಸೂರು (ನ.08): ರಾಜ್ಯದಲ್ಲಿ ನವೆಂಬರ್‌ನಲ್ಲಿ ಯಾವ ಕ್ರಾಂತಿನೂ ಆಗಲ್ಲ, ವಾಂತಿನೂ ಆಗಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಸಿದ್ದರಾಮಯ್ಯ ಅವರ ಗುಣ ಗೊತ್ತಿದೆ. ಅವರು ನಮ್ಮ ಪಕ್ಷದಲ್ಲಿ ಇದ್ದಾಗಲೇ ಅವರ ಗುಣ ತಿಳಿದುಕೊಂಡಿದ್ದೇನೆ. ಹೀಗಾಗಿ, ಯಾವ ಬದಲಾವಣೆಯೂ ಅಗುವುದಿಲ್ಲ. ಯಾವ ಕ್ರಾಂತಿನೂ ಆಗಲ್ಲ ಎಂದರು. ಇದೇ ವೇಳೆ ಕಬ್ಬು ಬೆಳೆಗಾರರ ಹೋರಾಟ ಬಗ್ಗೆ ಮಾತನಾಡಿ, ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಜತೆಗೆ ಏನು ಮಾತನಾಡಿಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ, ಈ ಹಿಂದಿನ ಸರ್ಕಾರದ ತಪ್ಪು ಸರಿ ಮಾಡಿ ಅಂತ ರಾಜ್ಯದ ಜನರು ಕಾಂಗ್ರೆಸ್‌ಗೆ 136 ಸ್ಥಾನ ಕೊಟ್ಟರು. ಈಗ ಇವರಿಗಿಂತ ಈ ಹಿಂದಿನ ಸರ್ಕಾರವೇ ಸರಿಯಿತ್ತು ಅಂತ ಜನರು ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ದೇವರ ಜೊತೆಗೆ ಡಿಕೆಶಿ ಮಾತು: ಡಿಕೆಶಿ ಸಿಎಂ ಆಗ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೋ ಇಲ್ಲವೋ ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಯಾವಾಗಲೂ ದೇವರ ಜೊತೆ ಮಾತನಾಡುತ್ತಾರೆ. ದೇವರು ಅವರಿಗೆ ಏನೇನು ಹೇಳಿದ್ದಾನೋ ನಮಗೇನು ಗೊತ್ತು? ಅದೇನಿದ್ದರೂ ಡಿಕೆಶಿ ಹಾಗೂ ದೇವರಿಗೆ ಸಂಬಂಧಪಟ್ಟ ವಿಚಾರ. ಹಾಗಂತ ಡಿಕೆಶಿ ಅವರೇ ಹೇಳಿದ್ದಾರೆ ಎಂದರು.

ಕಬ್ಬು ದರ ಬಗ್ಗೆ ಕೇಂದ್ರದ ಕಡೆ ಬೊಟ್ಟು ಸರಿಯಲ್ಲ

ಕೇಂದ್ರ ಸರ್ಕಾರವು ಈಗಾಗಲೇ ಕಬ್ಬಿಗೆ ಎಫ್‌ಆರ್‌ಪಿ ದರ ನಿಗದಿ ಮಾಡಿದೆ. ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣವಿಲ್ಲ ಅಂತ ಹೇಳಬೇಕು. ಅದನ್ನು ಬಿಟ್ಟು ಕೇಂದ್ರದ ಕಡೆ ಬೊಟ್ಟು ಮಾಡೋದು ಸರಿಯಲ್ಲ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರಕ್ಕೆ ಪತ್ರ ಬರೆದು ಪ್ರಧಾನಿಯನ್ನು ಇಕ್ಕಟಿಗೆ ಸಿಲುಕಿಸುವ ತಂತ್ರ ಮಾಡಿದ್ದಾರೆ.

ಗ್ಯಾರಂಟಿ ಯೋಜನೆ ಉಸ್ತುವಾರಿ ನೋಡಿಕೊಳ್ಳಲು ಕ್ಯಾಬಿನೆಟ್ ಸ್ಥಾನಮಾನ ಕೊಟ್ಟು ದುಡ್ಡು ವೆಚ್ಚ ಮಾಡ್ತೀರಾ? ರೈತರಿಗೆ ಹಣ ಕೊಡಲು ಆಗಲ್ವಾ? ಸರ್ಕಾರಕ್ಕೆ ರೈತರ ಬಗ್ಗೆ ಅಸಡ್ಡೆ ಇದ್ದು, ರಾಜಕಾರಣಿಗಳ ಕಾರ್ಖಾನೆ ಉಳಿಸಲು ಕೆಲವರ ಒತ್ತಡಕ್ಕೆ ಮಣಿದಿರಬಹುದು ಎಂದು ವಾಗ್ದಾಳಿ ನಡೆಸಿದರು. ಇವರು ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ ಗೊತ್ತಿಲ್ಲ ಎಂದರು. ಎರಡು ಬಾರಿ ಸಿಎಂ ಆಗಿರುವ ಸೀನಿಯರ್ ಲೀಡರ್ ಸಿದ್ದರಾಮಯ್ಯ ಅವರಿಗೆ ಏನು ತೀರ್ಮಾನ ಮಾಡಬೇಕು ಅಂತ ಗೊತ್ತಿಲ್ವಾ? ಇದು ನಾವು ಮಾಡುವ ತೀರ್ಮಾನ ಅಲ್ಲ. ಸಣ್ಣ ವಿಷಯವನ್ನು ದೊಡ್ಡದು ಮಾಡಿದ್ದಾರೆ ಎಂದರು.