ಇನ್ನು ನಾನು ಮನೆಯಲ್ಲಿ ಕೂರಲ್ಲ, 3-4 ದಿನಗಳಲ್ಲಿ ರಾಜ್ಯ ಪ್ರವಾಸ: ಬಿಎಸ್ವೈ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯು 22ರಿಂದ 23 ಸ್ಥಾನ ಗೆಲ್ಲಬೇಕು. ಈ ನಿಟ್ಟಿನಲ್ಲಿ ಇನ್ನು ಮೂರ್ನಾಲ್ಕು ದಿನಗಳಲ್ಲಿ ನಾನು ರಾಜ್ಯ ಪ್ರವಾಸ ಆರಂಭಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯೂಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು (ಸೆ.08): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯು 22ರಿಂದ 23 ಸ್ಥಾನ ಗೆಲ್ಲಬೇಕು. ಈ ನಿಟ್ಟಿನಲ್ಲಿ ಇನ್ನು ಮೂರ್ನಾಲ್ಕು ದಿನಗಳಲ್ಲಿ ನಾನು ರಾಜ್ಯ ಪ್ರವಾಸ ಆರಂಭಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯೂಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ನಿಮ್ಮ ಯಡಿಯೂರಪ್ಪ ಇವತ್ತಿನಿಂದ ಮನೆಯಲ್ಲಿ ಕೂರುವ ಪ್ರಶ್ನೆಯೇ ಇಲ್ಲ. ರಾಜ್ಯದ ಉದ್ದಗಲಕ್ಕೆ ಓಡಾಡಿ ಹೋರಾಟ ಮಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ 22-23 ಸ್ಥಾನ ಗೆಲ್ಲಲು ಪ್ರಯತ್ನ ಮಾಡುತ್ತೇನೆ’ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕರ ಆಯ್ಕೆ ಇವತ್ತು-ನಾಳೆಯೊಳಗೆ ಮಾಡುತ್ತೇವೆ. ವಿರೋಧ ಪಕ್ಷದ ನಾಯಕ ಇಲ್ಲ’ ಎಂದು ಕೆಲಸ ಕಾರ್ಯಗಳು ನಿಂತಿಲ್ಲ ಎಂದು ತಿಳಿಸಿದರು. ಯಡಿಯೂರಪ್ಪ ಈ ಹಿಂದೆ ಜೈಲಿಗೆ ಹೋಗಲು ಬಿಜೆಪಿಗರೇ ಕಾರಣ ಎಂಬ ಮಾಜಿ ಶಾಸಕ ರೇಣುಕಾಚಾರ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ‘ನಾನು ಜೈಲಿಗೆ ಹೋಗಲು ಯಾರೂ ಯಾವುದೂ ಕಾರಣವಲ್ಲ. ಆ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡಲ್ಲ. ರೇಣುಕಾಚಾರ್ಯ ಜತೆಗೆ ಮಾತನಾಡಿದ್ದೇನೆ. ಎಲ್ಲರೂ ಒಟ್ಟಾಗಿ ಪಕ್ಷ ಕಟ್ಟಿಬೆಳೆಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರೇ ಬಿಜೆಪಿಗೆ ಬರಲಿದ್ದಾರೆ: ಮಾಜಿ ಶಾಸಕ ಅಪ್ಪಚ್ಚು ರಂಜನ್ ಬಾಂಬ್!
ಒಬ್ಬ ಬಿಜೆಪಿ ಶಾಸಕನೂ ಕಾಂಗ್ರೆಸ್ ಹೋಗಲ್ಲ: ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ಎಲ್ಲ ಶಾಸಕರ ಜತೆಗೆ ಮಾತನಾಡಿದ್ದೇನೆ. ಪಕ್ಷದ ಒಬ್ಬ ಶಾಸಕ ಕಾಂಗ್ರೆಸ್‌ಗೆ ಹೋಗಲ್ಲ. ರಾಜ್ಯ ಸರ್ಕಾರದ ವಿರುದ್ಧ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ ಪಕ್ಷದ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ’ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಮಂಪರು ಕವಿದಿದೆ: ರಾಜ್ಯದ ಕಿವುಡ, ಮಂಪರು ಕವಿದ ಕಾಂಗ್ರೆಸ್ ಸರ್ಕಾರ ರೈತ, ಜನವಿರೋಧಿ ನೀತಿಗಳನ್ನು ಅಳವಡಿಸಿಕೊಂಡಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಈಡೇರಿಸಲು ಸಾಧ್ಯ ಆಗುತ್ತಿಲ್ಲ. ಸರ್ಕಾರಿ ನೌಕರರಿಗೆ ವೇತನ ನೀಡುತ್ತಿಲ್ಲ. ಅಕ್ಕಿ ಬದಲು ಸರಿಯಾಗಿ ಹಣ ಕೊಡುತ್ತಿಲ್ಲ. ಕಂದಾಯ ಸಚಿವರು ಬರಪೀಡಿತ ತಾಲೂಕುಗಳನ್ನು ಘೋಷಿಸುವುದಾಗಿ ಕೆಲ ದಿನಗಳ ಹಿಂದೆಯೇ ಹೇಳಿದ್ದಾರೆ.
ಇದೀಗ ಸರ್ವೇ, ರಾಜ್ಯ ಪ್ರವಾಸದ ನೆಪವೊಡ್ಡಿ ಘೋಷಣೆ ಮುಂದೂಡಿದ್ದಾರೆ. ಗ್ಯಾರಂಟಿ ಜಾತ್ರೆಗೆ ನಿಮಗೆ ಸಮಯ ಸಿಗುತ್ತದೆ. ಹಾಗಿದ್ದರೆ ನಿಮ್ಮ ಆದ್ಯತೆ ಏನು ಎಂದು ಖಾರವಾಗಿ ಪ್ರಶ್ನಿಸಿದರು. ರಾಜ್ಯದಲ್ಲಿ ಭೀಕರ ಬರದ ಛಾಯೆ ಆವರಿಸಿದೆ. 196ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರದ ವಾತಾವರಣ ನಿರ್ಮಾಣವಾಗಿದೆ. ಅತ್ಯಂತ ತುರ್ತಾಗಿ ತೀರ್ಮಾನ ತೆಗೆದುಕೊಂಡು ಕಾಮಗಾರಿ ನಡೆಸಬೇಕಾದ ರಾಜ್ಯ ಸರ್ಕಾರಕ್ಕೆ ಮಂಪರು ಕವಿದಂತಿದೆ. ಈ ಸರ್ಕಾರಕ್ಕೆ ರೈತರ ಸಮಸ್ಯೆಗೆ ಸ್ಪಂದಿಸುವ ಕಳಕಳಿ ಹಾಗೂ ಇಚ್ಛೆ ಇಲ್ಲ. ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತಿದ್ದಾರೆ. ಸರ್ಕಾರಕ್ಕೆ ಪ್ರಾಮಾಣಿಕ ಕಳಕಳಿ ಇಲ್ಲ. ವೈಫಲ್ಯಗಳನ್ನು ಮುಚ್ಚಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.
ಉದಯನಿಧಿ ಸ್ಟಾಲಿನ್ ಸನಾತನ ಹೇಳಿಕೆಯನ್ನು ಕಾಂಗ್ರೆಸ್ ಯಾಕೆ ಖಂಡಿಸಿಲ್ಲ: ಪ್ರಲ್ಹಾದ್ ಜೋಶಿ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಕ್ಷದ ರಾಜ್ಯದ ಅಧ್ಯಕ್ಷರು ಯಾರಾಗಬೇಕು? ಯಾವಾಗ ಆಗಬೇಕು ಎಂದು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಕಳೆದ ಹಲವು ದಿನಗಳಿಂದ ಮಾಧ್ಯಮಗಳಲ್ಲಿ ನಾನೂ ಗಮನಿಸುತ್ತಿದ್ದೇನೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಿ ಅಂತ ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಈ ಪ್ರಶ್ನೆಯೇ ಉದ್ಭವ ಆಗಲ್ಲ. ಇದರ ಬಗ್ಗೆ ವರಿಷ್ಠರ ಜತೆ ಯಡಿಯೂರಪ್ಪ ಚರ್ಚಿಸಿಲ್ಲ. ಒಂದು ವೇಳೆ ಚರ್ಚಿಸಿದರೂ ಪಕ್ಷಕ್ಕೆ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಕೊಡಿ ಎನ್ನುತ್ತಾರೆಯೇ ಹೊರತು ಮಗನಿಗೆ ಕೊಡಿ ಎಂದು ಕೇಳಲ್ಲ. ಈ ರೀತಿಯ ಚರ್ಚೆ ಅನಾವಶ್ಯಕ. ಇದು ಕಾರ್ಯಕರ್ತರನ್ನು ಗೊಂದಲಕ್ಕೆ ಈಡು ಮಾಡುತ್ತದೆ. ಇದು ಸತ್ಯಕ್ಕೆ ದೂರುವಾದ ಮಾತು ಎಂದು ಹೇಳಿದರು.