ಬೆಂಗಳೂರು(ಜು.10): ಕರ್ನಾಟಕ ರಾಜಕೀಯ ಸನ್ನಿವೇಶವನ್ನು ತುರ್ತು ಪರಿಸ್ಥಿತಿಗಿಂತ ಘೋರ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡ ಬಣ್ಣಿಸಿದ್ದಾರೆ.

ಖಾಸಗಿ ಸುದದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ದೇವೇಗೌಡ, ರಾಜ್ಯದ ಪ್ರಸಕ್ತ ತರಾಜಕೀಯ ಬಿಕ್ಕಟ್ಟಿಗೆ  ಬಿಜೆಪಿಯ ಅಧಿಕಾರದ ಲಾಲಸೆಯೇ ಕಾರಣ ಎಂದು ಹರಿಹಾಯ್ದಿದ್ದಾರೆ.

ರಾಜ್ಯದಲ್ಲಿ ಶತಾಯಗತಾಯ ಅಧಿಕಾರ ಹಿಡಿಯಬೇಕೆಂಬ ಹಂಬಲದಿಂದಾಗಿ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿದೆ ಎಂದು ದೇವೇಗೌಡ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸೃಷ್ಟಿಯಾಗಿರುವ ಸಾಂವಿಧಾನಿಕ ಬಿಕ್ಕಿಟ್ಟಿಗೆ ಬಿಜೆಪಿಯೇ ನೇರ ಹೊಣೆ ಎಂದಿರುವ ಜೆಡಿಎಸ್ ವರಿಷ್ಠ, ಇದಕ್ಕೆ ಬಿಜೆಪಿ ಕೇಂದ್ರ ನಾಯಕತ್ವದ ಬೆಂಬಲ ಇದೆ ಎಂದು ಗುಡುಗಿದ್ದಾರೆ.

ಶಾಸಕರನ್ನು ಖರೀದಿಸುವ, ಬೆದರಿಸುವ ತಂತ್ರಕ್ಕೆ ಮೊರೆ ಹೋಗಿರುವ ಬಿಜೆಪಿ,  ತುರ್ತು ಪರಿಸ್ಥಿತಿಗಿಂತಲೂ ಕೆಟ್ಟ ಸನ್ನಿವೇಶವನ್ನು ನಿರ್ಮಾಣ ಮಾಡಿದೆ ಎಂದು ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ.