ಮೈಸೂರು, (ಮಾ.14): ರಾಸಲೀಲೆ ಸಿ.ಡಿ ವಿಚಾರದಲ್ಲಿ ನನ್ನನ್ನ ಸಿಲುಕಿಸೋ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಎಚ್‌ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

 ಸಿಡಿ ವಿಚಾರದಲ್ಲಿ ನನ್ನನ್ನ ಸಿಲುಕಿಸೋ ಪ್ರಯತ್ನ ನಡೆಯುತ್ತಿದೆ. ಈ ಹಿಂದಿನಿಂದ ಬಂದಂಥಹ ಷಡ್ಯಂತ್ರಗಳಂತೆ ಅದನ್ನೂ ಸಹ ನಾನು ಎದುರಿಸುತ್ತೇನೆ ಎಂದಿದ್ದರು.

ಇದಕ್ಕೆ ಇದೀಗ ಮಾಜಿ  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಎಷ್ಟೋ ಜನ ಮಹಾನ್ ನಾಯಕರಿಲ್ಲ. ಡಿಕೆ ಶಿವಕುಮಾರ್ ಅವರು ಅವರ ಹೆಸರನ್ನು ಅವರೇ ಏಕೆ ಮುಂದೆ ಬಿಟ್ಟುಕೊಂಡಿದ್ದಾರೆ. ಅವರೇ ಮಾಡಿದ್ದಾರೆಂದು ಯಾರಾದರೂ ಹೇಳಿದರಾ ಎಂದು ಪ್ರಶ್ನಿಸಿದರು.

'ಯುವತಿ ನೇರ ಆರೋಪ, ರಮೇಶ್ ಜಾರಕಿಹೊಳಿ ಬಂಧಿಸಿ ತನಿಖೆ ನಡೆಸಿ'

ಬಿಜೆಪಿಯಲ್ಲೇ ಒಬ್ಬರು ಮಹಾನ್ ನಾಯಕರು ಬೆಳೆಯುತ್ತಿದ್ದಾರೆ. ಯಾವ ಮಹಾನ್ ನಾಯಕರು ಅಂತ ಹೇಳಿದ್ದಾರೆ ಗೊತ್ತಿಲ್ಲ. ಡಿಕೆಶಿಯವರು ತಾವೆ ಅಂತ ಯಾಕೆ ಅಂದುಕೊಂಡರೋ ಗೊತ್ತಿಲ್ಲ ಎಂದರು.

ಡಿಕೆ.ಶಿವಕುಮಾರ್ ಬಹಳ ಮೆಚುರ್ಡ್ ಪೊಲಿಟಿಶಿಯನ್. ಅವರಿಗೆ ಇರುವ ಅನುಭವ ನಮಗೂ ಇಲ್ಲ. ನಿನ್ನೆ ದುಡುಕಿ ಅವರ ಹೆಸರನ್ನು ಅವರೇ ಹೇಳಿದ್ದಾರೆ. ಯಾಕೆ ಈ ಪ್ರಕರಣಕ್ಕೆ ಅವರ ಹೆಸರು ಸಿಲುಕಿಸಿಕೊಳ್ಳಲು ಹೊರಟಿದ್ದಾರೆ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.

ಈ ಪ್ರಕರಣವನ್ನು ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಯಾರಿಗೂ ಗಂಭೀರತೆ ಇಲ್ಲ. ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ. ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.