ಬೆಂಗಳೂರು (ಅ.29):  ‘ಪಕ್ಷದಲ್ಲಿ ಬೆಳೆದು ಅಧಿಕಾರ ಪಡೆದು ಈಗ ಲಘುವಾಗಿ ಮಾತನಾಡುತ್ತಿದ್ದಾರೆ. ನನ್ನ ಪಕ್ಷವನ್ನು ಮುಗಿಸಲು ಆರೇಳು ವರ್ಷಗಳ ಹಿಂದೆಯೇ ಪ್ರಯತ್ನ ನಡೆದಿತ್ತು. ಆದರೆ, ರಾಜ್ಯದಲ್ಲಿ ಜೆಡಿಎಸ್‌ ಸಂಪೂರ್ಣವಾಗಿ ನಾಶವಾಗಲು ಮಹಾಜನತೆ ಬಿಟ್ಟುಕೊಟ್ಟಿಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮಾರ್ಮಿಕವಾಗಿ ನುಡಿದಿದ್ದಾರೆ.

ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾದೇಶಿಕ ಪಕ್ಷಗಳು ಒಂದು ಕಾಲದಲ್ಲಿ ದೇಶವನ್ನು ಆಳಿವೆ. ನಮ್ಮ ಪಕ್ಷದಲ್ಲಿದ್ದವರು ಈಗ ಎರಡು ರಾಷ್ಟ್ರೀಯ ಪಕ್ಷಗಳಿಗೆ ಹೋಗಿದ್ದಾರೆ. ಕೆಲವರು ಮನಸ್ಸಿಗೆ ನೋವಾಗುವ ರೀತಿ ಮಾತನಾಡುತ್ತಾರೆ. ಪಕ್ಷದಲ್ಲಿ ಬೆಳೆದು ಅಧಿಕಾರ ಪಡೆದು ಲಘುವಾಗಿ ಮಾತನಾಡುತ್ತಾರೆ. ಜೆಡಿಎಸ್‌ ಅಸ್ತಿತ್ವದಲ್ಲಿ ಇರುವುದಿಲ್ಲ ಎಂಬ ಹೇಳಿಕೆ ನೀಡುತ್ತಾರೆ. ಇದರಿಂದ ಮನಸ್ಸಿಗೆ ನೋವಾಗುತ್ತದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದರು.

ಸಿದ್ದು ಭಾಷಣಕ್ಕೆ ಅಡ್ಡಿ: BBMP ಮಾಜಿ ಸದಸ್ಯನ ಬಂಧನ ...

‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಜೆಡಿಎಸ್‌ ಮತ್ತು ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೆಂಬಲಕ್ಕೆ ನಿಂತಿದ್ದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅವರು ಒಂದು ಪಕ್ಷದ ರಾಜ್ಯದ ಅಧ್ಯಕ್ಷರು. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಯಾರು ಯಾರ ಬೆಂಬಲಕ್ಕೆ ನಿಂತಿದ್ದರು ಎಂಬುದು ಮುಂದಿನ ದಿನದಲ್ಲಿ ಗೊತ್ತಾಗುತ್ತದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಹೇಗೆ ಬಂತು? ಶಾಸಕರನ್ನು ಹೊರಗೆ ಕಳಿಸಿದ್ದು ಯಾರ ಎಂಬುದು ಎಲ್ಲಾ ಗೊತ್ತಿದೆ. 16 ಶಾಸಕರನ್ನು ಯಾರು ಮುಂಬೈಗೆ ಕಳುಹಿಸಿದರು ಎಂಬುದನ್ನು ಅಲ್ಲಿಗೆ ಹೋದ ಶಾಸಕರೇ ಹೇಳಿದ್ದಾರೆ. ಯಾರು ಸರ್ಕಾರ ಬೀಳಿಸಿದರು ಎಂಬುದು ಜಗಜ್ಜಾಹೀರಾಗಿದೆ’ ಗೌಡರು ಎಂದು ತೀಕ್ಷ್ಣವಾಗಿ ಹೇಳಿದರು.
 
ಜಾತಿ ರಾಜಕಾರಣ ಹೊಸದೇನಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡಬೇಕೇ ಹೊರತು ಜಾತಿ ರಾಜಕಾರಣ ಬಗ್ಗೆ ಅಲ್ಲ. ಮೊದಲು ಆ ಬಗ್ಗೆ ಮಾತನಾಡುವುದು ಬಿಡಲಿ. ನನ್ನನ್ನು 1989ರಲ್ಲಿ ಪಕ್ಷದಿಂದ ಹೊರ ಹಾಕಲಾಗಿತ್ತು. ಆಗ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಆಗಿನಿಂದಲೂ ಕೆಲವರು ಜಾತಿ ರಾಜಕಾರಣ ಮಾಡಿಕೊಂಡೇ ಬಂದಿದ್ದಾರೆ