ಸಂಸದ ಸ್ಥಾನದಿಂದ ವಜಾ: ಖಾಸಗಿ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಿ ಹೊರಟ ಪ್ರಜ್ವಲ್ ರೇವಣ್ಣ
ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲಿಯೇ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಜ್ವಲ್ ರೇವಣ್ಣ ಅರ್ಧಕ್ಕೆ ಬಿಟ್ಟು ಎದ್ದು ಹೋಗಿದ್ದಾರೆ.
ಹಾಸನ (ಸೆ.01): ಕರ್ನಾಟಹ ಹೈಕೋರ್ಟ್‌ನಿಂದ ಸಂಸದ ಸ್ಥಾನವನ್ನು ಅನರ್ಹಗೊಳಿಸಿದ ಬೆನ್ನಲ್ಲಿಯೇ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಜ್ವಲ್ ರೇವಣ್ಣ ಅವರು ಅರ್ಧಕ್ಕೆ ಬಿಟ್ಟು, ಯಾರಿಗೂ ಪ್ರತಿಕ್ರಿಯೆ ನೀಡದೇ ತಮ್ಮ ಖಾಸಗಿ ಕಾರಿನಲ್ಲಿ ಮನೆಗೆ ತೆರಳಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ಸುಳಳು ದಾಖಲೆಗಳನ್ನು ನೀಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಿಂದ ಸಂಸದ ಸ್ಥಾನವನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ವೇಳೆ ಹಾಸನದ ದರ್ಗಾವೊಂದರಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಜ್ವಲ್ ರೇವಣ್ಣ ಅವರು ಕಾರ್ಯಕ್ರಮದಿಂದ ಅರ್ಧಕ್ಕೆ ಬಿಟ್ಟು ಎದ್ದು ಹೋಗಿದ್ದಾರೆ. ಈ ವೇಳೆ ಮಾಧ್ಯಮಗಳಿಂದ ಪ್ಜ್ವಲ್ ರೇವಣ್ಣ ಅವರಿಗೆ ಪ್ರಶ್ನೆ ಕೇಳಿದರೂ ಯಾವುದೇ ಪ್ರತೊಕ್ರಿಯೆಯನ್ನು ನೀಡದೇ ಅಲ್ಲಿಂದ ಖಾಸಗಿ ವಾಹನವನ್ನು ಹತ್ತಿಕೊಂಡು ಮನೆಯತ್ತ ತೆರಳಿದ್ದಾರೆ.
ಹಾಸನ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ: ಹೈಕೋರ್ಟ್ ಆದೇಶ
ಲೋಕಸಭೆಯ 3ನೇ ಕಿರಿಯ ಸಂಸದ: ಹಾಸನ (Hassan) ಲೋಕಸಭಾ ಕ್ಷೇತ್ರದಿಂದ 17ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿದದಾರೆ. ಈ ಮೂಲಕ ಪ್ರಜ್ವಲ್ ರೇವಣ್ಣ ಅವರು ಲೋಕಸಭೆಯ ಮೂರನೇ ಕಿರಿಯ ಸಂಸದ ಎಂಬ ಖ್ಯಾತಿಯನ್ನೂ ಗಳಿಸಿದ್ದರು. ಇನ್ನು ಪ್ರಜ್ವಲ್ ರೇವಣ್ಣ ಅವರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್. ಡಿ. ದೇವೇಗೌಡರ ಮೊಮ್ಮಗನಾಗಿದ್ದಾರೆ. ಜೊತೆಗೆ, ಕರ್ನಾಟಕ ಮಾಜಿ ಸಚಿವ, ಹಾಲಿ ಶಾಸಕ ಹೆಚ್. ಡಿ. ರೇವಣ್ಣ ಅವರ ಪುತ್ರರಾಗಿದ್ದಾರೆ. ಅಲ್ಲದೇ ಅವರ ಚಿಕ್ಕಪ್ಪ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಿದ್ದಾರೆ. ಇಷ್ಟಾದರೂ, ಚುನಾವಣೆ ವೇಳೆ ಸುಳ್ಳು ಅಫಿಡವಿಟ್ ಸಲ್ಲಿಕೆ ಮಾಡಿ ಸಂಸದ ಸ್ಥಾನದಿಂದಲೇ ಅನರ್ಹ ಆಗಿರುವುದು ಅವರ ಕುಟುಂಬದ ರಾಜಕೀಯಕ್ಕೆ ಕಪ್ಪು ಚುಕ್ಕೆ ಆದಂತಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ಪ್ರಜ್ವಲ್ ರೇವಣ್ಣ ರಾಜಕೀಯ ಹಾದಿ: ದೇಶದ ಯುವ ರಾಜಕೀಯ ನಾಯಕರಲ್ಲಿ ಒಬ್ಬರಾಗಿರುವ ಪ್ರಜ್ವಲ್ ರೇವಣ್ಣ 2015ರಿಂದಲೇ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಪ್ರಯತ್ನ ಮಾಡಿದರೂ, ಟಿಕೆಟ್ ವಂಚಿತರಾಗಿದ್ದರು. ಇದಾದ ನಂತರ 2019ರ ಲೋಕಸಭೆ ಚುನಾವಣೆ ವೇಳೆ ಹಾಸನ ಕ್ಷೇತ್ರದ ಹಾಲಿ ಸಂಸದರಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ತಮ್ಮ ಮೊಮ್ಮಗ ಪ್ರಜ್ವಲ್ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಜೆಡಿಎಸ್ ಭದ್ರಕೋಟೆಯಾದ ಹಾಸನ ಜಿಲ್ಲೆಯನ್ನು ಬಿಟ್ಟುಕೊಟ್ಟಿದ್ದರು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 6 ಕಡೆಗಳಲ್ಲಿ ಸ್ಪರ್ಧೆ ಮಾಡಿದ್ದ ಜೆಡಿಎಸ್ ಅಭ್ಯರ್ಥಿಗಳ ಪೈಕಿ ಪ್ರಜ್ವಲ್ ರೇವಣ್ಣ ಮಾತ್ರ ಗೆಲುವು ಸಾಧಿಸಿದ್ದರು.
ಮಗನ ಅನರ್ಹ ಆದೇಶದ ಬೆನ್ನಲ್ಲೆ ತಂದೆ ಹೆಚ್.ಡಿ.ರೇವಣ್ಣಗೂ ಶಾಕ್ ಕೊಟ್ಟ ಹೈಕೋರ್ಟ್
ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನ: ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧೆ ಮಾಡಿದ್ದ ಬಿಜೆಪಿಯಿಂದ ಪರಾಜಿತ ಅಭ್ಯರ್ಥಿ ಅರಕಲಗೂಡು ಮಂಜು ಅವರು ಪ್ರಜ್ವಲ್ ರೇವಣ್ಣ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ನಾಮಪತ್ರ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗಾಗಿ, ಪ್ರಜ್ವಲ್ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಶುಕ್ರವಾರ (ಸೆಪ್ಟೆಂಬರ್ 1) ಆದೇಶ ಹೊರಡಿಸಿದೆ. ಈಗ ಪ್ರಜ್ವಲ್ ರೇವಣ್ಣ ಹಾಗೂ ದೂರು ದಾಖಲಿಸಿದ್ದ ಅರಕಲಗೂಡು ಮಂಜು ಅವರು ಒಂದೇ ಪಕ್ಷದವರಾಗಿದ್ದಾರೆ. ಇನ್ನು ಹೈಕೋರ್ಟ್ ತೀರ್ಪಿನ ವಿರುದ್ಧ ಪ್ರಜ್ವಲ್ ರೇವಣ್ಣ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.