HD Kumaraswamy: ಎರಡು ದಿನಗಳ ವಿಶ್ರಾಂತಿ ಬಳಿಕ ಚುನಾವಣಾ ಅಖಾಡಕ್ಕೆ ಎಚ್‌ಡಿಕೆ!
ಜ್ವರದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನೆಗೆ ಮರಳಿದ್ದು, ಜೆ.ಪಿ.ನಗರದ ನಿವಾಸದಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದಾರೆ.
ಬೆಂಗಳೂರು (ಏ.25) : ಜ್ವರದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನೆಗೆ ಮರಳಿದ್ದು, ಜೆ.ಪಿ.ನಗರದ ನಿವಾಸದಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದಾರೆ.
ಚುನಾವಣಾ ಪ್ರಚಾರಕ್ಕೆ ತೆರಳಲು ಸಿದ್ಧರಾಗಿದ್ದ ಕುಮಾರಸ್ವಾಮಿ(HD Kumaraswamy), ಶನಿವಾರ ಜ್ವರದಿಂದಾಗಿ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಸಂಜೆ ಆಸ್ಪತ್ರೆಯಿಂದ ಡಿಸ್ಚಾಜ್‌ರ್ ಆಗಿ ಮನೆಗೆ ಮರಳಿದ್ದಾರೆ. ವಿಶ್ರಾಂತಿ ಪಡೆದುಕೊಳ್ಳುತ್ತಿರುವ ಅವರು ಮಂಗಳವಾರದಿಂದಲೇ ಪ್ರಚಾರಕ್ಕೆ ಧುಮುಕಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಮೈಸೂರಿನ ಚಾಮರಾಜ ಕ್ಷೇತ್ರ ಮತ್ತು 3 ಗಂಟೆಗೆ ವರುಣ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ.
ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆಯಲ್ಲಿಯೂ ಕಾರ್ಯಕರ್ತರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದರು. ಅಲ್ಲದೇ, ಚುನಾವಣಾ ಪ್ರಚಾರದ ಕುರಿತು ರೂಪರೇಷೆ ಸಿದ್ಧಪಡಿಸಿದರು. ಭಾನುವಾರ ರಾಮನಗರ, ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಮಯ ನಿಗದಿ ಮಾಡಲಾಗಿತ್ತು. ಆದರೆ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಚಾರ ರದ್ದುಪಡಿಸಿದರು. ಇದೀಗ ಚುನಾವಣೆ ಪ್ರಚಾರಕ್ಕೆ ತೆರಳಲು ಸಿದ್ಧವಾಗಿದ್ದು, ಮಂಗಳವಾರದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಎಚ್‌ಡಿಕೆಗೆ ಅನಾರೋಗ್ಯ: ಮಣಿಪಾಲ್ ಆಸ್ಪತ್ರೆಗೆ ದಾಖಲು! ವೈದ್ಯರು ಹೇಳಿದ್ದೇನು?
ಎಚ್‌ಡಿಕೆ ಆರೋಗ್ಯವೃದ್ಧಿಗೆ ಕಬ್ಬಾಳಮ್ಮನಿಗೆ ವಿಶೇಷ ಪೂಜೆ
ಚನ್ನಪಟ್ಟಣ: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶೀಘ್ರ ಗುಣಮುಖರಾಗಲಿ ಎಂದು ತಾಲೂಕು ಜೆಡಿಎಸ್ ಮುಖಂಡರು ಹಾಗೂ ಎಚ್‌ಡಿಕೆ ಅಭಿಮಾನಿಗಳು ಕನಕಪುರದ ಶಕ್ತಿ ದೇವತೆ ಶ್ರೀ ಕಬ್ಬಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸೋಮವಾರ ಕಬ್ಬಾಳಮ್ಮನ ದೇವಸ್ಥಾನಕ್ಕೆ ತೆರಳಿದ ಜೆಡಿಎಸ್ ಮುಖಂಡರು, ಕಾಯಿ ಹೊಡೆದು ಶ್ರೀ ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶೀಘ್ರ ಗುಣಮುಖರಾಗಲಿ. ಅವರ ಆರೋಗ್ಯ ವೃದ್ಧಿಸಲಿ. ಆ ದೇವರು ಅವರಿಗೆ ಇನ್ನಷ್ಟುಹೆಚ್ಚಿನ ಆರೋಗ್ಯ ಕರುಣಿಸಲಿ ಎಂದು ಈ ವೇಳೆ ಪ್ರಾರ್ಥನೆ ಸಲ್ಲಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮಾಜಿ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಜೆಡಿಎಸ್ ವಕ್ತಾರ ಅಂಬಾಡಹಳ್ಳಿ ಮಹೇಶ್‌ಗೌಡ, ರಘು, ರಾಜೇಶ್ ಮುಂತಾದವರಿದ್ದರು.