ಬೆಂಗಳೂರು, (ಅ.20): ಕೊರೋನಾ ಲಾಕ್ ಡೌನ್ ನಿಂದ ಸಂಕಟಕ್ಕೆ ಸಿಲುಕಿದ್ದ ಚಾಲಕರಿಗೆ 5000 ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರಾಜ್ಯ ಸರ್ಕಾರ ಮಾತಿಗೆ ತಪ್ಪಿದೆ. ಇದರ ಬೆನ್ನಲ್ಲೇ ಈಗ ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವ ಆಟೋ ಚಾಲಕರು, ಕ್ಯಾಬ್ ಚಾಲಕರಿಂದ ದಂಡ ವಸೂಲಿ ನೆಪದಲ್ಲಿ ಅವರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕಳೆದ 7 ತಿಂಗಳಿಂದ ಸಂಪಾದನೆ ಇಲ್ಲದೆ ಹತಾಶರಾಗಿರುವ ರಿಕ್ಷಾ, ಕ್ಯಾಬ್ ಚಾಲಕರು ಈಗಷ್ಟೇ ರಸ್ತೆಗಿಳಿದಿದ್ದಾರೆ. ಆದರೆ ಪ್ರಯಾಣಿಕರಿಲ್ಲದೇ ಊಟಕ್ಕಾಗಿ ಪರದಾಡುತ್ತಾ ಮೂರು ಕಾಸು ಸಂಪಾದನೆಗೆ ಕಷ್ಟಪಡುತ್ತಿದ್ದಾರೆ. ಆದರೆ ಅವರಿಂದ ದಂಡದ ರೂಪದಲ್ಲಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ರಾಜಕೀಯ ಬದ್ಧ ವೈರಿ ಇದ್ದಲ್ಲಿಯೇ ಹೋಗಿ ಭೇಟಿಯಾದ ಕುಮಾರಸ್ವಾಮಿ, ರೇವಣ್ಣ

ಜಾಗೃತಿ ಮೂಡಿಸಬೇಕಾದ ಪೊಲೀಸರು ವಾಹನ ತಪಾಸಣೆ ಹೆಸರಲ್ಲಿ ಬಡ ಚಾಲಕರನ್ನು ಸುಲಿಯುತ್ತಿರುವ ನಿರ್ದಾಕ್ಷಿಣ್ಯ ವರ್ತನೆ ಸರಿಯಲ್ಲ. ದಾಖಲೆಗಳನ್ನು ತೋರಿಸಿದರೂ ಚಾಲಕರಿಂದ ದಂಡ ವಸೂಲಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಪೊಲೀಸರಿಗೆ ದಂಡ ವಸೂಲಿ ಟಾರ್ಗೆಟ್ ನೀಡಿರುವ ಕ್ರಮ ಶೋಭೆ ತರುವುದಿಲ್ಲ ಎಂದು ಗುಡುಗಿದ್ದಾರೆ.

ಚಾಲಕರನ್ನು ಸುಲಿಯುವ ಇಂತಹ ಕ್ರಮವನ್ನು ಸರ್ಕಾರ ನಿಲ್ಲಿಸಬೇಕು. ಬಡ ಚಾಲಕರ ಹಿಡಿಶಾಪ ಸರ್ಕಾರಕ್ಕೆ ತಗುಲುವ ಮುನ್ನವೇ ಸರ್ಕಾರ ಸರ್ವಾಧಿಕಾರದ ಈ ದರ್ಪವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.