ಪೆನ್‌ಡ್ರೈವ್ ಆಡಿಯೋ ಕೇಸ್‌ನಲ್ಲಿ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಡಬೇಕು; ಕುಮಾರಸ್ವಾಮಿ ಆಗ್ರಹ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಕುರಿತ ಆಡಿಯೋ ಕೇಸಿನ ಹೊಣೆಗಾರಿಕೆ ಹೊತ್ತು ಡಿ.ಕೆ. ಶಿವಕುಮಾರ್ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರು (ಮೇ 21): ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲ್ಲಾದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ವೈರಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಅವರೊಂದಿಗ್ಎ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಲಾಗಿದೆ. ಈ ಆರೋಪವನ್ನು ಒಪ್ಪಿಕೊಂಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೆನ್‌ಡ್ರೈವ್ ಆಡಿಯೋ ಪ್ರಕರಣದಲ್ಲಿ ಡಿಕೆಶಿವಕುಮಾರ್ ರಾಜೀನಾಮೆ ಕೊಡಬೇಕು. ಈಗಾಗಲೇ ನಾವು ಹೇಳಿ ಆಯ್ತು. ಇಷ್ಟೆಲ್ಲ ಪ್ರಕರಣದಲ್ಲಿ ಭಾಗಿಯಾದ ಮೇಲೂ ಅವರನ್ನು ಮುಂದುವರೆಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಇಂಥಹ ತಪ್ಪಿತಸ್ಥರಿಗೆ ರಕ್ಷಣೆ ಕೊಡೋಕೆ ಆಡಳಿತ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಇದರಲ್ಲಿ ಏನ್ ಮಾಡಿದ್ದಾರೆ ಅನ್ನೋದು ಜಗತ್ ಜಾಹೀರು ಆಗಿದೆ. ಆದರೂ ಡಿ.ಕೆ.ಶಿವಕುಮಾರ್ ಅವರನ್ನ ರಕ್ಷಣೆ ಮಾಡೋ ಕೆಲಸ ಮಾಡ್ತಿದ್ದಾರೆ. ಸರ್ಕಾರ ಮುಂದಿನ ದಿನಗಳಲ್ಲಿ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ನೆಲದ ಕಾನೂನಿನಲ್ಲಿ ಯಾರೇ ಇದ್ದರು ತಲೆ ಬಾಗಲೇಬೇಕು. ನಿತ್ಯ ಹಣದ, ಅಧಿಕಾರದ ದುರುಪಯೋಗ ಪಡಿಸಿಕೊಂಡು ಬಹಳ ದಿನ ಉಳಿಯೋದಕ್ಕೆ ಆಗೋದಿಲ್ಲ. ಅದಕ್ಕೂ ಅಂತಿಮ ದಿನಗಳು ಬರುತ್ತವೆ. ಪೆನ್ ಡ್ರೈವ್ ಕೇಸ್ ಸಿಬಿಐ ತನಿಖೆಗೆ ಕೊಡಲಿ ಹೈಕೋರ್ಟ್ ಮೊರೆ ಹೋಗುವ ವಿಚಾರದ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡ್ತೀವಿ. ಈ ವಿಷಯದಲ್ಲಿ ಕಾನೂನು ಚೌಕಟ್ಟಿನಲ್ಲಿ, ದೇಶದ ಕಾನೂನು ವ್ಯವಸ್ಥೆಯಲ್ಲಿ ಸತ್ಯಾಂಶ ಹೊರಗೆ ತರೋಕೆ ಏನೇನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ತೀವಿ. ವಕೀಲ ದೇವರಾಜೇಗೌಡ ಜೀವಕ್ಕೆ ಆಪತ್ತು ಇರಬಹುದು. ಈ ಸರ್ಕಾರದಲ್ಲಿ ಇರೋ ಬಹಳ ಜನರು ಯಾವ ಬ್ಯಾಕ್‌ಗ್ರೌಂಡ್‌ನಿಂದ ಬಂದಿದ್ದಾರೆ ಅನ್ನೋ ಹಿನ್ನಲೆಯೊಳಗೆ ನಮ್ಮ ಮಾಜಿ ಶಾಸಕ ಸುರೇಶ್ ಗೌಡ ಹೇಳಿರಬಹುದು ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಬಗ್ಗೆ ಸಾಕ್ಷಿ ಕೇಳಿದ ಸಿಎಂಗೆ ತಿರುಗೇಟು: ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಕುರಿತ ಆಡಿಯೋ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕ್ಷಿ ಕೇಳುತ್ತಿದ್ದಾರೆ. ವಕೀಲ ದೇವರಾಜೇಗೌಡ್ರು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿರುವ ಸಂಭಾಷಣೆಯಲ್ಲಿ ಏನಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದರಲ್ಲಿ ದೇವರಾಜೇಗೌಡ್ರು, ಶಿವರಾಮೇಗೌಡ್ರು ಹಾಗೂ ಡಿ.ಕೆ. ಶಿವಕುಮಾರ ಮಾತನಾಡಿರುವ ಆಡಿಯೋ ಇದೆ. ಈ ಬಗ್ಗೆ ಸ್ವತಃ ಡಿ.ಕೆ.ಶಿವಕುಮಾರ್ ಅರ್ಧ ನಿಮಿಷ ಮಾತನಾಡಿದ್ದೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. ಅರ್ಧ ನಿಮಿಷ ಮಾತನಾಡಿರುವುದು ಪ್ರಮುಖವಾದ ಅಂಶ ಅಲ್ವ..? ಇಷ್ಟಿದ್ದರೂ ಸಾಕ್ಷಿ ಕೊಡಿ, ಸಾಕ್ಷಿ ಕೊಡಿ ಅಂತ ಹೇಳ್ತಾರೆ. ಇವತ್ತು ಎಸ್‌ಐಟಿ 7 ಜನರನ್ನ ಬಂಧನ ಮಾಡಿ ಕರೆ ತಂದಿದ್ದಾರೆ ಅಲ್ವಾ? ಯಾವ ಸಾಕ್ಷಿ ಆಧಾರದ ಮೇಲೆ ಬಂಧನ ಮಾಡಿ ಕರೆ ತಂದಿದ್ದಾರೆ. ಎಸ್‌ಐಟಿ ಪ್ರತಿನಿತ್ಯ ಹಲವಾರು ಜನರನ್ನ ಕರೆದು ಕಿರುಕುಳ ಮಾಡ್ತಿದ್ದಾರೆ ಎಂದು ಆರೋಪ ಮಾಡಿದರು.
ನಾವು ನಿಮ್ಮ ತರ ಬಂಡತನ ಮಾಡಿಲ್ಲ. ಬಂಡತನದಲ್ಲಿ ನಿಮ್ಮ ಮಗನದ್ದು ನಡೆಯಿತಲ್ಲ. ಅಪ್ಪ ಅಪ್ಪ ನಾನು ಈ ಹೆಸರು ಕೊಟ್ಟಿದ್ದೆ, ಆ ಹೆಸರು ಹೇಗೆ ಬಂತು? ಅಂತ ಹೇಳಿ ಸಿಎಸ್‌ಆರ್ ಹಣಕ್ಕಾಗಿ ಫೋನ್ ಮಾಡಿದ್ದು ಅಂತ ತಿರುಚಿದ್ರಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ಸಾಕ್ಷಿಗಳನ್ನ ಯಾವ ರೀತಿ ನಾಶ ಮಾಡಬಹುದು? ಯಾವ ರೀತಿಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಮಾಹಿತಿಗಳನ್ನ ಯಾವ ರೀತಿ ಮಾಡಬಹುದು ಅಂತ ಕೆಲಸ ಮಾಡಿಕೊಂಡು ಬಂದಿದ್ದೀರಿ. ಈಗಲೂ ಮಾಡ್ತಿರೋದು ಅದೇ ಕೆಲಸನೇ. ಅಷ್ಟು ಸ್ಪಷ್ಟವಾಗಿ ಒಬ್ಬ ಡಿಸಿಎಂ ಮಾತನಾಡ್ತಿರೋದು ಕಣ್ಣು ಮುಂದೆ ಇದೆ. ದೂರು ಕೊಡಿಸಿಕೊಂಡಿದ್ದಿರಾ ಅಲ್ವಾ ಅವರ ಹಿನ್ನೆಲೆ ಏನು? ರೇವಣ್ಣ ಕುಟುಂಬದಲ್ಲಿ 7-8 ವರ್ಷದಿಂದ ಕೆಲಸದಲ್ಲಿ ಇದ್ದವರು. ಆ ರೀತಿ ಪ್ರಕರಣ ನಡೆದಿದ್ರೆ 7-8 ವರ್ಷದಿಂದ ಯಾಕೆ ದೂರು ನೀಡಿರಲಿಲ್ಲ. ಆಯ್ಯೋ ಆ ವ್ಯಕ್ತಿಗಳನ್ನ ಇಷ್ಟಾದರೂ ಕರೆದುಕೊಂಡು ಬಂದು ದೂರು ಕೊಡಿಸಿದ್ದೇವೆ ಅಂತ ನಿಮ್ಮ ಮಹಾನುಭಾವ ನಿಮ್ಮ ಡಿಸಿಎಂ ಹೇಳಿದ್ದಾರೆ ಅಲ್ವಾ.? ಅದಕ್ಕಿಂತ ಸಾಕ್ಷಿ ಬೇಕಾ ನಿಮಗೆ..? ಇಂತಹವರನ್ನ ಇಟ್ಟುಕೊಂಡು ರಾಜ್ಯ ಕಟ್ಟುತ್ತಿರಾ ನೀವು..? ಎಂದು ಕಿಡಿಕಾರಿದ್ದಾರೆ.
ಪೆನ್‌ಡ್ರೈವ್ ಆಡಿಯೋದಲ್ಲಿ ಮಾತನಾಡಿದ ಬಗ್ಗೆ ಸಾಕ್ಷಿ ಏನಿದೆ ಕೊಡಿ ಎಂದು ಡಿ.ಕೆ. ಶಿವಕುಮಾರ್ ಹೇಳ್ತಾರೆ. ಜೊತೆಗೆ, ಪೆನ್‌ಡ್ರೈವ್ ಕೇಸಿನ ಸಂತ್ರಸ್ತ ಮಹಿಳೆಯರಿಂದ ಬಹಳ ಕಷ್ಟ ಪಟ್ಟು ದೂರನ್ನ ಕೊಡಿಸಿದ್ದೇವೆ ಎಂದು ದೇವರಾಜೇಗೌಡರ ಬಳಿ ಮಾತನಾಡುವಾಗ ಹೇಳುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇದಕ್ಕಿಂತಲೂ ಸಾಕ್ಷಿ ಬೇಕಾ? ಏನೋ 6 ಪ್ರಶ್ನೆ ಇಟ್ಟಿದ್ದಾರಂತೆ? ಬಿಜೆಪಿಯವರಿಗೆ ಪತ್ರ ಬರೆದರೂ ಪ್ರಜ್ವಲ್‌ಗೆ ಯಾಕೆ ಟಿಕೆಟ್ ಕೊಟ್ರು? ಜೆಡಿಎಸ್ ಅವರು ಪ್ರಜ್ವಲ್‌ನನ್ನು ಸಸ್ಪಂಡ್ ಯಾಕೆ ಮಾಡಿದ್ರು.? ಎಂದು ಪ್ರಶ್ನೆ ಮಾಡ್ತಾರೆ. ಆದರೆ, ನಾವು ನೈತಿಕತೆ ಉಳಿಸಿಕೊಳ್ಳಲು ಈ ಆರೋಪ ಬಂದ ಮೇಲೆ ಸಸ್ಪೆಂಡ್ ಮಾಡಿದ್ದೇವೆ. ಇಲ್ಲಿ ಸಿಎಂ ಹೇಳಿಕೆ ನೋಡಿದರೆ, ಆರೋಪಿಯನ್ನ ಅಪರಾಧಿನೆ ಮಾಡಿದ್ದಾರೆ. ನಿಮ್ಮ ಎಸ್‌ಐಟಿಯವರೇ ಹೇಳ್ತಿದ್ದಾರೆ, ವಿಡಿಯೋದಲ್ಲಿ ಪುರುಷರ ಮುಖವೇ ಇಲ್ಲವೆಂದು. ಹಾಗಾದರೆ, ಅಪರಾಧಿ ಸ್ಥಾನದಲ್ಲಿ ಯಾಕೆ ನಿಲ್ಲಿಸುತ್ತಾರೆ ಎಂದು ಕಿಡಿಕಾರಿದರು.