ಬಿಜೆಪಿ ನೀಡಿದ್ದ 'ಘರ್ ವಾಪ್ಸಿ ಜಗದೀಶ್ ಶೆಟ್ಟರ್' ಸೀಕ್ರೆಟ್ ಟಾಸ್ಕ್ ಕಂಪ್ಲೀಟ್ ಮಾಡಿದ್ರಾ ಹೆಚ್.ಡಿ.ಕುಮಾರಸ್ವಾಮಿ!
ಬಿಜೆಪಿ ಹೈಕಮಾಂಡ್ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನೀಡಲಾಗಿದ್ದ 'ಘರ್ ವಾಪ್ಸಿ ಜಗದೀಶ್ ಶೆಟ್ಟರ್' ಸೀಕ್ರೇಟ್ ಮೈತ್ರಿ ಟಾಸ್ಕ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಬೆಂಗಳೂರು (ಜ.25): ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಎನ್‌ಡಿಎ ಕೂಟವನ್ನು ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದ್ದರು. ಕಾಂಗ್ರೆಸ್ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಅವರನ್ನು ಮರಳಿ ಘರ್ ವಾಪ್ಸಿ ಆಪರೇಷನ್ ಮಾಡುವಂತೆ ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿ ಅವರಿಗೆ ಸೀಕ್ರೆಟ್ ಟಾಸ್ಕ್ ನೀಡಲಾಗಿದ್ದು, ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.
ದೇಶದಲ್ಲಿ ಲೋಸಭಾ ಚುನಾವಣೆಗೂ ಮುನ್ನವೇ ಜೆಡಿಎಸ್-ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದರ ಬೆನ್ನಲ್ಲಿಯೇ ಜಗದೀಶ್ ಶೆಟ್ಟರ್ ಬಿಜೆಪಿಯನ್ನು ಮರು ಸೇರ್ಪಡೆ ಮಾಡುವ ಕಾರ್ಯಾಚರಣೆಗೆ ಕುಮಾರಸ್ವಾಮಿ ಸಾರಥ್ಯವನ್ನು ನೀಡಿ ಸೀಕ್ರೆಟ್ ಟಾಸ್ಕ್ ನೀಡಲಾಗಿತ್ತು ಎಂಬ ಮಾತು ಕೇಳಿಬರುತ್ತಿದೆ. ಆದ್ದರಿಂದ ಬಿಜೆಪಿ ಹೈ ಕಮಾಂಡ್ ಕೊಟ್ಟಿದ್ದ ಟಾಸ್ಕ್ ಅನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ಯಶಸ್ವಿಯಾಗಿ ಕಂಪ್ಲೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಘರ್ ವಾಪ್ಸಿ ಯಶಸ್ವಿ: ಅಮಿತ್ ಶಾ ಜೊತೆಗೆ ಮಾತುಕತೆ ಬಳಿಕ ಬಿಜೆಪಿ ಬುಟ್ಟಿಗೆ ಬಿದ್ದ ಜಗದೀಶ್ ಶೆಟ್ಟರ್
ಕಳೆದ ಎರಡು ದಿನಗಳಿಂದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಎಂಎಲ್‌ಸಿ ಜಗದೀಶ್ ಶೆಟ್ಟರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದರಂತೆ. ಇನ್ನು ಕುಮಾರಸ್ವಾಮಿ ಅವರು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಮುಗಿಸಿ ವಾಪಸ್ ಬರುತ್ತಿದ್ದಂತೆ ಘರ್ ವಾಪ್ಸಿ ಕಾರ್ಯಾಚರಣೆ ಶುರು ಮಾಡಿದ್ದರು. ನಿನ್ನೆ ಜಗದೀಶ್ ಶೆಟ್ಟರ್ ಭೇಟಿ ಮಾಡಿ ಮಾತುಕತೆ ನಡೆಸಿ, ಕೇಂದ್ರದ ನಾಯಕರ ಸಂದೇಶವನ್ನು ಶೆಟ್ಟರ್ ಅವರಿಗೆ ಮನವರಿಕೆ ಮಾಡಿ ಕೊಟ್ಟಿದ್ದರು.
ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜಗದೀಶ್ ಶೆಟ್ಟರ್ ಭೇಟಿಯ ಫಲವಾಗಿ ಇಂದು ಬೆಳಗ್ಗೆ ಶೆಟ್ಟರ್ ಅವರು ದೆಹಲಿಗೆ ತೆರಳಿದ್ದಾರೆ. ಅಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಬಿಜೆಪಿ ಸೇರ್ಪಡೆ ಮಾತುಕತೆ ಅಂತಿಮಗೊಳಿಸಿದ್ದಾರೆ. ಅದರ ನಂತರ ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮರಳಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮೈತ್ರಿ ಪಕ್ಷದ ನಾಯಕನಿಗೆ ಬಿಜೆಪಿ ಕೊಟ್ಟ ಸೀಕ್ರೆಟ್ ಟಾಸ್ಕ್ ಕಂಪ್ಲೀಟ್ ಆಗಿದೆ ಎಂದು ಹೇಳಲಾಗುತ್ತಿದೆ.
ದೇಶದ ರಕ್ಷಣೆಗಾಗಿ ಮೋದಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಬಿಜೆಪಿ ಸೇರಿದ್ದೇನೆಂದ ಜಗದೀಶ್ ಶೆಟ್ಟರ್!
ನಾನು ಕಾಂಗ್ರೆಸ್‌ಗೆ ಸೇರ್ಪಡೆ ಆದಾಗಿನಿಂದಲೂ ಈವರೆಗೆ 9 ತಿಂಗಳು ನಿರಂತರವಾಗಿ ನಮ್ಮ ಕಾರ್ಯಕರ್ತರು, ಬಿಜೆಪಿ ನಾಯಕರು ನಾನು ಮರಳಿ ಬಿಜೆಪಿ ಸೇರುವ ಅಪೇಕ್ಷೆ ಇಟ್ಟುಕೊಂಡಿದ್ದರು. ಜೊತೆಗೆ ಇದು ಬಿಜೆಪಿ ರಾಷ್ಟ್ರೀಯ ನಾಯಕರ ಆಪೇಕ್ಷೆಯೂ ಆಗಿತ್ತು. ಈ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ಮಾಡಿದಾಗ ಅವರು ಕೂಡ ಸಂತಸದಿಂದ ಸ್ವಾಗತ ಮಾಡಿ ಬಿಜೆಪಿ ಸೇರ್ಪಡೆಗೆ ಪ್ರೋತ್ಸಾಹಿಸಿದರು. ಈಗ ಬಿಜೆಪಿ ಗೆ ಸೇರಿದ್ದು ಸಂತೋಷ ಆಗಿದೆ. ಇವತ್ತು ದೇಶದ ಮುಂದೆ ಸವಾಲಾಗಿರುವುದು ದೇಶದ ರಕ್ಷಣೆ ಮುಖ್ಯವಾಗಿದೆ. ಆದ್ದರಿಂದ ಪ್ರಧಾನಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ಬಿಜೆಪಿ ಸೇರ್ಪಡೆಯಾಗಿದ್ದೇನೆ.
- ಜಗದೀಶ್ ಶೆಟ್ಟರ್, ಮಾಜಿ ಸಿಎಂ