ಬೆಂಗಳೂರು [ಫೆ.20]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರೆ ಪಕ್ಷ ಬಿಟ್ಟು ಹೋದವರು ವಾಪಸ್‌ ಬರುತ್ತಾರೆ ಎಂಬ ಕಾಂಗ್ರೆಸ್‌ನ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು ಅಲ್ಲಗೆಳೆಯುವುದಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮಾರ್ಮಿಕವಾಗಿ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಗರೇಟ್‌ ಆಳ್ವ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರು. ನನ್ನ ಸಮಕಾಲೀನರು. ರಾಜ್ಯಪಾಲರೂ ಆಗಿದ್ದರು. ತಮ್ಮ ಮೂಲಗಳಿಂದ ಅವರು ಹೇಳಿರಬಹುದು. ಅವರ ಮಾತನನ್ನು ಅಲ್ಲಗೆಳೆಯುವುದಿಲ್ಲ ಎಂದರು.
 
ಸಿದ್ದರಾಮಯ್ಯ ಅವರ ಮಾತಿಗೆ ಯಡಿಯೂರಪ್ಪ ಭಾವನಾತ್ಮಕವಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಮೊದಲ ಬಾರಿಗೆ ಸಿದ್ದರಾಮಯ್ಯ ಮಾತು ಕೇಳಿ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡುವುದನ್ನು ನಾನು ಕೂಡ ಟಿವಿಯಲ್ಲಿ ನೋಡಿದ್ದೇನೆ. ಗಟ್ಟಿಗಾರ ಯಡಿಯೂರಪ್ಪ’ ಎಂದು ಎಂದು ಅಣಕವಾಡಿದರು.

ಕಾಂಗ್ರೆಸ್ ಸೇರ್ತಾರಾ 17 ಬಿಜೆಪಿ ಶಾಸಕರು : ನೂತನ ಸಚಿವ ಬಿ.ಸಿ.ಪಾಟೀಲ್ ರಿಯಾಕ್ಷನ್...

ಕೆಆರ್‌ ಪೇಟೆಗೆ ಹೋಗುವೆ:  ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಆ ಭಾಗದ ಸಚಿವರು ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಅಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ನಾನು ತೆರಳುತ್ತಿದ್ದೇನೆ. ಕಾರ್ಯಕರ್ತರಿಗೆ ತೊಂದರೆಯಾದರೆ ಸಹಿಸುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆಯೋ ನೋಡುತ್ತೇನೆ ಎಂದು ಇದೇ ವೇಳೆ ಗೌಡರು ತಿಳಿಸಿದರು.