ಬೆಂಗಳೂರು, (ಡಿ.07): ಇಂದಿನಿಂದ (ಸೋಮವಾರ) ವಿಧಾನಸಭಾ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಗೈರಾಗಿ ಕಾಂಗ್ರೆಸ್‌ ಹಿರಿಯ ನಾಯಕ ಸಿ.ಎಂ ಇಬ್ರಾಹಿಂ ಭೇಟಿ ಮಾಡಿದ್ದಾರೆ.

ಕುಮಾರಸ್ವಾಮಿ ಅವರು ಸಿ.ಎಂ.ಇಬ್ರಾಹಿಂ ಅವರನ್ನ ಭೇಟಿ ಮಾಡಿ ಪಕ್ಷಕ್ಕೆ ಮರಳುವಂತೆ ಆಹ್ವಾನ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಇನ್ನು ಇಬ್ರಾಹಿಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ದೇವೇಗೌಡರ ಸೆಕ್ಯುಲರ್ ಸಿದ್ದಾಂತವನ್ನ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಹೀಗೆ ಮಾತಾಡಬಾರದು. ನಾನು ಏಕಾಂಗಿ ಹೋರಾಟ ಮಾಡುತ್ತೇನೆ. ಸಿದ್ದರಾಮಯ್ಯಗೆ ಸವಾಲು ಹಾಕುತ್ತೇನೆ. ಕಾಂಗ್ರೆಸ್ ನಿಂದ ಹೊರ ಬಂದು ಏಕಾಂಗಿಯಾಗಿ ಚುನಾಬಣೆ ಎದುರಿಸಿ 4 ಸ್ಥಾನ ಗೆಲ್ಲಲಿ ನೋಡೊಣ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

ಕಾಂಗ್ರೆಸ್‌ ಹಿರಿಯ ನಾಯಕನನ್ನು ಭೇಟಿಯಾದ ಕುಮಾರಸ್ವಾಮಿ, ಜೆಡಿಎಸ್‌ಗೆ‌ ಆಹ್ವಾನ..! 

ಇಬ್ರಾಹಿಂ ಕುಟುಂಬದ ಹಿರಿಯ ಸದಸ್ಯರು
ನಾವು ರಾಜಕಾರಣಕ್ಕೆ ಬರುವ ಮುನ್ನ ದೇವೇಗೌಡರ ಜೊತೆ ಇಬ್ರಾಹಿಂ ಇದ್ದರು. ಅವರು ಯಾವುದೆ ಪಕ್ಷದಲ್ಲಿ ಇದ್ದರು ನಮ್ಮ ಕುಟುಂಬದ ಹಿರಿಯ ಸದಸ್ಯರು. 2004 ರಲ್ಲಿ ನಮ್ಮಿಂದ ದೂರ ಆದರು ಆತ್ಮಿಯ ಸಂಬಂಧ ಇತ್ತು. ಕಾಂಗ್ರೆಸ್ ಹಾಗೂ ಅವರ ಸ್ನೇಹಿತರು ಹೇಗೆ ನಡೆಸಿಕೊಂಡಿದ್ದಾರೆ ಅಂತ ಎಲ್ಲರಿಗು ಗೊತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

1994ರ ರೀತಿ ಅವರು ಮತ್ತೆ ಪ್ರಮುಖ ಪಾತ್ರ ನಿರ್ವಹಿಸಲು ಹಳೆ ಮನೆಗೆ ಬನ್ನಿ ಅಂತ ಮನವಿ ಮಾಡಿದ್ದೇನೆ.  ಸೂಕ್ತ ಸಂದರ್ಭದಲ್ಲಿ ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.

ಸಿಎಂ ಇಬ್ರಾಹಿಂ ಕೊಡುಗೆಯಾದರೂ ಇದೆ.  ನನ್ನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕೊಡುಗೆ ಏನು..? ಇಬ್ರಾಹಿಂ ನಮ್ಮ ಸ್ನೇಹಿತರಲ್ಲ ನಮ್ಮ‌ ಕುಟುಂಬದ ಹಿರಿಯ ಸಹೋದರ ಇದ್ದಂತೆ. ರಾಜಕೀಯ ವಿಚಾರವನ್ನ ಚರ್ಚೆ ಮಾಡಲು ಇಲ್ಲಿಗೆ ಬಂದಿದ್ದೆ ಎಂದು ಒಪ್ಪಿಕೊಂಡರು.

 ನಾನಿದ್ದಾಗ 58 ಸ್ಥಾನ ಇತ್ತು ಆಮಲೆ 28 ಸ್ಥಾನಕ್ಕೆ ಬಂತು ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಅವರೊಬ್ಬರೆ ಅಲ್ಲಾ ಸಿಂಧ್ಯಾ, ಎಂಪಿ ಪ್ರಕಾಶ್ ,ಸಿಎಂ ಇಬ್ರಾಹಿಂ ಎಲ್ಲರು ಇದ್ದರು. ಅವರನ್ನ ಯಾವ ರೀತಿ ಬಳಕೆ ಮಾಡಿದರು. ಅವರಿಗೆ ಸಿಕ್ಕ ಸ್ಥಾನ ಏನು..? ನಾವು ಅವರ ಗುಲಾಮರಲ್ಲ. ಸಿದ್ದರಾಮಯ್ಯಗೆ ಸಂಸ್ಕೃತಿ ಇದೆಯಾ ಸೌಜನ್ಯ ಇದೆಯ..? ಎಂದು ಪ್ರಶ್ನಿಸಿದರು.