- ನೀರಾವರಿ ಯೋಜನೆ ಜಾರಿಯಲ್ಲಿ ನಮ್ಮದು ನುಡಿದಂತೆ ನಡೆ- ನಡೆಯದಿದ್ದರೆ ಇನ್ನೆಂದೂ ಮತ ಕೇಳಲು ಜನರ ಬಳಿ ಹೋಗಲ್ಲ- 123 ಸೀಟು ಗೆಲ್ಲುವ ಗುರಿ, ಫೀನಿಕ್ಸ್‌ನಂತೆ ಎದ್ದು ಬರುವ ಛಲ

ಬೆಂಗಳೂರು(ಮೇ.14): ಜೆಡಿಎಸ್‌ ಪಕ್ಷದ ಮಹತ್ವಾಕಾಂಕ್ಷೆ ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬರುವ ಜೂನ್‌-ಜುಲೈ ತಿಂಗಳಲ್ಲಿ ಮತ್ತೊಂದು ರಥಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

ಅಲ್ಲದೆ, ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ನುಡಿದಂತೆ ನಡೆಯದಿದ್ದರೆ ಯಾವುದೇ ಕಾರಣಕ್ಕೂ ಜೆಡಿಎಸ್‌ ಪಕ್ಷ ಜನರ ಮುಂದೆ ಮತ ಕೇಳಲು ಬರುವುದಿಲ್ಲ ಎಂದೂ ಅವರು ವಾಗ್ದಾನ ಮಾಡಿದ್ದಾರೆ.

ಜೆಡಿಎಸ್‌ಗೆ ಅಧಿಕಾರ ಸಿಕ್ಕರೆ ಕರ್ನಾಟಕದ ಚಿತ್ರಣವೇ ಬದಲು: ಕುಮಾರಸ್ವಾಮಿ

ಶುಕ್ರವಾರ ನೆಲಮಂಗಲ ಬಳಿಯ ಬೃಹತ್‌ ಮೈದಾನದಲ್ಲಿ ಆಯೋಜಿಸಿದ ಜನತಾ ಜಲಧಾರೆ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಜನರ ಸಮಸ್ಯೆಗೆ ಪರಿಹಾರ ರೂಪಿಸುವ ಕೆಲಸ ಮಾಡಲಾಗುವುದು. ರಾಜ್ಯದ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ನಾಡಿನ ಬಡವರ ಬದುಕು ಕಟ್ಟಲು ಶ್ರಮಿಸುತ್ತೇನೆ. ಜೂನ್‌-ಜುಲೈ ತಿಂಗಳಲ್ಲಿ ಮತ್ತೊಂದು ರಥಯಾತ್ರೆ ಕೈಗೊಂಡು ಮೂರು ತಿಂಗಳ ಕಾಲ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. 224 ಕ್ಷೇತ್ರಗಳಿಗೆ ಖುದ್ದು ನಾನೇ ಭೇಟಿ ನೀಡಿ ಜನತೆಗೆ ಪಕ್ಷದ ತೀರ್ಮಾನಗಳನ್ನು ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಜನರ ಹೃದಯದಲ್ಲಿ ಸ್ಥಾನ ಪಡೆಯಬೇಕೆಂಬ ಹಂಬಲ ಹೊಂದಿದ್ದು, ಅದೇ ನನ್ನ ಆಸ್ತಿ ಎಂಬುದಾಗಿ ಭಾವಿಸಿದ್ದೇನೆ. ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಯ ಜತೆಗೆ ರೈತರು ಸಾಲಗಾರರಾಗದಂತೆ ಬದುಕು ನಿರ್ವಹಣೆ ಮಾಡಲು, ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವುದು, ಪ್ರತಿ ಕುಟುಂಬಕ್ಕೆ ವಸತಿ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ. ಇದಕ್ಕೆ ಜನರ ಆರ್ಶೀವಾದ ಬೇಕು. ಮುಂದಿನ ಎಂಟು ತಿಂಗಳು ನನಗೆ ಸಹಕಾರ ನೀಡಿದರೆ 123 ಗುರಿಯನ್ನು ಮುಟ್ಟುತ್ತೇವೆ. ದಲಿತ, ಕುರುಬ ಸೇರಿದಂತೆ ಎಲ್ಲಾ ಹಿಂದುಳಿದ ವರ್ಗ, ಮುಸ್ಲಿಂ, ಕ್ರೈಸ್ತ ಹಾಗೂ ಇತರೆ ಎಲ್ಲಾ ಸಮಾಜದವರ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸುವ ಕೆಲಸ ಮಾಡಲಾಗುವುದು. ಶಾಶ್ವತವಾಗಿ ಶಾಂತಿಯುತ ಬದುಕುವಂತಹ ಪರಿಸ್ಥಿತಿ ನಿರ್ಮಿಸಲಾಗುವುದು. ಜನಪರ ಸರ್ಕಾರ ತರುವ ಸವಾಲು ಇಟ್ಟುಕೊಂಡು ಮತದಾರರ ಬಳಿ ಹೋಗುತ್ತೇನೆ. ಒಂದು ವೇಳೆ ನೀಡಿರುವ ಮಾತಿನಂತೆ ನಡೆದುಕೊಳ್ಳದಿದ್ದರೆ ಪಕ್ಷವು ಮತ್ತೆ ಜನರ ಬಳಿ ಹೋಗಿ ಮತ ಕೇಳುವುದಿಲ್ಲ ಎಂದು ತಿಳಿಸಿದರು.

ಬೆಂಗ್ಳೂರಿನ ಜಲಮೂಲ ರಕ್ಷಣೆಗೆ ಜೆಡಿಎಸ್‌ ಬದ್ಧ: ಕುಮಾರಸ್ವಾಮಿ

ಫೀನಿಕ್ಸ್‌ನಂತೆ ಹೊರಟಿದ್ದೇನೆ:
ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪ್ರಧಾನಿ ಹುದ್ದೆ ತ್ಯಜಿಸಿ ಬರುವಾಗ ಮತ್ತೆ ಫಿನಿಕ್ಸ್‌ನಂತೆ ಬರುವುದಾಗಿ ಹೇಳಿದ್ದರು. ಅದರಂತೆ ನಾನು ಅವರ ಅಶಯಗಳನ್ನು ಈಡೇರಿಸಲು ಫಿನಿಕ್ಸ್‌ನಂತೆ ಹೊರಟಿದ್ದೇನೆ. ದೇವೇಗೌಡ ಅವರು 24ರ ವಯಸ್ಸಿನಲ್ಲಿ ವಿಧಾನಸೌಧಕ್ಕೆ ಪ್ರವೇಶಿಸಿದಾಗ ಕಾವೇರಿ ನೀರಿನ ವಿಚಾರದಲ್ಲಿ ಪರಿಣಾಮಕಾರಿ ಚರ್ಚೆ ನಡೆಸಿದರು. ಕಾವೇರಿ ನೀರು ಉಳುವಿಗಾಗಿ ಖಾಸಗಿ ನಿರ್ಣಯ ತಂದರು. ರಾಷ್ಟ್ರೀಯ ಪಕ್ಷದಲ್ಲಿ ಬೆಳೆಯದಿದ್ದರೂ ಕೆಂಪುಕೋಟೆಯ ಮೇಲೆ ಬಾವುಟ ಹಾರಿಸುವ ಶಕ್ತಿ ಪ್ರದರ್ಶಿಸಿದರು ಎಂದು ಹೇಳಿದ ಅವರು, ಮೈಸೂರು ಜಿಲ್ಲೆಯಲ್ಲಿ ಒಂದು ಸ್ಥಾನವೂ ಬರಲಿಲ್ಲ ಎಂದು ಕೆಲವು ಹೇಳಿದ್ದರು. ನಮ್ಮ ಪಕ್ಷದಿಂದ ಬೆಳೆದವರಿಗೆ ಸಮಾವೇಶವೇ ಉತ್ತರ ನೀಡಿದೆ. ಮುಂದಿನ ಚುನಾವಣೆಯಲ್ಲಿಯೂ ಜನರು ಆರ್ಶೀವದಿಸಬೇಕು ಎಂದು ಮನವಿ ಮಾಡಿದರು.

ನಾನು ಎರಡು ಮುಖ್ಯಮಂತ್ರಿಯಾಗಿದ್ದೇನೆ. ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬುದಕ್ಕೆ ಜೆಡಿಎಸ್‌ ಅಧಿಕಾರಕ್ಕೆ ತರುವಂತೆ ಕೇಳುತ್ತಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾದರೂ ಸಂಪೂರ್ಣ ಅಧಿಕಾರ ಇರಲಿಲ್ಲ. ರಾಜಕೀಯ ಬೆಳವಣಿಗೆಯಿಂದಾಗಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ. ಯಾವುದೇ ಕಾರ್ಯಕ್ರಮಗಳನ್ನು ಸ್ವತಂತ್ರವಾಗಿ ನೀಡಲು ಅಧಿಕಾರ ಇರಲಿಲ್ಲ. ರೈತರ ಸಾಲ ಮನ್ನಾ ಮಾಡಲು ಎಷ್ಟುನೋವು ಅನುಭವಿಸಿದ್ದೆ ಎಂಬುದು ನನಗೆ ಗೊತ್ತು. ನನ್ನ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ಬಂದು ಕೋವಿಡ್‌ನಲ್ಲಿ ಸಂಭವಿಸಿದ ಸಾವುಗಳಿಗೆ ಐದು ಲಕ್ಷ ರು. ನೀಡುವುದಾಗಿ ಹೇಳಿತ್ತು. ಆದರೆ, ಕೇವಲ ಘೋಷಣೆಯಾಗಿದ್ದು, ಹಣ ನೀಡಿಲ್ಲ. ಶೋಷಿತರ ನೋವು ಗೊತ್ತಿದೆ. ಕಿರುಚಿತ್ರ ಇಟ್ಟುಕೊಂಡು ಅನುಕಂಪಗಿಟ್ಟಿಸಿ ಅಧಿಕಾರ ಪಡೆಯುವ ಉದ್ದೇಶ ಇಲ್ಲ. ಪಂಚರತ್ನ, ನೀರಾವರಿ ಕಾರ್ಯಕ್ರಮಗಳನ್ನು ರೂಪಿಸಿರುವುದು ಹುಡುಗಾಟಿಕೆಗೆ ಅಲ್ಲ ಎಂದು ಹೇಳಿದರು.

ಯಾರಿಗೂ ಹೆದರಬೇಕಾಗಿಲ್ಲ: ಎಚ್‌ಡಿಕೆ ಅಭಯ
ಕುಟುಂಬ ರಾಜಕಾರಣದ ಬಗ್ಗೆ ಟೀಕಿಸುವವರಿಗೆ ಕುಟುಂಬದ ಸದಸ್ಯರು ಹೆದರಬೇಕಾಗಿಲ್ಲ. ಜನರ ಕಷ್ಟಸುಖದಲ್ಲಿ ಭಾಗಿಯಾಗಿ ಹೃದಯದಿಂದ ಕೆಲಸ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಪ್ರಜ್ವಲ್‌, ನಿಖಿಲ್‌ ಮತ್ತು ಸೂರಜ್‌ ಅವರು ರಾಜಕೀಯಕ್ಕೆ ಬನ್ನಿ ಎಂದು ಕರೆದಿರಲಿಲ್ಲ. ಯಾವುದೋ ಒತ್ತಡಕ್ಕೆ ಬಂದಿದ್ದಾರೆ. ಅವರು ಯಾರಿಗೂ ಹೆದರಬೇಕಾಗಿಲ್ಲ. ಇವರ ಜತೆ ಶರಣಗೌಡ, ಮಂಜುನಾಥ್‌ ಸೇರಿದಂತೆ ಹಲವರು ಇದ್ದಾರೆ. ಎಲ್ಲರೂ ಹೃದಯದಿಂದ ಬಡವರ ಕೆಲಸ ಮಾಡಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದರೆ, ನಿಮ್ಮ ನಡವಳಿಕೆಯನ್ನು ಗಮನಿಸಿ ಜನರು ಎತ್ತಿಕೊಳ್ಳುತ್ತಾರೆ ಎಂದು ಹೇಳಿದರು.

ದೇವೇಗೌಡರ ದುಡಿಮೆ ಮತ್ತು ಶ್ರಮ ನನಗೆ ವರ್ಗಾವಣೆಯಾಗಿದೆ. ಪ್ರಾಮಾಣಿಕವಾಗಿ ಜನರಿಗೆ ಸ್ಪಂದಿಸಿದರೆ ಅವರ ಹೃದಯದಲ್ಲಿ ಸ್ಥಾನ ನೀಡುತ್ತಾರೆ ಎಂಬುದಕ್ಕೆ ನಾನೇ ಸಾಕ್ಷಿ. ಯುವಕರು ಪ್ರತಿಭೆ ಇಲ್ಲ ಎಂದು ಕೊಳ್ಳಬಾರದು. ದುಡಿಮೆಯ ಮೇಲೆ ನಾಯಕರಾಗುತ್ತೀರಿ. ಯುವಘಟಕದ ವತಿಯಿಂದ ಎಲ್ಲರೂ ಸೇರಿಕೊಂಡು ಕಲಬುರಗಿಯಲ್ಲೋ ಅಥವಾ ಬೆಳಗಾವಿಯಲ್ಲೋ ಒಂದು ಲಕ್ಷ ಜನರನ್ನು ಸೇರಿಸಿ ಕಾರ್ಯಕ್ರಮವೊಂದನ್ನು ಮಾಡುವ ತೀರ್ಮಾನ ಮಾಡಬೇಕು ಎಂದರು.