Asianet Suvarna News Asianet Suvarna News

ಪಾದರಾಯನಪುರ ಆರೋಪಿಗಳು ರಾಮನಗರಕ್ಕೆ: ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಎಚ್‌ಡಿಕೆ

ಬೆಂಗಳೂರಿನ ಪಾದರಾಯನಪುರ ಗಲಭೆಗೆ ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ರವಾನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

HD Kumaraswamy Opposes Shifting Padarayanapura Accused To Ramanagara Jail
Author
Bengaluru, First Published Apr 21, 2020, 10:14 PM IST

ಬೆಂಗಳೂರು, (ಏ.21): ಪಾದರಾಯನಪುರ ಗಲಭೆಗೆ ಸಂಬಂಧಿಸಿದಂತೆ 54 ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಆದ್ರೆ, ಇದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಬೆಂಗಳೂರಿನ ಪಾದರಾಯನಪುರದ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಐವತ್ತನಾಲ್ಕು ಮಂದಿ ಪುಂಡರನ್ನು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸುವುದರಿಂದಾಗುವ ಮುಂದಿನ ಅನಾಹುತಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.

'ಪಾದರಾಯನಪುರ ಪುಂಡರು ರಾಮನಗರಕ್ಕೆ ಜೈಲಿಗೆ ಬೇಡ'

ಕೊರೋನಾ ಸೋಂಕಿನ ವಿಷಯದಲ್ಲಿ ಹಸಿರು ವಲಯವಾಗಿರುವ ರಾಮನಗರದಲ್ಲಿ ಕ್ವಾರಂಟೈನ್ ಗೆ ಒಳಗಾಗಬೇಕಿದ್ದ ಗಲಭೆಕೋರರನ್ನು ರಾಮನಗರ ಜೈಲಿನಲ್ಲಿರಿಸುವುದು ವಿವೇಕಯುತ ನಿರ್ಧಾರವಲ್ಲ. 

ಚೋದ್ಯವೆಂದರೆ ರಾಮನಗರ ಜೈಲಿನ ಖೈದಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಿ, ಪಾದರಾಯನಪುರದ ಪುಂಡರನ್ನು ರಾಮನಗರದ ಕಾರಗೃಹದಲ್ಲಿ ಹದಿನೈದಕ್ಕೂ ಹೆಚ್ಚು ಮಂದಿಯನ್ನು ಒಂದೇ ಕೊಠಡಿಯಲ್ಲಿರಿಸುವ ಮೂಲಕ ಕೊರೋನಾ ಭೀತಿ ಎದುರಾಗಿದೆ. ಜಿಲ್ಲೆಯ ಜನತೆ ಭಯಗೊಂಡಿದ್ದಾರೆ. ಸರಕಾರ ತಕ್ಷಣವೇ ತನ್ನ ನಿರ್ಧಾರವನ್ನು ಬದಲಿಸಬೇಕು ಎಂದು ಎಚ್‌ಡಿಕೆ ಆಗ್ರಹಿಸಿದ್ದಾರೆ.

ಸೋಮವಾರ ಸೆರೆ ಸಿಕ್ಕ 54 ಮಂದಿ ನ್ಯಾಯಾಂಗ ಬಂಧನಕ್ಕೆ ಒಳಗಾದವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ಇರಿಸುವುದನ್ನು ಬಿಟ್ಟು ರಾಮನಗರ ಜಿಲ್ಲಾ ಕಾರಾಗೃಹದಲ್ಲಿರಿಸುವ ನಿರ್ಧಾರ ತಗೆದುಕೊಂಡವರು ಯಾರು? ನನಗಿರುವ ಮಾಹಿತಿ ಪ್ರಕಾರ ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಇಂತಹದ್ದೊಂದು ದುಡುಕು ನಿರ್ಧಾರಕ್ಕೆ ಕಾರಣರಾಗಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ಮುಖ್ಯ ಮಂತ್ರಿ, ಗೃಹ ಸಚಿವರು ಹಾಗೂ ಗೃಹ ಕಾರ್ಯದರ್ಶಿ ಅವರೊಂದಿಗೆ ಎರೆಡೆರಡು ಬಾರಿ ದೂರವಾಣಿಯಲ್ಲಿ ಚರ್ಚಿಸಿದ್ದೇನೆ. ರಾಮನಗರ ಜಿಲ್ಲೆಯ ಜನರು ಮತ್ತು ಜನ ಪ್ರತಿನಿಧಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಪ್ರತಿಭಟನೆಗೆ ಇಳಿಯದಂತೆ ಅವರ ಮನವೊಲಿಸಿದ್ದೇನೆ. ಇದನ್ನು ಸರಕಾರದ ಗಮನಕ್ಕೂ ತರಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಸರ್ಕಾರಕ್ಕೆ ಸಲಹೆ ಕೊಟ್ಟ ಎಚ್‌ಡಿಕೆ
ಪಾದರಾಯನಪುರ ಗಲಭೆ ಸಂಬಂಧ ಒಟ್ಟು ಈವರೆಗೆ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಈ ಎಲ್ಲರನ್ನೂ ಬೆಂಗಳೂರಿನ ಯಾವುದಾದರೂ ಸರಕಾರೀ ಆಸ್ಪತ್ರೆ, ಹಾಸ್ಟೆಲ್ ಅಥವಾ ಯಾವುದಾದರೂ ಕಟ್ಟಡದಲ್ಲಿ ಬಂದೋಬಸ್ತ್‌ನೊಂದಿಗೆ ಇಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. 

ಸರಕಾರ ಇಂತಹ ಸೂಕ್ಷ ವಿಚಾರದಲ್ಲಿ ಜನತೆಯೊಂದಿಗೆ ಚೆಲ್ಲಾಟವಾಡದೇ ತಕ್ಷಣವೇ ತುರ್ತು ಅಗತ್ಯ ಕ್ರಮ ತಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ರಾಮನಗರ ಕಾರಾಗೃಹದಲ್ಲಿ ಅಡುಗೆಯವರು ಮತ್ತು ಶುಚಿತ್ವದ ಸಿಬ್ಬಂದಿ ವಾಸಿಸುತ್ತಿದ್ದು ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಗಲಭೆಕೊರರಿಂದ ಅಕಸ್ಮಾತ್ ಸೋಂಕು ತಗುಲಿದರೆ ಜಿಲ್ಲೆಯ ಸ್ವಾಸ್ಥ್ಯ ಹದಗೆಡುತ್ತದೆ ಎಂಬ ಕನಿಷ್ಠ ಪ್ರಜ್ಞೆ ಸರಕಾರಕ್ಕೆ ಬೇಡವೇ ಎಂದು ಕಿಡಿ ಕಾರಿದ್ದಾರೆ.

Follow Us:
Download App:
  • android
  • ios