ಬೆಂಗಳೂರು(ಅ.21):  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತಿಗೆ ಘನತೆಯೇ ಇಲ್ಲ. ನಾನು ಸಿಎಂ ಆಗಿದ್ದಾಗ ಹೇಗೆ ಇದ್ದೆ ಅಂತ ಜನರಿಗೆ ಗೊತ್ತಿದೆ. ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಗಳನ್ನ ಕೇಳಿದ್ದೇನೆ. ಇವರಿಂದ ನಾನು ರಾಜಕೀಯ ಕಲಿಯಬೇಕಿಲ್ಲ. ನಾನು ಸರ್ಕಾರಿ ಬಂಗಲೆ ತೆಗೆದುಕೊಂಡಿರಲಿಲ್ಲ. ಮಧ್ಯಾಹ್ನ ವಿಶ್ರಾಂತಿಗಾಗಿ ನಾನು ತಾಜ್ ಹೋಟೆಲ್‌ಗೆ ಹೋಗುತ್ತಿದ್ದೆ, ನಾನು ಎಲ್ಲಿ ಇರಬೇಕಿತ್ತು ಅಂತ ಅವರ ಪರ್ಮಿಷನ್ ತಗೋಬೇಕಿತ್ತಾ? ಎಂದು ಕಟೀಲ್‌ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 

ತಾಜ್ ವೆಸ್ಟ್ ಆಂಡ್‌ನಲ್ಲಿ ಕುಳಿತು ಆಡಳಿತ ಮಾಡಿದ್ದಕ್ಕೆ ಕುಮಾರಸ್ವಾಮಿ ಸರ್ಕಾರ ಹೋಯ್ತು ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ ವಿಚಾರಕ್ಕೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್‌ಡಿಕೆ, ನನ್ನಷ್ಟು ಜನ ಸಾಮಾನ್ಯರಿಗೆ ಸಿಗೋರು ಯಾರಿದ್ದಾರೆ. ಈ ರಾಜಕಾರಣಿಗಳಿಗೆ ಚಾಲೆಂಜ್ ಮಾಡುತ್ತೇನೆ. ಇವತ್ತು ಅಧಿಕಾರ ಇಲ್ಲದೆ ಹೋದರೂ ನೂರಾರು ಜನರು ನನ್ನ ಮನೆ ಬಳಿ ಬಂದಿದ್ದಾರೆ. ಕಟೀಲ್‌ ಎಷ್ಟು ಬಡವರನ್ನ ನೋಡಿದ್ದಾರೆ.? ಎಷ್ಟು ಜನರಿಗೆ ಸಹಾಯ ಮಾಡಿದ್ದಾರೆ? ಅದನ್ನ ಮೊದಲು ಹೇಳಲಿ. ಅವರ ಹೇಳಿಕೆಯಿಂದ ಅವರ ಸ್ಥಾನಕ್ಕೆ ಕುಂದು  ತಂದುಕೊಳ್ಳುತ್ತಿದ್ದಾರೆ ಎಂದು ಕಟೀಲ್ ವಿರುದ್ಧ  ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. 

ಸಮ್ಮಿಶ್ರ ಸರ್ಕಾರ ಬೀಳೋಕೆ ಕಾಂಗ್ರೆಸ್‌ನವರೇ ಕಾರಣ ಎಂಬ ಡಿಸಿಎಂ ಅಶ್ವಥ್ ನಾರಾಯಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಹೀಗೆ ಹೇಳೋಕೆ ಡಿಸಿಎಂ ಅವರಿಗೆ ನಿಖರ ಮಾಹಿತಿ ಇರಬೇಕು ಅಲ್ಲವಾ?  ಮೈತ್ರಿ ಸರ್ಕಾರ ಉಳಿಸ್ತೀನಿ ಅಂತ ಕಾಂಗ್ರೆಸ್‌ನವರು ಹೇಳುತ್ತಿದ್ದರು. ಈಗ ಅವರಿಂದಲೇ ಸತ್ಯ ಹೊರ ಬರುತ್ತಿದೆ. ಈ ವಿಚಾರವನ್ನ ಜನರೇ ನಿರ್ಣಯ ಮಾಡಲಿ. ಕಾಂಗ್ರೆಸ್‌ನವರು ಕಷ್ಟ ಕೊಟ್ಟಿದ್ದು ನಿಜ. ಸಿದ್ದರಾಮಯ್ಯ 5 ವರ್ಷಗಳಲ್ಲಿ ಮಾಡಿದ ಕಾರ್ಯಗಳನ್ನ ನಾನು 14 ತಿಂಗಳಲ್ಲಿ ಮಾಡಿದ್ದೇನೆ. ಅವರು ನನಗೆ ಕೊಟ್ಟ ತೊಂದರೆಗಳ ನಡುವೆಯೂ ಅವರಿಗಿಂತ ಉತ್ತಮ ಕೆಲಸ ಮಾಡಿದ್ದೇನೆ‌ ಎಂದು ಹೇಳಿದ್ದಾರೆ. 

'ಬಿಜೆಪಿ ಸರ್ಕಾರ ರಚನೆಯಲ್ಲಿ ಮುನಿರತ್ನ ಪಾತ್ರ ದೊಡ್ಡದು'

ಸಿದ್ದರಾಮಯ್ಯ ಸರ್ಕಾರದ ಎಲ್ಲಾ ಭಾಗ್ಯಗಳನ್ನ ಮುಂದುವರೆಸಿ 25 ಸಾವಿರ ಕೋಟಿ ಸಾಲಮನ್ನಾಗೆ ಹಣ ಕೊಟ್ಟಿದ್ದೆ. ಇವರ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ದುಡ್ಡೇ ಇಟ್ಟಿರಲ್ಲ. ಅದಕ್ಕೆಲ್ಲ ದುಡ್ಡು ಹೊಂದಿಸಿದ್ದು ನಾನು. ಅಕ್ಕಿ ಕೊಟ್ಟೆ, ಅಕ್ಕಿ ಕೊಟ್ಟೆ ಅಂತ ಸಿದ್ದರಾಮಯ್ಯ ಹೇಳ್ತಾರೆ. ಆದರೆ ಇವರ ಅವಧಿಯಲ್ಲಿ ಅನ್ನಭಾಗ್ಯ ಅಕ್ಕಿಗೆ ಹಣವೇ ಇಟ್ಟಿರಲಿಲ್ಲ. ಅನ್ನಭಾಗ್ಯಕ್ಕೆ 500 ಕೋಟಿ ಹೊಂದಿಸಿದ್ದು ನಾನು. ಅವರ ಹೊರೆಯನ್ನ ನಾನು ಹೊತ್ತಿದ್ದೇನೆ. ಇದೆಲ್ಲವನ್ನೂ ಕುಣಿಯಲಾರದೇ ನಾನು ಮಾಡಿದೆನಾ? ಎಂದು ಹೇಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. 

ನನ್ನ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳಾಗಿವೆ. ಕಾಂಪಿಟ್ ವಿತ್ ಚೈನ್ ತಂದಿದ್ದು ನಾನು. ನನ್ನ ಕಾರ್ಯಕ್ರಮದ ಹೆಸರನ್ನ  ಪ್ರಧಾನಿ ಮೋದಿ  ಹೈಜಾಕ್ ಮಾಡಿ ಹೆಸರು ಬದಲಾಯಿಸಿ ಆತ್ಮನಿರ್ಭರ್ ಭಾರತ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.