ಮೈಸೂರು[ಡಿ.11]: ಉಪಚುನಾವಣೆಯಲ್ಲಿ ನಾನು ಸೋತೆ ಎಂಬುದಕ್ಕಿಂತ ರಾಜ್ಯದಲ್ಲಿ ಸ್ಥಿರ ಸರ್ಕಾರ ಬಂತಲ್ಲ, ಅದೇ ನನಗೆ ಖುಷಿ ನೀಡಿದೆ ಎಂದು ಹುಣಸೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಚ್‌.ವಿಶ್ವನಾಥ್‌ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಉಪಚುನಾವಣೆ ಸೋಲಿನ ನೋವಿಗಿಂತಲೂ ಸದೃಢ ಸರ್ಕಾರ ತಂದಿರುವ ಖುಷಿ ಇದೆ. ಯಡಿಯೂರಪ್ಪ ನಮ್ಮ ಜೊತೆ ಇರುವುದಲ್ಲ, ನಾವೇ ಅವರ ಜೊತೆ ಇದ್ದೇವೆ. ಯಾವ ಕ್ಷಣದಲ್ಲೂ ಅವರು ನಮ್ಮ ಕೈ ಬಿಡುವುದಿಲ್ಲ ಎಂಬ ಭರವಸೆ ಇದೆ. ಶುದ್ಧ ರಾಜಕಾರಣಕ್ಕಾಗಿ ನಾವು ತ್ಯಾಗ ಮಾಡಿದ್ದೇವೆ. ಯಡಿಯೂರಪ್ಪ ಒಮ್ಮೆ ಮಾತು ಕೊಟ್ಟಮೇಲೆ ಎಂದೂ ತಪ್ಪುವುದಿಲ್ಲ. ನಮ್ಮ ಜನರಿಗೆ ಯಾರನ್ನು ಗೆಲ್ಲಿಸಬೇಕು ಅಂತ ಗೊತ್ತಿರಬೇಕು. ಈ ಬಗ್ಗೆ ಜನರ ನಿರ್ಧಾರವನ್ನು ನಾನು ಟೀಕಿಸುವುದಿಲ್ಲ. ನಮ್ಮನ್ನ ನಾವೇ ದೂರಿಕೊಳ್ಳಬೇಕು. ಇದರ ಬಗ್ಗೆ ಜನರಿಗೆ ಇನ್ನಷ್ಟುಮಾಹಿತಿ ಬೇಕಿದೆ ಎಂದರು.

ಎಲ್ಲರೂ ಸೇರಿ ಸೋಲಿಸಿದರು:

ಉಪಚುನಾವಣೆಯಲ್ಲಿ ನನ್ನ ಸೋರಿಗೆ ಎಲ್ಲರೂ ಒಂದಾಗಿ ಕೆಲಸ ಮಾಡಿದರು. ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ, ಜಿ.ಟಿ. ದೇವೇಗೌಡ ಎಲ್ಲರೂ ಸೇರಿಕೊಂಡು ನನ್ನನ್ನು ಸೋಲಿಸಿದ್ದಾರೆ ಎಂದರು.

ಸಿದ್ದರಾಮಯ್ಯ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ವಿಶ್ವನಾಥ್‌, ನೋಡಿ ಭಗವಂತ ಎಲ್ಲೋ ಒಂದು ಕಡೆ ತೋರಿಸುತ್ತಾನೆ ಎಂದರು.