ವಿಜಯೇಂದ್ರ ಅವರೇ ಮೊದಲು ಕುಮಾರಸ್ವಾಮಿ ರಾಜೀನಾಮೆ ಕೊಡಿಸಿ: ಸಚಿವ ಎಂ.ಬಿ.ಪಾಟೀಲ್
ಕುಮಾರಸ್ವಾಮಿ ಮೇಲೆ ಪ್ರಾಥಮಿಕ ತನಿಖೆಯಾಗಿ ಪ್ರಾಸಿಕ್ಯೂಷನ್ ಕೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಅವರದ್ದು ಪ್ರಾಥಮಿಕ ತನಿಖೆಗೆ ಸೂಚಿಸಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ವಿಜಯಪುರ (ಸೆ.26): ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದಿರುವ ಬಿ.ವೈ.ವಿಜಯೇಂದ್ರ ಅವರು ಮೊದಲು ಕುಮಾರಸ್ವಾಮಿ ಅವರ ರಾಜೀನಾಮೆ ಕೊಡಿಸಲಿ ಆಮೇಲೆ ನೋಡೋಣ. ಕುಮಾರಸ್ವಾಮಿ ಮೇಲೆ ಪ್ರಾಥಮಿಕ ತನಿಖೆಯಾಗಿ ಪ್ರಾಸಿಕ್ಯೂಷನ್ ಕೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಅವರದ್ದು ಪ್ರಾಥಮಿಕ ತನಿಖೆಗೆ ಸೂಚಿಸಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಮಾಡಿದ್ದನ್ನು ನಾನು ವಾಟ್ಸಪ್‌ನಲ್ಲಿಯೇ ನೋಡಿದ್ದೇನೆ. ಕೋರ್ಟ್ ಆದೇಶ ನಾನು ನೋಡಿಲ್ಲ. ಆದೇಶ ನೋಡಿದ ಮೇಲೆ ಪ್ರತಿಕ್ರಿಯಿಸುವೆ ಎಂದು ಹೇಳಿದರು.
ಡಿ.24ರೊಳಗೆ ತನಿಖಾ ವರದಿ ಸಲ್ಲಿಸಲು ಕೋರ್ಟ್ ಆದೇಶ ನೀಡಿದ ವಿಚಾರದ ಬಗ್ಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸುತ್ತಾರೆ. ನಾನಿನ್ನೂ ಕೋರ್ಟ್ ಆದೇಶ ನೋಡಿಯೇ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ತನಿಖೆ ಎದುರಿಸಿ ಎಂದ ಬಿಜೆಪಿಗರಿಗೆ ಯಾರು ರಾಜೀನಾಮೆ ಕೊಡ್ತಾರೆ ಹೋಗ್ರಿ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಎಂದು ಎಂ.ಬಿ.ಪಾಟೀಲ್ ಹೇಳಿದಂತಿದೆ.
ಮುಡಾ ಹಗರಣದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ರಾಜ್ಯಾದ್ಯಂತ ಬಿಜೆಪಿ ನಡೆಸಿದ ಪ್ರತಿಭಟನೆಗೆ ಕಿಡಿಕಾರಿದ ಅವರು, ಅತಿವೃಷ್ಟಿ ಬಂದಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರೋದು ಯಾಕೆ? ವಿಜಯಪುರ ನಗರ ಶಾಸಕರು ಬಿಜೆಪಿಯವರಿದ್ದಾರೆ, ನನಗಿಂತ ಮೊದಲು ಅವರು ಸ್ಥಳಕ್ಕೆ ಬರಬೇಕಿತ್ತು. ನಾನು ಜಿಲ್ಲಾ ಉಸ್ತುವಾರಿ ಮಂತ್ರಿ ನನ್ನದು ಜವಾಬ್ದಾರಿ ಇದೆ. ನಗರ ಶಾಸಕರ ಜವಾಬ್ದಾರಿ ಇದೆ ಅಲ್ವಾ ಎಂದು ಪ್ರಶ್ನಿಸಿದರು.ಮಳೆ ಅವಾಂತರ ಪರಿಶೀಲಿಸಿ, ಪರಿಹಾರ ತಂದು ಕೊಡುವ ಪ್ರಯತ್ನ ಮಾಡಬೇಕಿತ್ತು. ಅದನ್ನು ಬಿಟ್ಟು ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಜನರ ಸಮಸ್ಯೆ ಬಗ್ಗೆ ಮಹತ್ವ ಇಲ್ಲ ಎಂದರು.
Vijayapura: ಕೂಡಲೇ ಮಳೆ ಸಮೀಕ್ಷೆ ನಡೆಸಲು ಸಚಿವ ಎಂ.ಬಿ.ಪಾಟೀಲ್ ಸೂಚನೆ
ಹರಿಯಾಣ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಿಎಂ ಮೋದಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿಚಾರ ಪ್ರಸ್ತಾಪಿಸಿದ ಬಗ್ಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಎಲೆಕ್ಟ್ರೋಲ್ ಬಾಂಡ್ ಕುರಿತು ಇದೇ ರೀತಿ ಟಿಪ್ಪಣಿ ಮಾಡಿದೆ. ಆ ವಿಚಾರದಲ್ಲಿ ಯಾವ ರೀತಿ ನಡೆದುಕೊಳ್ಳುತ್ತೀರಿ ಎಂದು ಪಿಎಂ ಮೋದಿಗೆ ಪ್ರಶ್ನೆ ಮಾಡಿದರು. ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಪ್ರಧಾನಿ ಮೋದಿಯವರು ಕೂಡ ರಾಜೀನಾಮೆ ಕೊಡಬೇಕಲ್ಲ ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಬಿಜೆಪಿಯವರು ಏನೇನು ಅನಾಹುತ ಮಾಡಿದ್ದಾರೆಂದು ಮೋದಿಯವರಿಗೆ ಗೊತ್ತಿಲ್ಲ. ಇಲ್ಲಿ ಬಿಜೆಪಿಯ ಎಲ್ಲರೂ ಬೇಲ್ ಮೇಲೆ ಇದ್ದಾರೆ ಎಂದರು.