Asianet Suvarna News Asianet Suvarna News

ಕೇಂದ್ರದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಸಂವಿಧಾನ ಬದಲಿಸಲು ಸಾಧ್ಯವೇ ಇಲ್ಲ; ಮಾಜಿ ಸಿಎಂ ಬೊಮ್ಮಾಯಿ

ಲೋಕಸಭಾ ಚುನಾವಣೆಯಲ್ಲಿ ಯಾರೇ ಗೆದ್ದು ಅಧಿಕಾರಕ್ಕೆ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Haveri Lok sabha constituency BJP Candidate Basavaraj Bommai talk about constitution change sat
Author
First Published May 5, 2024, 8:27 PM IST

ಹಾವೇರಿ (ಮೇ 05): ಲೋಕಸಭಾ ಚುನಾವಣೆಯಲ್ಲಿ ಯಾರೇ ಗೆದ್ದು ಅಧಿಕಾರಕ್ಕೆ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವೇ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವಕ್ಕೆ ಈ ದೇಶದ ಅಧಿಕಾರ ನೀಡಲು ಜನರು‌ ನಿರ್ಧರಿಸಿದ್ದಾರೆ.‌ ಕ್ಷೇತ್ರದಲ್ಲಿ ನನ್ನ ಕೆಲಸಗಳು ಮಾತನಾಡುತ್ತಿದ್ದು, ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ದೇಶದ ಮೂರನೇ ಹಂತದ ರಾಜ್ಯದ ಎರಡನೇ ಹಂತದ ಪ್ರಚಾರದ ಕೊನೆ ದಿನ ಈ ಬಾರಿ ಸುಮಾರು 35 ದಿನ ಪ್ರಚಾರಕ್ಕೆ ಸಮಯ ಸಿಕ್ಕಿದೆ. ಈ ದೇಶದ ಜನ ಹಾಗೂ ಹಾವೆರಿ ಗದಗ ಜನರು ಬಹಳ ಪ್ರಭುದ್ದವಾದ ಮತದಾರರಿದ್ದಾರೆ. ಇದೊಂದು ದೇಶ ನಡೆಸುವ ಚುನಾವಣೆ ಅಂತ ಎಲ್ಲರೂ ಬಲ್ಲವರಿದ್ದಾರೆ‌. ದೇಶವನ್ನು ಸಮರ್ಥವಾಗಿ ನಡೆಸುವ ನಾಯಕರಿಗೆ ದೇಶ‌ ಕೊಡಬೇಕು ಎನ್ನುವ ಆಲೋಚನೆಯಲ್ಲಿದ್ದಾರೆ. ಅವರ ಹಿಂದಿನ ಸಾಧನೆ ಗಮನಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಲ್ಲ ವರ್ಗದ ಜನರು ಬೆಂಬಲ ಕೊಡುತ್ತಿದ್ದಾರೆ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯರಿಗಾಗಿ ಸಹಾಯವಾಣಿ ಆರಂಭಿಸಿದ ಎಸ್‌ಐಟಿ!

ನನ್ನ ಕೆಲಸ ಮಾತನಾಡುತ್ತಿವೆ:  ಈ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪ್ರತಿ ತಾಲೂಕಿನಲ್ಲಿ ನಾವು ಮಾಡಿರುವ ಕೆಲಸ ಕಾರ್ಯಗಳನ್ನು ಜನರು ನೆನಪಿಸಿಕೊಳ್ಳುತ್ತಾರೆ. ಹಲವಾರು ಉದಾಹರಣೆ ನಾನು ಕೊಡಬಲ್ಲೆ. ನಿನ್ನೆ ರಾಣೆಬೆನ್ನೂರಿನಲ್ಲಿದ್ದೆ ನಿಮ್ಮ ಪುಣ್ಯದಿಂದ ತುಂಗಾ ಮೇಲ್ದಂಡೆ ಯೋಜನೆ ಜಾರಿಯಾಗಿದ್ದು, ನಮ್ಮ ಊರಿಗೆ ನೀರಾವರಿಯಾಗಿದ್ದು, ನಮ್ಮ ಬೋರ್ ವೆಲ್ ಗಳಲ್ಲಿ  ಅಂತರ್ಜಲ ಹೆಚ್ಚಾಗುತ್ತಿವೆ ಎಂದು ಅಲ್ಲಿನ‌ ಜನರು ಹೇಳಿದರು. ಅದೇ ರೀತಿ ಮೆಡ್ಲೇರಿ ಕೆರೆಯನ್ನು 32 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ನೀರು ತುಂಬಿಸಿದ್ದೀರಿ ಅದರಿಂದ ಅನುಕೂಲವಾಗಿದೆ ಎಂದು ಆ ಗ್ರಾಮದ ಜನರು ಹೇಳಿದರು. ತುಮ್ಮನಕಟ್ಟಿಗೆ ಹೋದಾಗ ಅವಳಿ ಜವಳಿ ಮಕ್ಕಳ ಚಿಕಿತ್ಸೆಗೆ ನಲವತ್ತು ಲಕ್ಷ ಖರ್ಚು ಮಾಡಿ ಜೀವ ಉಳಿಸಿದ್ದೀರಿ ಎಂದು ಆ ಕುಟುಂಬದವರು ಸಂತಸ ಹಂಚಿಕೊಂಡರು. ಅದೇ ರೀತಿ ರೋಣ, ಗದಗ, ಹಾನಗಲ್ ಗಳಲ್ಲಿ ನಾವು ಮಾಡಿರುವ ಕೆಲಸಗಳ ಪ್ರಯೋಜ‌ನ ಪಡೆದವರು ಭೇಟಿ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಈ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿ ಬಂದ ಸಮಸ್ಯೆ ಎಂದರೆ ಕುಡಿಯುವ ನೀರು. ಹಾವೇರಿ ಗದಗ ನಗರಗಳಿಗೆ ಕುಡಿಯುವ ನಿರು, ಚರಂಡಿ ವ್ಯವಸ್ಥೆ ಸಮಸ್ಯೆ ಇದೆ.‌ ನಾನು ಸಿಎಂ ಆಗಿದ್ದಾಗ 140 ಕೋಟಿ ವೆಚ್ಚದಲ್ಲಿ ಗದಗನಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಿದ್ದೆವು. ಈ ಸರ್ಕಾರ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿದೆ. ಹಾವೇರಿಯಲ್ಲಿ ಮೆಡಿಕಲ್ ಕಾಲೇಜು, ಇಂಜಿನೀಯರಿಂಗ್ ಕಾಲೇಜು, ಹಾಲು ಒಕ್ಕೂಟ, ವಿಶ್ವ ವಿದ್ಯಾಲಯ ಮಾಡಿರುವದನ್ನು ಜನ ಮಾತನಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ನಾನು ಮಾಡಿರುವ ಕೆಲಸಗಳು ಮಾತನಾಡುತ್ತಿವೆ. ಜನರ, ಹಿರಿಯರ ಅಶೀರ್ವಾದದಿಂದ ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.

ಹೆಚ್‌ಡಿ ರೇವಣ್ಣಗೆ ಮತ್ತೊಂದು ಶಾಕ್, ಹೆಚ್ಚಿನ ವಿಚಾರಣೆಗೆ 4 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ!

ಸಂವಿಧಾನ ಬದಲಾವಣೆಯಿಲ್ಲ: ಹಾವೇರಿ ಮಾಜಿ ಶಾಸಕ ನೆಹರೂ ಓಲೇಕಾರ ಕುರಿತ ಕೆಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೆಹರೂ ಓಲೆಕಾರ್ ಜೊತೆಗೆ ಒಳ್ಳೆಯ ಸಂಬಂಧ ಇದ್ದಿದ್ದು ನಿಜ, ಕಳೆದ ಚುನಾವಣೆಯಲ್ಲಿ ನಮ್ಮ ನಡುವೆ ಸಂವಹನ ಸಮಸ್ಯೆ ಆಯಿತು. ಈ ಬಾರಿ ಅವರು ಭಿನ್ನ ನಿಲುವು ತಳೆದರು. ಅವರು ಬಿಜೆಪಿ ವಿರುದ್ದ  ಸಂವಿಧಾನ ಬದಲಾವಣೆಯ ಬಗ್ಗೆ ಆರೋಪ ಮಾಡಿದ್ದಾರೆ. ಸಂವಿಧಾನ ಬದಲಾವಣೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನ ಬದಲಾವಣೆ ಮಾಡುವುದು ಅಸಾಧ್ಯ ಎಂದು ಹೇಳಿದೆ. ಯಾರೇ ಬಂದರೂ ಸಂವಿಧಾನ ಬದಲಾವಣೆ ಅಸಾಧ್ಯ. ಕಾಂಗ್ರೆಸ್ ನವರು ಅದನ್ನು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ನಾನು ಪ್ರಚಾರದಲ್ಲಿ ನನ್ನ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಿದ್ದೇನೆ. ಕಾಂಗ್ರೆಸ್ ನವರು ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಆ ಕಾರಣಕ್ಕೆ ಅವರು ಚೊಂಬು ಅಂತ ನಕಾರಾತ್ಮಕ  ಪ್ರಚಾರ ಆರಂಭಿಸಿದರು. ಈ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ನೀಡದಿರುವ ಕುರಿತು ಕೇಳಿದ ಪ್ರಶ್ಬೆಗೆ ಪ್ರತಿಕ್ರಿಯಿಸಿದ ಅವರು, ನಾವು ಕುರುಬ ಸಮುದಾಯಕ್ಕೆ ಅನೇಕ ಯೋಜನೆಗಳನ್ನು ಮಾಡಿದ್ದೇವೆ. ಕುರಿಗಾರರಿಗೆ 20 ಲಕ್ಷದ ವರೆಗೆ  ಸಂಘಗಳ ಮೂಲಕ ಕುರಿ ಖರೀದಿಗೆ ಯೋಜನೆ ಮಾಡಿದ್ದೇವು. ಕಾಗಿನೆಲೆ, ಬಾಡ ಅಭಿವೃದ್ಧಿ, ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಎಲ್ಲವನ್ನು ಬಿಜೆಪಿ ತೆರೆದಿದೆ ಎಂದರು.

Latest Videos
Follow Us:
Download App:
  • android
  • ios