Asianet Suvarna News Asianet Suvarna News

ಲೋಕಸಭೆ ಚುನಾವಣೆ 2024: ಕುಮಾರಸ್ವಾಮಿಗಾಗಿ ಮಂಡ್ಯ, ಚನ್ನಪಟ್ಟಣ ಜಟಾಪಟಿ..!

ರಾಜ್ಯದಲ್ಲಿ ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ನಾನು ದೊಡ್ಡ ಮಟ್ಟದ ಹೋರಾಟ ನಡೆಸಬೇಕಿದ್ದು, ಇದಕ್ಕೆ ನೀವು ಒಪ್ಪಿಗೆ ನೀಡಬೇಕು ಎನ್ನುವ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಕುರಿತು ಕುಮಾರಸ್ವಾಮಿ ತಾವು ಸದ್ಯ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪರೋಕ್ಷ ಸಂದೇಶ ನೀಡಿದ್ದಾರೆ.

HD Kumaraswamy Likely Announce to Contest in Mandya in Lok Sabha Election 2024 grg
Author
First Published Mar 26, 2024, 4:30 AM IST

ಬೆಂಗಳೂರು(ಮಾ.26):  ಮೂರು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಸಂಬಂಧ ಇಂದು(ಮಂಗಳವಾರ) ಜೆಡಿಎಸ್ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ನಡೆಯಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದ್ದು, ಮಂಗಳವಾರ ಸಂಜೆ ಅಥವಾ ಬುಧವಾರ ಬೆಳಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

ರಾಜ್ಯದಲ್ಲಿ ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ನಾನು ದೊಡ್ಡ ಮಟ್ಟದ ಹೋರಾಟ ನಡೆಸಬೇಕಿದ್ದು, ಇದಕ್ಕೆ ನೀವು ಒಪ್ಪಿಗೆ ನೀಡಬೇಕು ಎನ್ನುವ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಕುರಿತು ಕುಮಾರಸ್ವಾಮಿ ತಾವು ಸದ್ಯ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪರೋಕ್ಷ ಸಂದೇಶ ನೀಡಿದ್ದಾರೆ.

ಬಿಜೆಪಿ ವಿರುದ್ಧ ಜೆಡಿಎಸ್‌ ಗರಂ: ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಿ ಎಂದ ಎಚ್‌ಡಿಕೆ

ಈ ನಡುವೆ ಕುಮಾರಸ್ವಾಮಿ ಅವರಿಗಾಗಿ ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ನಡುವೆ ಜಟಾಪಟಿಯೇ ನಡೆದಿದೆ. ಪರಿಣಾಮ, ಮಂಡ್ಯದಿಂದ ಸ್ಪರ್ಧಿಸುವಂತೆ ಒತ್ತಾಯಿಸಿ ಕುಮಾರಸ್ವಾಮಿ ಅವರ ನಿವಾಸದ ಬಳಿ ಮಳವಳ್ಳಿಯ ಕಾರ್ಯಕರ್ತನೊಬ್ಬ ಕೈ ಕುಯ್ದುಕೊಂಡಿದ್ದು, ಸಣ್ಣ ಪ್ರಮಾಣದ ಗಾಯವಾಗಿದೆ.

ಸೋಮವಾರ ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು ಎಂಬುದು ಮೈತ್ರಿಕೂಟದ ಗುರಿಯಾಗಿದೆ ಎಂದರು.

ನಾನು ಎದುರಿಸಿದ ಸವಾಲುಗಳನ್ನು ನೀವೇ ನೋಡಿದ್ದೀರಿ. ಚನ್ನಪಟ್ಟಣ ಕ್ಷೇತ್ರಕ್ಕೂ ನನಗೂ ತಾಯಿ- ಮಗನ ಸಂಬಂಧ. ಕ್ಷೇತ್ರದ ಜನ ನನ್ನನ್ನು ಮನೆಮಗನಂತೆ ಕಂಡಿದ್ದಾರೆ. ಕ್ಷೇತ್ರದ ಕಾರ್ಯಕರ್ತರು ಕೇಳಿದಾಗ ನಿಮ್ಮ ಜತೆ ನಿಂತಿದ್ದೇನೆ. ರಾಜ್ಯದಲ್ಲಿ ಪಕ್ಷವನ್ನು ಉಳಿಸುವ ಸಮಯ ಬಂದಿದೆ. ಇದಕ್ಕೆ ನಿಮ್ಮ ಸಹಕಾರವೂ ಬೇಕು. ಪಕ್ಷಕ್ಕಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ನನ್ನ ಜೀವ ಇರುವ ತನಕ ಚನ್ನಪಟ್ಟಣ, ರಾಮನಗರ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ತಿಳಿಸಿದರು.

ಈ ವೇಳೆ ಕೆಲವು ಕಾರ್ಯಕರ್ತರು ಚನ್ನಪಟ್ಟಣದಲ್ಲಿಯೇ ಇರಬೇಕು ಎಂದು ಕುಮಾರಸ್ವಾಮಿಯವರಿಗೆ ಎಂದು ಮನವಿ ಮಾಡಿದ್ದು, ಪಕ್ಷವನ್ನು ಬಲಪಡಿಸುವ ಅನಿವಾರ್ಯತೆಯ ಕುರಿತು ನಿಖಿಲ್ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ.

ಮಂಡ್ಯದಲ್ಲಿ ಸ್ಪರ್ಧೆಗೆ ಆಗ್ರಹಿಸಿ ಕೈ ಕುಯ್ದುಕೊಂಡ ಕಾರ್ಯಕರ್ತ:

ಚನ್ನಪಟ್ಟಣ ಕ್ಷೇತ್ರದ ಸಭೆ ಮುಗಿದು ಮುಖಂಡರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಅವರ ನಿವಾಸದಿಂದ ಹೊರಬರುತ್ತಿದ್ದಂತೆಯೇ ಮಂಡ್ಯ ಲೋಕಸಭಾ ಕ್ಷೇತ್ರದ ಕಾರ್ಯಕರ್ತರೂ ಅಲ್ಲಿಗೆ ಆಗಮಿಸಿದ್ದರು. ಈ ವೇಳೆ ಕುಮಾರಸ್ವಾಮಿ ಚನ್ನಪಟ್ಟಣ ತೊರೆಯಬಾರದು ಎಂದು ಕೆಲವರು ಘೋಷಣೆ ಕೂಗಿದರೆ, ಇನ್ನು ಕೆಲವರು ಮಂಡ್ಯದಿಂದ ಸ್ಪರ್ಧಿಸಬೇಕು ಎಂದು ಘೋಷಣೆ ಕೂಗಿದರು.

ಕರ್ನಾಟಕದಿಂದ ಹೆಚ್ಚು ಸ್ಥಾನ ಗೆದ್ದು ಮೋದಿಗೆ ಗಿಫ್ಟ್ ಕೊಡುತ್ತೇವೆ: ನಿಖಿಲ್ ಕುಮಾರಸ್ವಾಮಿ

ಇದೇ ವೇಳೆ ಮಳವಳ್ಳಿಯಿಂದ ಆಗಮಿಸಿದ್ದ ಭರತ್ ಎಂಬ ಕಾರ್ಯಕರ್ತನೊಬ್ಬ ಕುಮಾರಸ್ವಾಮಿ ಅವರು ಮಂಡ್ಯದಿಂದ ಕಣಕ್ಕಿಳಿಯಬೇಕು ಎಂದು ಆಗ್ರಹಿಸುತ್ತಲೇ ಕೈ ಕುಯ್ದುಕೊಂಡ. ತಕ್ಷಣ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನಿಗೆ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಕುಮಾರಸ್ವಾಮಿ ಅವರು ಮನೆಯೊಳಗೆ ಆತನನ್ನು ಕರೆಸಿಕೊಂಡು ಮಾತನಾಡಿ ಎಳನೀರು ಕುಡಿಸಿ ಸಮಾಧಾನಪಡಿಸಿದರು ಎಂದು ಮೂಲಗಳು ತಿ‍ಳಿಸಿವೆ.

ಪಕ್ಷ ಉಳಿಸಲು ಕಠಿಣ ನಿರ್ಧಾರ

ಚನ್ನಪಟ್ಟಣ ಕ್ಷೇತ್ರಕ್ಕೂ ನನಗೂ ತಾಯಿ- ಮಗನ ಸಂಬಂಧವಿದೆ. ಕ್ಷೇತ್ರದ ಕಾರ್ಯಕರ್ತರು ಕೇಳಿದಾಗ ಜತೆ ನಿಂತಿದ್ದೇನೆ. ರಾಜ್ಯದಲ್ಲಿ ಪಕ್ಷವನ್ನು ಉಳಿಸುವ ಸಮಯ ಬಂದಿದೆ. ಇದಕ್ಕೆ ನಿಮ್ಮ (ಕಾರ್ಯಕರ್ತರು) ಸಹಕಾರವೂ ಬೇಕು. ಪಕ್ಷಕ್ಕಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಸಂಭಾವ್ಯ ಅಭ್ಯರ್ಥಿಗಳು

ಹಾಸನ- ಪ್ರಜ್ವಲ್ ರೇವಣ್ಣ
ಮಂಡ್ಯ- ಎಚ್.ಡಿ.ಕುಮಾರಸ್ವಾಮಿ
ಕೋಲಾರ- ಮಲ್ಲೇಶ್‌ಬಾಬು

Follow Us:
Download App:
  • android
  • ios