ಹುಬ್ಬಳ್ಳಿ[ಅ.26]: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈ ಬಾರಿ ದೀಪಾವಳಿ ಹಬ್ಬವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಜತೆ ಆಚರಿಸಲಿದ್ದಾರೆ. ಈ ಹಿಂದೆ 2009ರಲ್ಲಿ ನೆರೆ ಬಂದಾಗಲೂ ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಶೆಡ್‌ನಲ್ಲಿ ದೀಪಾವಳಿ ಆಚರಿಸಿ ಸಂತ್ರಸ್ತರಿಗೆ ಧೈರ್ಯ ತುಂಬಿದ್ದರು. ಇದೀಗ ಮತ್ತೆ ನೆರೆ ಪೀಡಿತರೊಂದಿಗೆ ದೀಪಾವಳಿ ಆಚರಿಸಲು ಮುಂದಾಗಿದ್ದಾರೆ.

ಅ.26ರಂದು ಮಧ್ಯಾಹ್ನ 3.15ಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿರುವ ಕುಮಾರಸ್ವಾಮಿ, ಸಂಜೆ ಚಿಕ್ಕೋಡಿ ತಾಲೂಕಿನ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಅಂದು ಅಲ್ಲೇ ವಾಸ್ತವ್ಯ ಮಾಡಿ ನರಕ ಚತುರ್ಥಿ ದಿನವಾದ ಭಾನುವಾರ (ಅ.27) ಕಾಗವಾಡಕ್ಕೆ ತೆರಳಲಿದ್ದಾರೆ. ಅಲ್ಲೇ ಪ್ರವಾಹ ಪೀಡಿತರೊಂದಿಗೆ ದೀಪಾವಳಿ ಆಚರಿಸುವುದರ ಜತೆಗೆ ಅವರ ಕಷ್ಟಗಳನ್ನು ಆಲಿಸಲಿದ್ದಾರೆ. ಮಧ್ಯಾಹ್ನ ಅಥಣಿ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಅಲ್ಲಿಂದ ಸಂಜೆ ಹುಬ್ಬಳ್ಳಿಗೆ ಆಗಮಿಸಿ ವಾಸ್ತವ್ಯ ಹೂಡಿ, ಅ.28ರಂದು ಹಾವೇರಿಗೆ ತೆರಳಲಿದ್ದಾರೆ. ಮಧ್ಯಾಹ್ನ 12.30ರಿಂದ ಸಂಜೆ 5.30ರ ವರೆಗೆ ಹಾವೇರಿ, ಹಿರೇಕೆರೂರು, ರಾಣಿಬೆನ್ನೂರು ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ವಿಧಾನ ಪರಿಷತ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಸೇರಿದಂತೆ ಹಲವರು ಎಚ್‌ಡಿಕೆಗೆ ಸಾಥ್‌ ನೀಡಲಿದ್ದಾರೆ.