ಬೆಂಗಳೂರು (ಅ.30):  ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ನ ಕೆಲವು ಶಾಸಕರ ದುಂಡಾವರ್ತನೆಯನ್ನು ನುಂಗಿಕೊಂಡು ಕೆಲಸ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

"

ಗುರುವಾರ ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಮೈತ್ರಿ ಆಡಳಿತದ ಸಂದರ್ಭದಲ್ಲಿ ಕಚೇರಿಗೆ ತಡವಾಗಿ ಹೋಗಿದ್ದಕ್ಕೆ ಕಾಂಗ್ರೆಸ್‌ನ ಶಾಸಕರೊಬ್ಬರು ಮುನಿಸಿಕೊಂಡಿದ್ದರು. ಕೃಷ್ಣಾದಲ್ಲಿ ಜನರ ಸಮಸ್ಯೆ ಆಲಿಸಿ ಕಚೇರಿಗೆ ತೆರಳಿದ್ದೆ. ಆಗ ಅಲ್ಲಿ ಕುಳಿತಿದ್ದ ಕಾಂಗ್ರೆಸ್‌ ಶಾಸಕರೊಬ್ಬರು ನಿಮಗೆ ಎಷ್ಟುಹೊತ್ತು ಕಾಯುವುದು ಎಂದು ಅವರು ತಂದಿದ್ದ 10-12 ಪತ್ರಗಳನ್ನು ಇಸ್ಪೀಟ್‌ ಎಲೆಯಂತೆ ಬಿಸಾಡಿದರು. ಅದನ್ನೆಲ್ಲ ಸಹಿಸಿಕೊಂಡು ಕೆಲಸ ಮಾಡಿದ್ದೇನೆ ಎಂದರು.

ಕೃಷ್ಣ ಅವಧಿಯಲ್ಲಿ ನಡೆದಿತ್ತು ಈ ವ್ಯವಹಾರ : ಎಚ್‌ಡಿಕೆಗೆ ಎದುರಾಯ್ತು ಹೊಸ ಸಮಸ್ಯೆ ...

ಕಾಂಗ್ರೆಸ್‌ ಶಾಸಕರಿಗೆ ಬೇಕಾಗಿದ್ದು ತಮ್ಮ ಸ್ವಂತ ಲಾಭವೇ ಹೊರತು ಜನ ಕಲ್ಯಾಣವಲ್ಲ. ಕಾಂಗ್ರೆಸ್ಸಿಗರು ನೀಡಿದ ಕಿರುಕುಳದ ನಡುವೆಯೂ ರೈತರ ಹಿತ ಕಾಯಲು 25 ಸಾವಿರ ಕೋಟಿ ರು. ಸಾಲಮನ್ನಾ ಮಾಡಿದೆ. ಒಬ್ಬ ಮುಖ್ಯಮಂತ್ರಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದರೆ ಅದು ನಾನು ಮಾತ್ರ. ಅಂತಹ ಸ್ಥಿತಿಯಲ್ಲಿ ಕಾಂಗ್ರೆಸ್‌ನವರು ನನ್ನನ್ನು ಇಟ್ಟಿದ್ದರು. ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರು ಎಚ್‌ಎಎಲ್‌ ಅನ್ನು ಮಾರುವುದಕ್ಕೆ ಹೊರಟ್ಟಿದ್ದಾರೆ. ಉದ್ಯಮಿ ಅದಾನಿಗೆ 6 ವಿಮಾನ ನಿಲ್ದಾಣಗಳನ್ನು ನೀಡಿದ್ದಾರೆ. ಮುಖೇಶ್‌ ಅಂಬಾನಿ ಆದಾಯ ಗಂಟೆಗೆ 94 ಕೋಟಿ ರು. ಇದೆಯಂತೆ. ಅವರ ಸಲಹೆಯನ್ನು ತೆಗೆದುಕೊಂಡು ಪ್ರತಿ ಕುಟುಂಬಕ್ಕೂ ದಿನಕ್ಕೆ 100 ರು. ಬರುವಂತೆ ಮಾಡಬಹುದಲ್ಲ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ಬೆಂಗಳೂರು ನಗರದ ಅಭಿವೃದ್ಧಿಗೆ ದುಡ್ಡು ತಂದವರು ಯಾರೋ, ಹೆಸರು ಮಾಡಿಕೊಂಡಿದ್ದು ಯಾರೋ. ಐಟಿ ವಲಯಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೊಸ ಆಯಾಮವನ್ನು ನೀಡಿದರು. ದೇವೇಗೌಡ ಸ್ಕೀಮ್‌ ಎಂದು ದಕ್ಷಿಣ ಆಫ್ರಿಕಾದಲ್ಲಿ ಆಕ್ಸಲರೆಟೆಡ್‌ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. 1988ರಲ್ಲಿ ನಂದಿನಿ ಬಡಾವಣೆಯನ್ನು ಒಡಿಯಬೇಕು ಎಂಬ ಆದೇಶ ಬಂದಾಗ ಜನರ ನೆರವಿಗೆ ಹೋಗಿದ್ದು ದೇವೇಗೌಡ ಅವರು. ನಾನು ಬೆಂಗಳೂರಲ್ಲಿ ಮೆಟ್ರೋ ಪ್ರಾರಂಭಿಸಿದ್ದೇನೆ ಎಂದರು.