ರಾಜಕೀಯ ನಿವೃತ್ತಿ ಸವಾಲು ಹಾಕಿದ ಕುಮಾರಸ್ವಾಮಿ...!
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಮತ್ತೆ ವಾಕ್ಸಮರ ತಾರಕ್ಕೇರುತ್ತಿದೆ.ಇದರ ಮಧ್ಯೆ ಎಚ್‌ಡಿಕೆ ರಾಜಕೀಯ ನಿವೃತ್ತಿ ಸವಾಲು ಹಾಕಿದ್ದಾರೆ.
ಬೆಂಗಳೂರು, (ಡಿ.12): ಇತ್ತೀಚೆಗೆ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ನನ್ನ ಹಾಗೂ ನನ್ನ ತಂದೆ ವಿರುದ್ಧ ಏಕವಚಕದಲ್ಲಿ ಮಾತಾಡಿದ್ದಾರೆ. ನಾನೂ ಸಹ ನಿಮ್ಮ ಬಗ್ಗೆ ಏಕವಚನದಲ್ಲಿಯೇ ಮಾತನಾಡ್ಲಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಮ್ಮ ತರ ಡಬಲ್ ಸ್ಟ್ಯಾಂಡರ್ಡ್ ರಾಜಕೀಯ ಮಾಡೋದಿಲ್ಲ. ನೀನು ಯಾಕಪ್ಪ ಆದಾಯ ಮಿತಿ 25 ಲಕ್ಷಕ್ಕೆ ಏರಿಕೆ ಮಾಡಿದೆ? ಎಂದು ಕುಮಾರಸ್ವಾಮಿ ಇದೇ ವೇಳೆ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಒಂದೂ ದಿನ ಕಲಾಪಕ್ಕೆ ಬಾರದ ಎಚ್‌ಡಿಕೆ: ಕಾರಣ ಮಾತ್ರ ನಿಗೂಢ..!
ಏನ್ ಗೊತ್ತು ದೇವಗೌಡ್ರ ಇತಿಹಾಸ?
ದೇವೇಗೌಡರು ಕೃಷಿ ಮಾಡಿದ್ದಾರೆ, ಸಗಣಿ ಬಾಚಿದ್ದಾರೆ. ಹೇಮಾವತಿ ನದಿ ಈಜಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ನಿನಗೆ ಏನು ಗೊತ್ತು ದೇವಗೌಡರ ಇತಿಹಾಸ? ಎಂದು ಸಿದ್ದರಾಮಯ್ಯಗೆ ಖಾರವಾಗಿ ಪ್ರಶ್ನಿಸಿದರು.
ನಾನು ಬೇನಾಮಿ ವ್ಯವಹಾರ ಮಾಡಿದ್ದು ನೀವು ಅದನ್ನು ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ನಾನು ನಿಮಗಿಂತ ದೊಡ್ಡ ಧ್ವನಿಯಲ್ಲಿ ಮಾತನಾಡಬಲ್ಲೆ. ನೀವು ಸಿಎಂ ಆಗಿದ್ದಾಗ ಲೀ ಮೆರಿಡಿಯನ್ ಹೋಟೆಲ್‌ನಲ್ಲಿ ಶುಗರ್ ಫ್ಯಾಕ್ಟರಿ ಕ್ಲಬ್ ನಡೆಸುತ್ತಿದ್ದವರು ಯಾರು? ನಿನ್ನ ಹಾಗೆ ನಾನು ಮಾಡಿಲ್ಲ ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಏಕವಚನದಲ್ಲೇ ಗುಡುಗಿದರು.
ಅಪ್ಪನಿಂದ ಮಕ್ಕಳವರೆಗೆ ಕಣ್ಣೀರು ಹಾಕುವುದು ಸಂಸ್ಕೃತಿ ಅಂತಾರೆ. ನೀನು ಡಿಸಿಎಂ ಆಗಿ ಸೋತ ನಂತರ ದೇವೇಗೌಡರ ಮುಂದೆ ಬಂದು ಕಣ್ಣೀರು ಹಾಕಿದ್ದೆ. ನಾವು ಜನರ ಕಷ್ಟ ನೋಡಿ ಕಣ್ಣೀರು ಹಾಕುತ್ತೇವೆ. ನೀನು ಯಾರ ಒಳ್ಳೆಯದಕ್ಕೆ ಎಂದು ತಿರುಗೇಟು ನೀಡಿದರು.