ಬೆಂಗಳೂರು(ಜ.11): ಮಹಾಘಟಬಂಧನ್ ಜೊತೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಹೇಳಿದ ಬೆನ್ನಲ್ಲೇ, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ ಬಿಜೆಡಿ ಸಂಸದರೊಂದಿಗೆ ಮಾತುಕತೆ ನಡೆಸಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ ಪ್ರಾದೇಶಿಕ ಪಕ್ಷಗಳ ಒಕ್ಕೂಟ ರಚನೆಗೆ ಕೆಲವು ಪ್ರಾದೇಶಿಕ ನಾಯಕರು ಕಸರತ್ತು ನಡೆಸಿದ್ದಾರೆ. ಪ್ರಮುಖವಾಗಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಈಗಾಗಲೇ ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಪ್ರಮುಖ ಪ್ರಾದೇಶಿಕ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಇನ್ನು ಕರ್ನಾಟಕದ ಪ್ರಮುಖ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಸದ್ಯ ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ನಡೆಸುತ್ತಿದೆ. ಆದರೆ ಲೋಕಸಬೆ ಚುನಾವಣೆ ವೇಳೆ ಮೈತ್ರಿ ಮುರಿದು ಪ್ರಾದೇಶಿಕ ಪಕ್ಷಗಳ ಒಕ್ಕೂಟ ಸೇರುವ ಇರಾದೆ ಜೆಡಿಎಸ್ ಗೆ ಇದೆಯಾ ಎಂಬ ಅನುಮಾನ ಇದೀಗ ಮೂಡತೊಡಗಿದೆ.

ಇದಕ್ಕೆ ಪುಷ್ಠಿ ನೀಡುವಂತೆ ದೇವೇಗೌಡ ಒರಿಸ್ಸಾ ಸಂಸದರಾದ ನಾಗೇಂದ್ರ ಪ್ರಧಾನ್ ಮತ್ತು ರಬೀಂದ್ರ ಕುಮಾರ್ ಜೇನಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ ಈ ನಾಯಕರು ಜಾತ್ಯಾತೀತ ಮತ್ತು ಪ್ರಾದೇಶಿಕ ಶಕ್ತಿಗಳು ಒಂದುಗೂಡವ ಅವಶ್ಯಕತೆ ಕುರಿತು ಮಾತನಾಡಿದರು ಎನ್ನಲಾಗಿದೆ.