ದಿನೇ ದಿನೇ ಬಿಜೆಪಿ ಜನಪ್ರಿಯತೆ ಕುಂದುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಆತಂರಿಕ ಕಚ್ಚಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆ ಚುನಾವಣೆ ವೇಳೆ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಹೆಜ್ಜೆ ಇಡಲಾಗಿದೆ.

ಬೆಂಗಳೂರು, (ಸೆಪ್ಟೆಂಬರ್.10): ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆ ಮಧ್ಯೆಯೇ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಕಾವು ಶುರುವಾಗಿದೆ.

ಬೆಲೆ ಏರಿಕೆ ಸೇರಿದಂತೆ ನಾನಾ ವಿಚಾರಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಜನ ಅಸಮಾಧಾನಗೊಂಡಿದ್ದಾರೆ. ಈ ಮೊದಲ ಎರಡು ಸಲ ಮೋದಿ ಮೇಲಿದ್ದ ಅಭಿಮಾನ ಈಗ ಉಳಿದಿಲ್ಲ. 

ಈ ಹಿನ್ನೆಲೆಯ್ಲಲಿ ಆಡಳಿತ ವಿರೋಧಿ ಅಲೆ ಶುರುವಾಗುತ್ತಿದೆ. ಇದರ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಆರಂಭಿಸಿದೆ. ಮತ್ತೊಂದೆಡೆ ಮುಂದಿನ ಲೋಕಸಭಾ ಚುನಾವಣಾ ವೇಳೆಗೆ ಪರ್ಯಾಯ ರಂಗ ಇನ್ನಷ್ಟ ಬಲಗೊಳಿಸಲು ಕೆಲ ನಾಯಕರು ಮುಂದಾಗಿದೆ. 

Devegowdaರ ತೃತೀಯ ರಂಗಕ್ಕೆ ಜಗದೀಶ್ ಶೆಟ್ಟರ್ ಲೇವಡಿ

ಹೌದು...ಪ್ರಾದೇಶಿಕ ಪಕ್ಷದ ನಾಯಕರು ಪರಸ್ಪರ ಭೇಟಿಯಾಗಿ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಪರವಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅಖಾಡಕ್ಕಿದಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಎನ್‌ಡಿಎ ಮೈತ್ರಿಕೂಟದಿಂದ ಆಚೆ ಬಂದಿರುವ ನಿತೀಶ್ ಕುಮಾರ್ ಅವರನ್ನು ಕಳೆದ ವಾರವಷ್ಟೇ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲೂ ಕುತೂಹಲ ಹಾಗೂ ಸಂಚಲನ ಮೂಡಿಸಿದೆ.

ಕೆಸಿಆರ್ ಭೇಟಿಯಾಗಲಿರುವ ಎಚ್‌ಡಿಕೆ
ಯೆಸ್...ಕುಮಾರಸ್ವಾಮಿ ಹಾಗೂ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಭಾನುವಾರ ಹೈದರಾಬಾದ್ ನಲ್ಲಿ ಭೇಟಿಯಾಗಲಿದ್ದಾರೆ. ಹೈದರಾಬಾದ್ ನಲ್ಲಿರುವ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸದಲ್ಲಿ ಭಾನುವಾರ ಮಧ್ಯಾಹ್ನ 1 ರಿಂದ 3 ಗಂಟೆವರೆಗೂ ಉಭಯ ನಾಯಕರ ಭೇಟಿ ನಡೆಯಲಿದೆ. ಈ ಇಬ್ಬರು ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಬಹಳ ಮಹತ್ವದ ಪಡೆದುಕೊಂಡಿದೆ.

ರಾಷ್ಟ್ರ ರಾಜಕಾರಣ ಪ್ರವೇಶಕ್ಕೆ ಕೆಸಿಆರ್ ಸಜ್ಜು

ಕಳೆದ ಮೇ ತಿಂಗಳಲ್ಲಿ ಕೆ.ಚಂದ್ರಶೇಖರ್ ರಾವ್ ಅವರು ಬೆಂಗಳೂರಿಗೆ ಆಗಮಿಸಿ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದರು.

ಅಂದು ಮಾಧ್ಯಮಗಳ ಜತೆ ಮಾತನಾಡಿದ್ದ ಉಭಯ ನಾಯಕರು, ವಿಜಯದಶಮಿ ಹೊತ್ತಿಗೆ ರಾಷ್ಟ್ರಮಟ್ಟದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವ ಸುಳಿವು ನೀಡಿದ್ದರು. ಆ ನಿಟ್ಟಿನಲ್ಲಿ ಇದೀಗ ನಾಯಕರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

ಸ್ಟಾಲಿನ್ ಭೇಟಿ ಮಾಡಲಿರುವ ಕುಮಾರಸ್ವಾಮಿ
ನಿತೀಶ್ ಕುಮಾರ್, ಚಂದ್ರಶೇಖರ್ ರಾವ್ ಭೇಟಿ ಬಳಿಕ ಕುಮಾರಸ್ವಾಮಿ ಅವರು ಮುಂದಿನ ವಾರ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಭೇಟಿ ಮಾಡಲಿದ್ದು, ಪ್ರಸಕ್ತ ರಾಷ್ಟ್ರ ರಾಜಕಾರಣದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ ಮುಖ್ಯವಾಗಿ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಪರ್ಯಾಯ ರಂಗ ಬಲಗೊಳಿಸುವ ಬಗ್ಗೆ ಉಭಯ ನಾಯಕರು ಚರ್ಚಿಸಲಿದ್ದಾರೆ ಎನ್ನಲಾಗಿದೆ.

ದಿನೇ ದಿನೇ ಬಿಜೆಪಿ ಜನಪ್ರಿಯತೆ ಕುಂದುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಆತಂರಿಕ ಕಚ್ಚಾಟ ನಡೆಯುತ್ತಿದೆ.ಇದರ ಲಾಭ ಪಡೆಯಲು ಪ್ರಾದೇಶಿಕ ಪಕ್ಷಗಳ ನಾಯಕರ ವೇದಿಕೆ ಸಜ್ಜಾದಂತಿದೆ. ದೇವೇಗೌಡರ ಸಲಹೆ ಮೇರೆಗೆ ಒಬ್ಬೊಬ್ಬ ನಾಯಕರ ಭೇಟಿ ಮಾಡುತ್ತಿರುವ ಕುಮಾರಸ್ವಾಮಿ, ಪರ್ಯಾಯ ರಂಗ ಮುನ್ನೆಲೆಗೆ ತರಲು ಪ್ರಾದೇಶಿಕ ಪಕ್ಷಗಳ ನಾಯಕರು ತಯಾರಿ ನಡೆಸಿದ್ದಾರೆ.