ವಿಧಾನಸಭೆ ಚುನಾವಣೆ ಹಿನ್ನೆಲೆ: ಸಂಘಟನೆ ಬಲಪಡಿಸಲು ಮುಂದಾದ ಜೆಡಿಎಸ್
ಪ್ರಭುಸ್ವಾಮಿ ನಟೇಕರ್
ಬೆಂಗಳೂರು(ಜು.25): ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಬಲಪಡಿಸಲು ಮುಂದಾಗಿರುವ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬರುವ ಸ್ವಾತಂತ್ರ್ಯ ದಿನದಂದು ‘ಪಂಚರತ್ನ ರಥಯಾತ್ರೆ’ಗೆ ವಿಧ್ಯುಕ್ತವಾಗಿ ಹಸಿರು ನಿಶಾನೆ ತೋರುವ ಸಾಧ್ಯತೆ ಇದೆ.ಪ್ರಸಕ್ತ ಹಮ್ಮಿಕೊಂಡಿರುವ ಪಕ್ಷದ ಜನತಾ ಮಿತ್ರ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಪಂಚರತ್ನ ರಥಯಾತ್ರೆ ಹೆಸರಲ್ಲಿ ರಾಜ್ಯ ಪ್ರವಾಸ ಆರಂಭವಾಗಲಿದೆ. ಆ.15ರಂದು ಸ್ವಾತಂತ್ರ್ಯ ದಿನಾಚರಣೆಯಂದೇ ವಿಧ್ಯುಕ್ತವಾಗಿ ಚಾಲನೆ ನೀಡುವ ಸಾಧ್ಯತೆ ಇದ್ದು, ಸ್ಥಳಗಳನ್ನು ಜನತಾ ಮಿತ್ರ ಕಾರ್ಯಕ್ರಮದ ಬಳಿಕ ನಿಗದಿಪಡಿಸಲಾಗುತ್ತದೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸುಮಾರು ಮೂರು ತಿಂಗಳ ಕಾಲ ಪ್ರವಾಸ ಕೈಗೊಳ್ಳುವ ಉದ್ದೇಶವಿದೆ ಎಂದು ಮೂಲಗಳು ತಿಳಿಸಿವೆ.
ಗ್ರಾಮ ವಾಸ್ತವ್ಯ, ಸಂವಾದ, ಸಮಾವೇಶ:
ಪ್ರವಾಸದ ವೇಳೆ ಕುಮಾರಸ್ವಾಮಿ ಗ್ರಾಮ ವಾಸ್ತವ್ಯವನ್ನು ಸಹ ಮಾಡಲಿದ್ದಾರೆ. ಜನರೊಂದಿಗೆ ಸಂವಾದ, ಸಮಾವೇಶಗಳನ್ನು ನಡೆಸಲಾಗುತ್ತದೆ. ಈ ಮೂಲಕ ಜನರ ಭಾವನೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸಲಾಗುವುದು. ಈಗಾಗಲೇ ಜನತಾ ಮಿತ್ರದ ಮೂಲಕ ಬೆಂಗಳೂರು ನಗರದ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಅದರಂತೆಯೇ ರಾಜ್ಯ ಪ್ರವಾಸದ ವೇಳೆಯಲ್ಲಿಯೂ ಜನತೆಯ ಅಭಿಮತಗಳನ್ನು ಸಂಗ್ರಹಿಸಲು ಒತ್ತು ನೀಡಲಾಗುವುದು. ಜನರ ಅಭಿಪ್ರಾಯದ ಮೇರೆಗೆ ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುವುದು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ವಿಜಯೇಂದ್ರಗೆ ಬಿಎಸ್‌ವೈ ಶಿಕಾರಿಪುರ ತ್ಯಾಗ, ಈ ಬಗ್ಗೆ ಕುಮಾರಸ್ವಾಮಿ ಹೇಳಿದ್ದು ಹೀಗೆ
‘ಜನತಾ ಜಲಧಾರೆ ಕಾರ್ಯಕ್ರಮದ ವೇಳೆ ಜೆಡಿಎಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದೇ ರೀತಿ ಜನತಾ ಮಿತ್ರ ಕಾರ್ಯಕ್ರಮಕ್ಕೂ ದೊರಕುತ್ತಿದೆ. ಅದೇ ಹುಮ್ಮಸ್ಸಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲು ಸಿದ್ದತೆ ನಡೆಸಲಾಗುತ್ತಿದೆ. ಜನತಾಮಿತ್ರ ಕಾರ್ಯಕ್ರಮವನ್ನು ಇದೇ ತಿಂಗಳು ಮಾಡಬೇಕಾಗಿತ್ತು. ಆದರೆ, ಕುಮಾರಸ್ವಾಮಿ ಅವರ ಆರೋಗ್ಯ ಸರಿ ಇಲ್ಲದ ಕಾರಣ ಮುಂದೂಡಿಕೆ ಮಾಡಲಾಗಿದೆ. ಸಮಾರೋಪ ಸಮಾರಂಭವನ್ನು ನಗರದಲ್ಲಿ ಆಯೋಜಿಸಿ ಜೆಡಿಎಸ್ ಬೆಂಗಳೂರಿಗೆ ಜನತೆಯ ಭರವಸೆಗಳನ್ನು ಈಡೇರಿಸುವ ಕುರಿತು ಪ್ರಮಾಣ ಮಾಡಲಿದೆ’ ಎಂದು ಹೇಳಲಾಗಿದೆ.
ಹಲವರಿಗೆ ಸಿಎಂ ಆಗುವ ಆಸೆ, ಆದರೆ ಚಾಮುಂಡಿ ಇಚ್ಛೆಯೇ ಬೇರೆ: ಎಚ್‌ಡಿಕೆ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಿಯಾಗಿ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಜಾರಿ ಮಾಡಿರುವ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ಜನತೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತದೆ. ಅಲ್ಲದೇ, ಪಕ್ಷದ ಸಂಘಟನೆಗೊಳಿಸುವಲ್ಲಿಯೂ ಆದ್ಯತೆ ನೀಡಿ ಪ್ರತಿ ಜಿಲ್ಲೆಯಲ್ಲಿ ಬಲಗೊಳಿಸುವಲ್ಲಿ ರಣತಂತ್ರ ರೂಪಿಸುವಲ್ಲಿ ಜೆಡಿಎಸ್ ವರಿಷ್ಠರು ಕಾರ್ಯೋನ್ಮುಖರಾಗಿದ್ದಾರೆ ಎನ್ನಲಾಗಿದೆ.
ಏನಿದು ಪಂಚರತ್ನ?
ಉಚಿತ ಶಿಕ್ಷಣ, ಆರೋಗ್ಯ, ಯುವಜನತೆಗೆ ಸ್ವಉದ್ಯೋಗ, ರೈತರ ಉನ್ನತಿ, ವಸತಿ ಸೌಕರ್ಯ ಎಂಬ ಐದು ಅಂಶಗಳು ‘ಪಂಚರತ್ನ’ಗಳಾಗಿವೆ. ಈ ಹಿಂದೆಯೂ ಈ ಹೆಸರಲ್ಲಿ ಯಾತ್ರೆ ನಡೆದಿತ್ತು. ಮುಂದೆಯೂ ಇವುಗಳನ್ನು ಇಟ್ಟುಕೊಂಡು ಜನತೆ ಬಳಿ ಹೋಗಿ ರಾಜ್ಯಾದ್ಯಂತ ಮತ ಕೇಳಲು ಆರಂಭಿಸಲಾಗುವುದು. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ ವೈಫಲ್ಯಗಳನ್ನು ಜನರ ಮುಂದಿಡುವುದರ ಜತೆಗೆ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಕ್ಕೆ ದ್ರೋಹ ಮಾಡಿವೆ ಎಂದು ತಿಳಿಸಲು ರಣತಂತ್ರ ರೂಪಿಸಲಾಗಿದೆ.
