Asianet Suvarna News Asianet Suvarna News

ಸಮಸ್ಯೆಗೆ ಸ್ಪಂದಿಸದ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ: ಆರ್‌.ವಿ. ದೇಶಪಾಂಡೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದು ಅದರಲ್ಲಿ ಅತಿಕ್ರಮಣ ಸಕ್ರಮ ಪ್ರಮುಖ ಸಮಸ್ಯೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪೂರ್ಣ ಬಹುಮತದೊಂದಿಗೆ ಈ ಬಾರಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆಗೆ ಪರಿಹಾರ ದೊರಕಲಿದೆ: ಆರ್‌.ವಿ. ದೇಶಪಾಂಡೆ

Haliyal Congress Candidate RV Deshpande Slams BJP Government grg
Author
First Published May 7, 2023, 12:00 AM IST

ಭಟ್ಕಳ(ಮೇ.07): ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿಲ್ಲ. ಜನರು ಬಿಜೆಪಿ ಸರ್ಕಾರಗಳ ಬಗ್ಗೆ ಭ್ರಮನಿರಸನ ಹೊಂದಿದ್ದು, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಮಾಜಿ ಸಚಿವ ಹಾಗೂ ಹಳಿಯಾಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ವಿ. ದೇಶಪಾಂಡೆ ಹೇಳಿದರು. ಮುರ್ಡೇಶ್ವರದ ಬೀನಾ ವೈದ್ಯ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಂಕಾಳ ವೈದ್ಯರ ಪರ ಮತ ಯಾಚಿಸಿ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದು ಅದರಲ್ಲಿ ಅತಿಕ್ರಮಣ ಸಕ್ರಮ ಪ್ರಮುಖ ಸಮಸ್ಯೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪೂರ್ಣ ಬಹುಮತದೊಂದಿಗೆ ಈ ಬಾರಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆಗೆ ಪರಿಹಾರ ದೊರಕಲಿದೆ. ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಪರವಾದ ವಾತಾವರಣವಿದ್ದು, ಭಟ್ಕಳದಲ್ಲಿ ಮಂಕಾಳ ವೈದ್ಯ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆಂದರು.

ಯಾರಿಗೂ ಬಹುಮತ ಸಿಗಬಾರದೆಂದು ಹವಣಿಸುತ್ತಿದೆ ಜೆಡಿಎಸ್: ದೇಶಪಾಂಡೆ ವಾಗ್ದಾಳಿ

ಕಾಂಗ್ರೆಸ್‌ ಅಭ್ಯರ್ಥಿ ಮಂಕಾಳ ವೈದ್ಯ ಮಾತನಾಡಿ, ಪರೇಶ ಮೇಸ್ತ ಸಾವಿನ ಪ್ರಕರಣದಲ್ಲಿ ಹೆಚ್ಚು ತನಿಖೆಯಾದರೆ ಬಿಜೆಪಿಯವರೇ ಸಿಕ್ಕಿ ಬೀಳುತ್ತಾರೆಂದು ಇದೊಂದು ಅಸಹಜ ಸಾವು ಎಂಬ ವರದಿ ಬರುವಂತೆ ನೋಡಿಕೊಂಡಿದ್ದಾರೆ. ಅಂದು ಬಿಜೆಪಿಯವರು ಪರೇಶ ಮೇಸ್ತ ಸಾವನ್ನು ಕೊಲೆ ಎಂದು ಬೊಬ್ಬೆ ಹೊಡೆದು ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದರು. ಆದರೆ ತನಿಖೆ ನಡೆಸಿದ ಸಿಬಿಐನವರು ಇದೊಂದು ಸಹಜ ಸಾವು ಎಂದು ವರದಿ ಒಪ್ಪಿಸಿದರು ಎಂದ ಅವರು, ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಇವರ ಡಬ್ಬಲ್‌ ಎಂಜಿನ್‌ ಕೆಟ್ಟು ಹೋಗಿ ಬಹಳ ದಿನಗಳೇ ಕಳೆದಿವೆ. ಬಿಜೆಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಇವರಿಗೆ ಚುನಾವಣೆ ಬಂದಾಗ ಮಾತ್ರ ಹಿಂದುತ್ವ ನೆನಪಾಗುತ್ತದೆ. ನನಗೆ ಹಿಂದುತ್ವದ ಬಗ್ಗೆ ಪಾಠ ಹೇಳುವ ಇವರಿಗೆ ಹಿಂದುತ್ವದ ಬಗ್ಗೆ ಗಂಧ ಗಾಳಿ ಗೊತ್ತಿಲ್ಲ. ಹಿಂದುತ್ವ ಅಂದರೆ ಬಡವರ, ದುರ್ಬಲ ವರ್ಗದವರ ಕಳಕಳಿಯಾಗಿದೆ ಎಂದು ಹೇಳಿದರು.

ಕಳೆದ ಸಲ ನನ್ನನ್ನು ಸುಳ್ಳು, ಅಪಪ್ರಚಾರದಿಂದ ಸೋಲಿಸಲಾಯಿತು. ಆದರೆ ಈ ಬಾರಿ ಕ್ಷೇತ್ರದ ಜನರು ಜಾಗೃತರಾಗಿದ್ದಾರೆ. ಬಿಜೆಪಿಯ ಸುಳ್ಳಿನ ಬಗ್ಗೆ ಎಲ್ಲೆಡೆ ಅರಿವು ಮೂಡಿಸಲಾಗಿದೆ. ನಾನು ಸೋತರೂ ಜನರೊಂದಿಗೆ ಇದ್ದು ಅವರಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ನನ್ನನ್ನು ಆಯ್ಕೆ ಮಾಡಿದರೆ ಜನರ ಕಷ್ಟಕ್ಕೆ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಶ್ರಮಿಸುವ ಕೆಲಸ ಮಾಡುತ್ತೇನೆ. ನಾನು ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಇಂದಿಗೂ ಜನರು ಮೆಚ್ಚುಕೊಳ್ಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನತೆ ನನ್ನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಹಿರಿಯ ಮುಖಂಡ ಎಲ್‌.ಎಸ್‌. ನಾಯ್ಕ ಮಾತನಾಡಿದರು. ಕಾಂಗ್ರೆಸ್‌ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜೆ.ಡಿ. ನಾಯ್ಕ, ಹಿರಿಯ ಮುಖಂಡ ರಾಮಾ ಮೊಗೇರ, ಸೋಮಯ್ಯ ಗೊಂಡ, ವೆಂಕಟಯ್ಯ ಬೈರುಮನೆ, ವನಿತಾ ನಾಯ್ಕ ಮುಂತಾದವರಿದ್ದರು. ಭಟ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೆಂಕಟೇಶ ನಾಯ್ಕ ಸ್ವಾಗತಿಸಿದರು. ಮಂಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋವಿಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಅಲ್ಬರ್ಚ್‌ ಡಿಕೋಸ್ತ ವಂದಿಸಿದರು.

ನನ್ನ ಅವಧಿಯಲ್ಲಿ ಹಿಂದೆಂದೂ ಕಾಣದಷ್ಟುಅಭಿವೃದ್ಧಿ ಆಗಿದೆ: ಸಚಿವ ಹೆಬ್ಬಾರ್

ಪ್ರಧಾನಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆಂಬ ಭಯ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಭಯ ಆ ಪಕ್ಷದ ಮುಖಂಡರಲ್ಲಿ ಕಾಡುತ್ತಿರುವುದರಿಂದಲೇ ಪ್ರಧಾನಮಂತ್ರಿಯಾದಿಯಾಗಿ ಕೇಂದ್ರ ಸಚಿವರು ತಂಡೋಪತಂಡವಾಗಿ ಆಗಮಿಸಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ಕಾಂಗ್ರೆಸ್‌ ಪ್ರಚಾರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಈ ಬಾರಿ ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆಂದು ಗುಪ್ತಚರ ಇಲಾಖೆಯ ವರದಿ ಬಂದಿರುವ ಸಾಧ್ಯತೆ ಇರುವುದರಿಂದಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯಾದಿಯಾಗಿ ಕೇಂದ್ರದ ಸಚಿವರ ತಂಡ ರಾಜ್ಯದಲ್ಲೇ ಠಿಕಾಣಿ ಹೂಡಿ ಭಾರೀ ಪ್ರಚಾರ ಮಾಡುವಂತಾಗಿದೆ. ಪಕ್ಷದ ಪರವಾಗಿ ಎಲ್ಲರೂ ಪ್ರಚಾರ ಮಾಡುವುದು ಸಾಮಾನ್ಯ. ಆದರೆ ದೇಶದ ಒಬ್ಬ ಗೌರವಾನ್ವಿತ ಪ್ರಧಾನಮಂತ್ರಿಯಾದವರು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದೆಂಬ ಭಯದಿಂದ ರಾಜ್ಯಾದ್ಯಂತ ಸುತ್ತಿ ಪ್ರಚಾರ, ರಾರ‍ಯಲಿ ನಡೆಸುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಯಾರು ಎಷ್ಟೇ ಸುತ್ತಾಟ ನಡೆಸಿದರೂ ಜನರು ಈ ಬಾರಿ ಸ್ಪಷ್ಟತೀರ್ಮಾನ ಮಾಡಿದ್ದಾರೆಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರುವುದು ನಿಶ್ಚಿತ ಎಂದು ಹೇಳಿದರು.

Follow Us:
Download App:
  • android
  • ios