ಕರ್ನಾಟಕದಲ್ಲಿ ಯುಪಿ ಮಾದರಿ ಬೇಕೆನ್ನುವವರಿಗೆ ಜಾಡಿಸಿದ ಕುಮಾರಸ್ವಾಮಿ
ಪ್ರವೀಣ್ ನೆಟ್ಟಾರ್ ಹತ್ಯೆ ಬಳಿಕ ಕರ್ನಾಟಕದಲ್ಲಿ ಯುಪಿ ಮಾದರಿ ಕಾನೂನು ಬೇಕೆಂಬ ಕೂಗು ಜೋರಾಗಿದೆ. ಸ್ವತಃ ಬಿಜೆಪಿ ಹಾಗೂ ಹಿಂದೂಪರ ಸಮಘಟನೆಗಳ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಇದೀಗ ಅವರು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು, (ಜುಲೈ.29): ಬುಲ್ಡೋಜರ್ ಹಾಗೂ ಯೋಗಿ ಅದಿತ್ಯನಾಥ್ ಮಾದರಿ ಕರ್ನಾಟಕದಲ್ಲಿ ಬೇಕೆನ್ನುತ್ತಿರುವ ಬಿಜೆಪಿ ಮತ್ತು ಹಿಂದೂ ಸಂಘಟನೆಕಾರರಿಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಜಾಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ರಕ್ತದಲ್ಲಿ ಜಾತಿ-ಧರ್ಮಗಳ ಗುಂಪುಗಳಿವೆಯಾ? ಅಷ್ಟು ಸರಳ ವಿಷಯ ಮುಖ್ಯಮಂತ್ರಿಗೆ ಗೊತ್ತಿಲ್ಲದಿದ್ದರೆ ಹೇಗೆ? ಅವರು ಇದ್ದಾಗಲೇ ಮಂಗಳೂರಿನಲ್ಲಿ ಇನ್ನೊಂದು ಕೊಲೆ ನಡೆಯಿತು ಎಂದರೆ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ? ವೈಫಲ್ಯ ಮುಚ್ಚಿಕೊಳ್ಳಲು ಬೊಮ್ಮಾಯಿ ಈಗ ʼಬುಲ್ಡೋಜರ್ʼ ಜಪ ಮಾಡುತ್ತಿದ್ದಾರೆ. ʼಯೋಗಿ ಅದಿತ್ಯನಾಥ್ ಮಾದರಿʼ ಎನ್ನುತ್ತಿದ್ದಾರೆ. ಉತ್ತರ ಪ್ರದೇಶದ ಎನ್ನುವುದು ಕರ್ನಾಟಕಕ್ಕೆ ಮಾತ್ರವಲ್ಲ, ಯಾರಿಗೂ ಮಾದರಿ ಅಲ್ಲ. ಸಹಜ ನ್ಯಾಯ, ಸಂವಿಧಾನಕ್ಕೆ ವಿರುದ್ಧದ ಉತ್ತರಪ್ರದೇಶದ ಆಡಳಿತವನ್ನು ಮಾದರಿ ಅನುಕರಣೆ ಎನ್ನುವುದು ಹೊಣೆಗೇಡಿತನದ ಪರಮಾವಧಿ ಎಂದು ಕಟುವಾಗಿ ಟೀಕಿಸಿದ್ದಾರೆ.
ಸರಣಿ ಹತ್ಯೆಗಳಿಗೂ, ಸಂಘ ಪರಿವಾರದೊಳಗಿನ ಆಂತರಿಕ ಬಿಕ್ಕಟ್ಟುಗಳಿಗೂ ಸಂಬಂಧ: ಸಿದ್ದು ಅನುಮಾನ
ಸಂವಿಧಾನದ ಮೇಲೆ ಗೌರವ ಇಲ್ಲದವರು ʼಬುಲ್ಡೋಜರ್ʼ ಬಗ್ಗೆ ಮಾತನಾಡುತ್ತಾರೆ. ದಕ್ಷತೆ ಇಲ್ಲದವರು ಅಕ್ಕಪಕ್ಕದ ಮಾದರಿಗಳನ್ನು ಹುಡುಕುತ್ತಾರೆ. ಜನತಾ ಪರಿವಾರಿ ಆಗಿದ್ದವರು ಈಗ ಸಂಘ ಪರಿವಾರಿಯಾಗಿ ರೂಪಾಂತರಗೊಂಡು ಉತ್ತರ ಪ್ರದೇಶದ ಮಾದರಿ ಹೆಸರಿನಲ್ಲಿ ರಾಜ್ಯಕ್ಕೆ ʼಹೊಸ ಮಾರಿʼಯನ್ನು ತರಲು ಹೊರಟಿದ್ದಾರೆ. ಇದು ಬೇಕಿಲ್ಲ. ಎಂ.ಎನ್.ರಾಯ್ ಅವರ ಅನುಯಾಯಿ, ಜನತಾ ಪರಿವಾರದ ರಾಯಿಸ್ಟ್ ಎಂದೇ ಖ್ಯಾತರಾಗಿದ್ದ ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಈಗ ಸಂವಿಧಾನ ವಿರೋಧಿಯಾದ ಬುಲ್ಡೋಜರ್ ಮಾದರಿ ಮಾತನಾಡುತ್ತಿರುವುದು ನನಗೆ ಅತೀವ ಆಘಾತ ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಧರ್ಮ ಪಾಲಿಸಿ ಎಂದು ಹಿಂದೊಮ್ಮೆ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ರಾಜಧರ್ಮ ಪಾಲಿಸುವುದಿರಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಧರ್ಮವೇ ಹೇಳಿದ ʼಸರ್ವೇ ಜನೋ ಸುಖಿನೋ ಭವಂತುʼ ಎನ್ನುವ ತತ್ತ್ವವನ್ನೂ ಪಾಲಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಇದೇನಾ ನೀವು ಹಿಂದೂ ಧರ್ಮ ಕಾಪಾಡೋದು?: ಬಿಜೆಪಿ ಸರ್ಕಾರದ ವಿರುದ್ಧ ಎಚ್‌ಡಿಕೆ ಗರಂ
ಬೊಮ್ಮಾಯಿ ಅವರು ಇಡೀ ಕರ್ನಾಟಕದ ಮುಖ್ಯಮಂತ್ರಿ. ಕೇವಲ ಬಿಜೆಪಿಗಷ್ಟೇ ಅಲ್ಲ. ನಿನ್ನೆಯ ದಿನ ಅವರು ಮಸೂದ್ ಮತ್ತು ಪ್ರವೀಣ್ ನಿಟ್ಟಾರು ಹತ್ಯೆಯಾದ ಬೆಳ್ಳಾರೆ ಗ್ರಾಮಕ್ಕೆ ಭೇಟಿ ನೀಡಿದಾಗ ಸಂವಿಧಾನದತ್ತವಾಗಿ ಸ್ವೀಕರಿಸಿದ ಪ್ರಮಾಣ ವಚನದ ಪಾವಿತ್ರ್ಯತೆಗೆ ಚ್ಯುತಿ ತಂದಿದ್ದಾರೆ. ಕೊಲೆಗೆ ಕೊಲೆಯೇ ಉತ್ತರವಲ್ಲ. ಪ್ರತೀಕಾರಕ್ಕೆ ಪ್ರತೀಕಾರ ಪ್ರತ್ಯುತ್ತರವಲ್ಲ. ಮುಖ್ಯಮಂತ್ರಿ ನಡೆ ಹಿಂಸೆಯನ್ನು ಪ್ರಚೋದಿಸುವಂತಿದೆ. ಕೊಲೆಯಾದ ಇಬ್ಬರೂ ಯುವಕರ ಮನೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಕೊಲೆಗೆಡುಕರಿಗೆ ಕಠಿಣ ಸಂದೇಶ ರವಾನಿಸಬೇಕಿತ್ತು. ಹಾಗೆ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.