ಜೆಡಿಎಸ್ ಕೋರ್ ಕಮಿಟಿ ರಚನೆ: ಗೌಡರ ಕುಟುಂಬದವರಿಗೆ ಸ್ಥಾನವಿಲ್ಲ..!
ಕಮಿಟಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅವರ ಕುಟುಂಬದ ಸದಸ್ಯರ ಪೈಕಿ ಯಾರೊಬ್ಬರ ಹೆಸರೂ ಇಲ್ಲ. ಜಾತಿ ಮತ್ತು ಪ್ರದೇಶವಾರು ಗಮನಿಸಿ ಇತರ ಮುಖಂಡರಿಗೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು(ಆ.19): ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಸಂಬಂಧ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ 21 ಸದಸ್ಯರ ಕೋರ್ ಕಮಿಟಿ ಅಸ್ತಿತ್ವಕ್ಕೆ ಬಂದಿದೆ. ಆದರೆ, ಈ ಕಮಿಟಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅವರ ಕುಟುಂಬದ ಸದಸ್ಯರ ಪೈಕಿ ಯಾರೊಬ್ಬರ ಹೆಸರೂ ಇಲ್ಲ. ಜಾತಿ ಮತ್ತು ಪ್ರದೇಶವಾರು ಗಮನಿಸಿ ಇತರ ಮುಖಂಡರಿಗೆ ಅವಕಾಶ ಕಲ್ಪಿಸಲಾಗಿದೆ.
ಕೋರ್ ಕಮಿಟಿಗೆ ವೈ.ಎಸ್.ವಿ.ದತ್ತ ಸಂಚಾಲಕರಾಗಿರುತ್ತಾರೆ. ಇನ್ನುಳಿದಂತೆ ಮುಖಂಡರಾದ ಸಾ.ರಾ.ಮಹೇಶ್, ಬಂಡೆಪ್ಪ ಕಾಶೆಂಪೂರ, ಎಚ್.ಕೆ.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ಸಿ.ಎಸ್.ಪುಟ್ಟರಾಜು, ಸುರೇಶ್‌ಗೌಡ, ಆಲ್ಕೋಡ್ ಹನುಮಂತಪ್ಪ, ಬಿ.ಎಂ.ಫಾರೂಕ್, ರಾಜೂ ಗೌಡ, ನೇಮಿರಾಜ ನಾಯಕ್, ಎಂ.ಕೃಷ್ಣಾರೆಡ್ಡಿ, ದೊಡ್ಡಪ್ಪಗೌಡ ನರಿಬೋಳ, ಕೆ.ಎಂ.ತಿಮ್ಮರಾಯಪ್ಪ, ವೀರಭದ್ರಪ್ಪ ಹಾಲಹರವಿ, ಕೆ.ಟಿ.ಪ್ರಸನ್ನಕುಮಾರ್, ಸುನೀತಾ ಚವ್ಹಾಣ್, ಸಿ.ವಿ.ಚಂದ್ರಶೇಖರ್, ಸುಧಾಕರ್ ಶೆಟ್ಟಿ, ಸೂರಜ್ ಸೋನಿ ನಾಯಕ್ ಸದಸ್ಯರಾಗಿರುತ್ತಾರೆ.
ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ್ದ ನಾಯಕ ಈಗ ಕಾಂಗ್ರೆಸ್‌ಗೆ?
ಸಭೆಯ ಬಳಿಕ ಮಾತನಾಡಿದ ದತ್ತ, ಕೋರ್ ಕಮಿಟಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಪಕ್ಷ ಸಂಘಟನೆ, ಪಕ್ಷದ ಬಲವರ್ಧನೆ, ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ, ಲೋಕಸಭಾ ಚುನಾವಣೆ ಕುರಿತು ಚರ್ಚೆ ನಡೆಸಲಾಗಿದೆ. ಆ.20ರಿಂದ ಸೆ.30ರವರೆಗೆ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಾಗುತ್ತದೆ. ಸೆಪ್ಟೆಂಬರ್‌ನಲ್ಲಿ ವರದಿ ನೀಡಿದ ಬಳಿಕ ಪದಾಧಿಕಾರಿಗಳ ಬದಲಾವಣೆಯಾಗಲಿದೆ ಎಂದರು.
ಜಿ.ಟಿ.ದೇವೇಗೌಡ ಮಾತನಾಡಿ, ಜೆಡಿಎಸ್ ಆಡಳಿತದ ಅವಧಿಯಲ್ಲಿ ರೈತರಿಗೆ ನೀಡಿದ ಯೋಜನೆಗಳ ಕುರಿತು ಮತ್ತು ಕಾಂಗ್ರೆಸ್ ಏನು ಮಾಡುತ್ತಿದೆ ಎಂಬುದರ ಬಗ್ಗೆ ಮನದಟ್ಟು ಮಾಡಲಾಗುವುದು. ಪ್ರವಾಸ ಮಾಡಿ ವರದಿ ಕೊಡಲು ಸಭೆಯಲ್ಲಿ ತಿಳಿಸಲಾಗಿದೆ. ಲೋಕಸಭೆಗೆ ಸಂಘಟನೆ ಮಾಡಬೇಕಿದೆ. 28 ಕ್ಷೇತ್ರದಲ್ಲಿಯೂ ನಾವು ಸಂಘಟನೆ ಮಾಡುತ್ತೇವೆ. ಯಾರನ್ನು ಅಭ್ಯರ್ಥಿ ಹಾಕಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಮತ್ತೆ ನಾವು ಸೆ.1ಕ್ಕೆ ಕೋರ್ ಕಮಿಟಿ ಸಭೆ ಮಾಡುತ್ತೇವೆ ಎಂದು ಹೇಳಿದರು.