'ನಿಗಮ-ಮಂಡಳಿ, ಬಿಜೆಪಿ ಕಾರ್ಯಕರ್ತರಿಗೆ ಹಣ ನೀಡಲು ಆರ್ಥಿಕ ಸಂಕಷ್ಟ ಇಲ್ಲವೇ?'
* 1250 ಕೋಟಿ ಸರ್ಕಾರದ ಆರ್ಥಿಕ ಪ್ಯಾಕೇಜ್ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ!
* ಆರ್ಥಿಕ ಪ್ಯಾಕೇಜ್ ಬಗ್ಗೆ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಕುಮಾರಸ್ವಾಮಿ
* ನಿಗಮ-ಮಂಡಳಿ, ಬಿಜೆಪಿ ಕಾರ್ಯಕರ್ತರಿಗೆ ಹಣ ನೀಡಲು ಆರ್ಥಿಕ ಸಂಕಷ್ಟ ಇಲ್ಲವೇ ಎಂದ ಎಚ್‌ಡಿಕೆ
ಬೆಂಗಳೂರು, (ಮೇ.19): ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆ ಶ್ರಮಿಕ ವರ್ಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆ ಇಂದು ರಾಜ್ಯ ಸರ್ಕಾರ ಇಂದು ಶ್ರಮಿಕ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ.
ಇನ್ನು ಈ ಆರ್ಥಿಕ ಪ್ಯಾಕೇಜ್ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಬಿಎಸ್ವೈ ಮಾತು ಒಪ್ಪೋಣ. ಆದರೆ, ನಿಗಮ-ಮಂಡಳಿಗಳಿಗೆ ಅನಗತ್ಯವಾಗಿ ತುಂಬಲಾಗಿರುವ ಬಿಜೆಪಿ ಕಾರ್ಯಕರ್ತರಿಗೆ ಹಣ ನೀಡಲು ಆರ್ಥಿಕ ಸಂಕಷ್ಟ ಇಲ್ಲವೇ? ಜನರೇ ನೀಡಿದ ಹಣವನ್ನು ಜನರಿಗೆ ನೀಡಲು ಮಾತ್ರ ಸಂಕಷ್ಟ ಎದುರಾಗಿದೆಯೇ? ನಿಮ್ಮ ಕಾರ್ಯಕರ್ತರಿಗೆ ನಿಗಮ-ಮಂಡಳಿ ನೆಪದಲ್ಲಿ ನೀಡುತ್ತಿರುವುದು ಜನರ ಹಣವಲ್ಲವೇ? ಎಂದು ಟಾಂಗ್ ಕೊಟ್ಟಿದ್ದಾರೆ.
1250 ಕೋಟಿ ಆರ್ಥಿಕ ಪ್ಯಾಕೇಜ್ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ!
ಜನಹಿತದ ಲಾಕ್‌ಡೌನ್ ಘೋಷಿಸಬೇಕು, ಅದರಲ್ಲಿ ಜನರಿಗೆ ಉಪಯೋಗವಾಗುವ ಪ್ಯಾಕೇಜ್ ಇರಬೇಕು ಎಂಬ ಜೆಡಿಎಸ್‌ನ ಆಗ್ರಹದ ನಂತರ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಿದೆ. ಆದರೆ, 6.5 ಕೋಟಿ ಜನಸಂಖ್ಯೆ ಇರುವ, ದೇಶಕ್ಕಾಗಿ ಅಪಾರ ಅರ್ಥಿಕ ಕೊಡುಗೆ ನೀಡುವ ಕರ್ನಾಟಕದಂತ ದೊಡ್ಡ ರಾಜ್ಯಕ್ಕೆ ಈ ಪ್ಯಾಕೇಜ್ ಅತ್ಯಂತ ಕಡಿಮೆ. ಇದು ಅವೈಜ್ಞಾನಿ, ಅಸಮರ್ಪಕ.
ಲಾಕ್‌ಡೌನ್ ಮಾಡಿ ಎಂದು ನಾನು ಮಾರ್ಚ್‌ನಲ್ಲೇ ಹೇಳಿದ್ದೆ. ಆದರೆ, ಘೋಷಿಸಲಿಲ್ಲ. ನೆರೆಯ ಕೇರಳದಲ್ಲಿ ಮಾರ್ಚ್‌ನಲ್ಲೇ ಲಾಕ್‌ಡೌನ್ ಜಾರಿಯಾಯಿತು. 20,000 ಕೋಟಿ ಪ್ಯಾಕೇಜ್‌ಅನ್ನೂ ಘೋಷಿಸಲಾಯಿತು. ಕರ್ನಾಕಟದ ಎದುರು ಕೇರಳ ಎಲ್ಲ ದೃಷ್ಟಿಯಿಂದಲೂ ಸಣ್ಣ ರಾಜ್ಯ. ಆದರೆ, ಅವರಿಗಿಂತ ದೊಡ್ಡ ರಾಜ್ಯವಾದ ಕರ್ನಾಟಕಕ್ಕೆ ಈ 1200 ಕೋಟಿ ಪರಿಹಾರ ಸಾಕೆ?
ಕೊರೋನಾ ಸಂಕಷ್ಟ, 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ: ಯಾರಿಗೆಷ್ಟು ಪರಿಹಾರ?
ಆರ್ಥಿಕ ಸಂಕಷ್ಟದ ಮಧ್ಯೆ ಪ್ಯಾಕೇಜ್ ನೀಡುತ್ತಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ನನ್ನಿಂದ ಅಧಿಕಾರ ಕಸಿದಾಗ ಇದೇ ಬಿಎಸ್‌ವೈ ಅವರು ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದಿದ್ದರು. 2 ವರ್ಷದಲ್ಲಿ ಆರ್ಥಿಕ ದುಸ್ಥಿತಿ ಬಂದಿದ್ದು ಹೇಗೆ? ರಾಜಕೀಯಕ್ಕಾಗಿ ಮಾಡಿಕೊಂಡ ನಿಗಮಗಳಿಗೆ ನೂರಾರು ಕೋಟಿ ಹಣವಿರುವಾಗ ಜನರ ಪರಿಹಾರಕ್ಕಿಲ್ಲವೇ?
ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಬಿಎಸ್ವೈ ಮಾತು ಒಪ್ಪೋಣ. ಆದರೆ, ನಿಗಮ-ಮಂಡಳಿಗಳಿಗೆ ಅನಗತ್ಯವಾಗಿ ತುಂಬಲಾಗಿರುವ ಬಿಜೆಪಿ ಕಾರ್ಯಕರ್ತರಿಗೆ ಹಣ ನೀಡಲು ಆರ್ಥಿಕ ಸಂಕಷ್ಟ ಇಲ್ಲವೇ? ಜನರೇ ನೀಡಿದ ಹಣವನ್ನು ಜನರಿಗೆ ನೀಡಲು ಮಾತ್ರ ಸಂಕಷ್ಟ ಎದುರಾಗಿದೆಯೇ? ನಿಮ್ಮ ಕಾರ್ಯಕರ್ತರಿಗೆ ನಿಗಮ-ಮಂಡಳಿ ನೆಪದಲ್ಲಿ ನೀಡುತ್ತಿರುವುದು ಜನರ ಹಣವಲ್ಲವೇ?
ಪ್ಯಾಕೇಜ್‌ನಲ್ಲಿ ಕೃಷಿ ರಂಗವನ್ನು ಹೂ ಬೆಳೆಗಾರರು, ಹಣ್ಣ-ತರಕಾರಿ ಬೆಳೆಗಾರರೆಂದು ಪ್ರತ್ಯೇಕಿಸಲಾಗಿದೆ. ಅತ್ಯಂತ ಅವೈಜ್ಞಾನಿಕ ಕ್ರಮವಿದು. ಒಟ್ಟು ಕೃಷಿ ಕ್ಷೇತ್ರ, ಒಟ್ಟು ರೈತ ಸಮುದಾಯ ಎಂಬ ಪರಿಕಲ್ಪನೆಯೇ ಇಲ್ಲಿಲ್ಲ. ಕೃಷಿ ಕ್ಷೇತ್ರದ ಇತರೆ ಕಸುಬುದಾರರನ್ನು ಪ್ಯಾಕೇಜ್‌ನಿಂದ ಹೊರಗಿಟ್ಟಿದ್ದು ಯಾಕೆ? ಪ್ಯಾಕೇಜ್ ಹಿಗ್ಗುತ್ತದೆ ಎಂಬ ಭಯವೇ?
2.10 ಲಕ್ಷ ಚಾಲಕ ವರ್ಗಕ್ಕೆ 3000 ಪರಿಹಾರ ನೀಡುವುದಾಗಿ ಹೇಳಲಾಗಿದೆ. ಕಳೆದ ಬಾರಿಯ ಲಾಕ್‌ಡೌನ್‌ನಲ್ಲಿ 7.50ಲಕ್ಷ ಇದ್ದ ಚಾಲಕರ ಸಂಖ್ಯೆ ಈ ಬಾರಿ 2.10ಲಕ್ಷಕ್ಕೆ ಇಳಿದಿದೆ. ಚಾಲಕರಿಗೆ ಈಗ ಪರಿಹಾರಕ್ಕಿಂತಲೂ ಮುಖ್ಯವಾಗಿ, ಆರ್‌ಟಿಒ ಶುಲ್ಕಗಳು, ತೆರಿಗೆಯಿಂದ ವಿನಾಯಿತಿ ಸಿಗಬೇಕಿತ್ತು. ಈಗಿನ ಪರಿಹಾರದಿಂದ ಅವರ ಕುಟುಂಬ ನಡೆಯಲು ಸಾಧ್ಯವೇ?
ಕೂಲಿ ಕಾರ್ಮಿಕರು ಸದ್ಯ ನಗರ ತೊರೆದು ಹಳ್ಳಿ ಸೇರಿದ್ದಾರೆ. ಅವರ ಅದಾಯ ವೃದ್ಧಿಗಾಗಿ ನರೇಗಾವನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಅವಕಾಶವಿತ್ತು. ನರೇಗಾಕ್ಕೆ ಹೆಚ್ಚಿನ ಅನುದಾನ ಒದಗಿಸಿ, ಗ್ರಾಮೀಣ ಮೂಲಸೌಕರ್ಯ ಹೆಚ್ಚಿಸಿ, ಕೂಲಿ ಕಾರ್ಮಿಕರ ಆದಾಯ ವೃದ್ಧಿಸಲು ಇದ್ದ ಅವಕಾಶವನ್ನು ಸರ್ಕಾರ ಕಳೆದುಕೊಂಡಿದೆ. ಈ ಸರ್ಕಾರಕ್ಕೆದೂರಾಲೋಚನೆಗಳೇ ಇಲ್ಲ ಎಂದು ಕಿಡಿಕಾರಿದ್ದಾರೆ.