ಸರ್ವಪಕ್ಷಗಳ ಸಭೆಯಲ್ಲಿ ಲಾಕ್‌ಡೌನ್ ಸಲಹೆ ಕೊಟ್ಟಿದ್ದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈಗ ಅಘೋಷಿತ ಲಾಕ್ ಡೌನ್‍ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, (ಏ.22): ಕೊರೋನಾ ನಿಯಮಗಳಲ್ಲಿ ದಿಢೀರ್‍ ಬದಲಾವಣೆ ಮಾಡಿ ಅಘೋಷಿತ ಲಾಕ್ ಡೌನ್‍ಗೆ ಸೂಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.

ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಎಲ್ಲವನ್ನೂ ಬಂದ್ ಮಾಡಿ ಆದೇಶ ಹೊರಡಿಸಿರುವುದು ತುಘ್ಲಕ್ ದರ್ಬಾರದಂತಿದೆ. ಸರ್ಕಾರದ ಈ ಹೊಸ ನಿಯಮಗಳು ಜನ ಸಾಮಾನ್ಯರನ್ನು, ಬಡವರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಕಿಡಿಕಾರಿದರು. 

ದಿಢೀರ್ ಮಾರ್ಗಸೂಚಿ ಬದಲಾವಣೆ: ಕರ್ನಾಟಕ ಭಾಗಶಃ ಲಾಕ್

 ಜನರ ಜೀವನದ ಜೊತೆ ಚೆಲ್ಲಾಟವಾಡಬೇಡಿ, ಯಾರನ್ನೋ ಮೆಚ್ಚಿಸಲು ಇಂತಹ ದೂರದೃಷ್ಟಿಯಿಲ್ಲದ ಕ್ರಮ ಕೈಗೊಳ್ಳಬೇಡಿ. ಪ್ರತಿ ಕುಟುಂಬಕ್ಕೆ ಆರೋಗ್ಯದ ರಕ್ಷಣೆಗೆ ಮುಂದಾಗಿ ಎಂದು ಒತ್ತಾಯಿಸಿದ್ದಾರೆ.

ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಲಾಕ್ ಡೌನ್ ಘೋಷಿಸುವಂತೆ ನಾನು ಸರ್ಕಾರಕ್ಕೆ ಸಲಹೆ ನೀಡಿದ್ದೆ. ಅಂದು ನನ್ನ ಸಲಹೆಯನ್ನು ತಳ್ಳಿ ಹಾಕಲಾಗಿತ್ತು. ಆದರೆ, ಇಂದು ಏಕಾಏಕಿ ನಿಯಮಗಳನ್ನು ಬದಲಿಸಿ, ಪೊಲೀಸ್ ಅಧಿಕಾರಿಗಳ ಮೂಲಕ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ ದೌರ್ಜನ್ಯ ಎಸಗಿದ್ದಾರೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.