ಬೆಂಗಳೂರು, (ಡಿ.12): ಎಚ್‌ಡಿ ಕುಮಾರಸ್ವಾಮಿ ಅವರು ಇತ್ತೀಚೆಗೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.  ಅಲ್ಲದೇ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಂದು ಸ್ಥಾನವಿಲ್ಲದ ಬಿಜೆಪಿಗೆ ಜೆಡಿಎಸ್ ಅಧಿಕಾರ ಕೊಟ್ಟಿದೆ.

ಹೀಗೆ ಜೆಡಿಎಸ್, ಬಿಜೆಪಿಗೆ ಬೆಂಬಲಿಸುತ್ತಿದೆ. ಇವೆಲ್ಲವೂಗಳ ಮಧ್ಯೆ ಬಿಜೆಪಿ ಜೊತೆ ವಿಲೀನವಾಗಲು ಜೆಡಿಎಸ್ ಒಪ್ಪಂದ ಮಾಡಿಕೊಂಡಿದೆ ಎಂಬ ಮಾತುಗಳು ರಾಜ್ಯ ರಾಜಕಾಣದಲ್ಲಿ ಹರಿದಾಡುತ್ತಿವೆ.

ಇನ್ನು ಈ ಬಗ್ಗೆ ಸ್ವತಃ  ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು ಸ್ಫೋಟಕ ಹೇಳಿಕೆ ಕೊಟ್ಟಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸಿದೆ.

ರಾಜಕೀಯ ನಿವೃತ್ತಿ ಸವಾಲು ಹಾಕಿದ ಕುಮಾರಸ್ವಾಮಿ...!

ಇಂದು (ಶನಿವಾರ) ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜಕಾರಣದಲ್ಲಿ ಹೀಗೆ ಆಗುತ್ತದೆ ಎಂದು ಹೇಳುವುದ್ದಕ್ಕೆ ಸಾಧ್ಯವಿಲ್ಲ. ನಮ್ಮ ಪಕ್ಷ ಬಿಜೆಪಿಯ B ಟೀಂ ಎಂದು ಕರೆದವರು ನನ್ನ ಮನೆಗೆ ಬಂದರು. ಕೊನೆಗೆ ನಮ್ಮ ಜೊತೆಯೇ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು. ಮುಂದೆ ರಾಜ್ಯಕ್ಕೆ ಕುಮಾರಸ್ವಾಮಿ ಅನಿವಾರ್ಯತೆ ಬರಬಹುದು ಎಂದು ಅಚ್ಚರಿ ಹೇಳಿಕೆ ನೀಡಿದರು.

ಬಿಜೆಪಿ ಜೊತೆ ಜೆಡಿಎಸ್​ ವಿಲೀನವಾಗಲಿದೆಯೇ ಎನ್ನುವ ಪ್ರಶ್ನೆಗೆ ನಾನು ನಮ್ಮ ಪಕ್ಷವನ್ನು ಎಂದಿಗೂ ವಿಲೀನ ಮಾಡುವುದಿಲ್ಲ. 2021ರಲ್ಲಿ ನಾನು ಸಿಎಂ ಆಗುತ್ತೇನೆಂದು ಭವಿಷ್ಯ ಕೂಡ ಹೇಳುವುದಿಲ್ಲ. ರಾಜಕಾರಣದಲ್ಲಿ ಬದಲಾವಣೆ ‌ಆಗುತ್ತಲೇ ಇರುತ್ತದೆ. ಬಿಜೆಪಿ ಸರ್ಕಾರಕ್ಕೆ ಸಂಖ್ಯಾಬಲ ಅಗತ್ಯದಷ್ಟಿದೆ. ಸದ್ಯಕ್ಕಂತೂ ಬಿಜೆಪಿಗೆ ನಮ್ಮ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಇತ್ತೀಚೆಗೆ ಬಿಜೆಪಿ ಪರವಾಗಿ ಕುಮಾರಸ್ವಾಮಿ ಒಲವು ತೋರುತ್ತಿದ್ದಾರೆ ಎನ್ನುವ ವಿಚಾರ ಚರ್ಚೆ ಆಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, ಬಿಜೆಪಿ ಬಗ್ಗೆ ನಮಗೆ ಯಾವುದೇ ಸಾಫ್ಟ್ ಕಾರ್ನರ್ ಇಲ್ಲ. ವಿರೋಧ ಪಕ್ಷದಲ್ಲಿದ್ದ ಕಾರಣ ಕೇವಲ ವಿರೋಧ ಮಾಡುವುದಲ್ಲ. ನಾಡಿನ ಬೆಳವಣಿಗೆಗೆ ಸಹಕಾರ ನೀಡುವುದು ಕೂಡ ವಿರೋಧ ಪಕ್ಷದ ಕೆಲಸ ಎಂದು ಸ್ಪಷ್ಟಪಡಿಸಿದರು.