ರಾಜಕಾರಣಿಗಳಷ್ಟೇ ರಾಜಕಾರಣ ಮಾಡಲಿ. ಆದರೆ ಧರ್ಮಾಧಿಕಾರಿಗಳು ಯಾರೋ ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು (ನ.30): ರಾಜಕಾರಣಿಗಳಷ್ಟೇ ರಾಜಕಾರಣ ಮಾಡಲಿ. ಆದರೆ ಧರ್ಮಾಧಿಕಾರಿಗಳು ಯಾರೋ ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹದ ವಿಚಾರದಲ್ಲಿ ಸ್ವಾಮೀಜಿಗಳು ಮಧ್ಯ ಪ್ರವೇಶ ಮಾಡುವುದು ಅನಗತ್ಯ. ಇದರಲ್ಲಿ ಅವರಿಗೆ ಏನೂ ಕೆಲಸ ಇಲ್ಲ ಎಂದರು. ನಾನು ಎರಡು ಬಾರಿ ಸಿಎಂ ಆಗಿದ್ದೆ. ಅಧಿಕಾರ ಹೋದಾಗ ಯಾವ ಮಠಾಧಿಪತಿಗಳ ನೆರವನ್ನೂ ನಾನು ಕೇಳಲಿಲ್ಲ. ರಾಜಕಾರಣಿಗಳ ಕೆಲಸವೇ ಬೇರೆ, ಸ್ವಾಮೀಜಿಗಳ ಕೆಲಸವೇ ಬೇರೆ. ಒಕ್ಕಲಿಗ ಸಮಾಜ ಅಷ್ಟೇ ಅಲ್ಲ, ಬೇರೆ ಯಾವುದೇ ಸಮಾಜದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದರು.
ರಾಜಕಾರಣಿಗಳಷ್ಟೇ ರಾಜಕಾರಣ ಮಾಡಲಿ: ಜಾತಿ ಧರ್ಮಗಳ ವಿಚಾರ ಹೇಳಿಕೊಂಡು ಧಾರ್ಮಿಕ ಕ್ಷೇತ್ರಗಳನ್ನು ದುರುಪಯೋಗಪಡಿಸಿಕೊಂಡು ರಾಜಕಾರಣ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೇಳಿದರು. ಪಕ್ಷದ ಕಲಹದಲ್ಲಿ ಜಾತಿ-ಧರ್ಮ ಬೇಡ: ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಅವಕಾಶ ಇರಬಾರದು. ಅದಕ್ಕೆ ಯಾರೂ ಕಾರಣ ಆಗಬಾರದು. ನಾನು ಧರ್ಮಗುರುಗಳಿಗೆ ಮನವಿ ಮಾಡುವುದು ಇಷ್ಟೇ. ಸಮಾಜದಲ್ಲಿ ಶಾಂತಿ, ನೆಮ್ಮದಿ ಮುಖ್ಯ. ಯಾವತ್ತೂ ಜಾತಿ ಮತ್ತು ಧರ್ಮ ಸಂಘರ್ಷಕ್ಕೆ ಅವಕಾಶ ನೀಡಬಾರದು. ಅದು ರಾಜ್ಯಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ ಪಕ್ಷದ ಕಲಹದಲ್ಲಿ ಜಾತಿ, ಧರ್ಮ ಎಳೆಯುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟರು.
ಜಾತಿ ರಾಜಕಾರಣದಿಂದ ದೊಡ್ಡ ನಷ್ಟ: ರಾಜ್ಯದಲ್ಲಿ ಈಗ ದೊಡ್ಡಮಟ್ಟದಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ. ಇದರಿಂದ ರಾಜಕಾರಣ ಮಾಡುವವರಿಗೆ ನಷ್ಟ ಆಗುವುದಿಲ್ಲ. ರಾಜ್ಯಕ್ಕಷ್ಟೇ ದೊಡ್ಡನಷ್ಟ ಆಗುತ್ತದೆ. ರಾಜ್ಯದಲ್ಲಿ ಸಮಾಜಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಇದರ ಅವಶ್ಯಕತೆ ಇಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಆಗುವ ಮುಜುಗರ ಅಲ್ಲ. ಕರ್ನಾಟಕದ ಜನತೆಗೆ ಆಗುವ ಮುಜುಗರ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ಈ ಸರ್ಕಾರಕ್ಕೆ ರಾಜ್ಯದ ಜನ 140 ಸ್ಥಾನ ನೀಡಿದ್ದರು. ಅಷ್ಟು ಬಹುಮತ ಕೊಟ್ಟರೂ ಜನರ ನಿರೀಕ್ಷೆ ಹುಸಿ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಇವರು ಮಾಡಿದ್ದು ಏನು? ಕುರ್ಚಿಗಾಗಿ ಕಿತ್ತಾಟ ಮಾಡುತ್ತಿದ್ದಾರೆ. ರಾಜ್ಯದ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು ಎನ್ನುವ ಪರಿಜ್ಞಾನ ಇವರಿಗೆ ಇಲ್ಲ. ನನ್ನ ಪ್ರಕಾರ ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯೇ ಇಲ್ಲ ಎಂದು ಕಿಡಿಕಾರಿದರು.
ಸಿದ್ದು ಮಾತ್ರ ಸತ್ಯಹರಿಶ್ಚಂದ್ರ!: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಬ್ಬರೇ ಸತ್ಯಹರಿಶ್ಚಂದ್ರ. ಪಾಪ, ಸತ್ಯಹರಿಶ್ಚಂದ್ರ ಕಾಡಿಗೆ ಹೋಗಬೇಕಾದರೆ ಸಿದ್ದರಾಮಯ್ಯನ ಹುಂಡಿ ಮೇಲೆ ಹೋಗಿರಬೇಕು. ಅದಕ್ಕೆ ಸಿದ್ದರಾಮಯ್ಯ ಹೀಗೆ ಹೇಳುತ್ತಿರಬಹುದು. ಅವರು ನಮ್ಮ ಪಕ್ಷದಲ್ಲೇ ಇದ್ದವರು. ಅವರು ಏನೆಂದು ನಾನು ಬಲ್ಲೆ ಎಂದು ಸಿದ್ದರಾಮಯ್ಯ ಕುರಿತ ಪ್ರಶ್ನೆಯೊಂದಕ್ಕೆ ಲೇವಡಿ ಮಾಡಿದರು.
ಬಿಹಾರದಲ್ಲಿ ಏನಾಯಿತು ಗೊತ್ತಿದೆ
2028ರ ಚುನಾವಣೆ ತುಂಬಾ ದೂರ ಇದೆ. ತೇಜಸ್ವಿ ಯಾದವ್ ಬಿಹಾರದಲ್ಲಿ ಪ್ರಮಾಣ ವಚನ ದಿನಾಂಕವನ್ನೇ ನಿಗದಿ ಮಾಡಿದ್ದರು. ಆದರೆ ಅಲ್ಲಿ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಅನಗತ್ಯವಾಗಿ ಜಾತಿ, ಧರ್ಮ ಎಳೆದುತಂದು ಜನರನ್ನು ಪರಸ್ಪರ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಇದು ಆಗಬಾರದು. ಒಕ್ಕಲಿಗ, ಕುರುಬರು ಮತ್ತು ಇತರ ಸಮಾಜದ ಸ್ವಾಮೀಜಿಗಳ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯ. ಯಾರೂ ಧರ್ಮ ಸಂಘರ್ಷ ಮಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಸಚಿವ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.


