Asianet Suvarna News Asianet Suvarna News

Gujarat Election Results: ರಾಜ್ಯ ರಾಜಕೀಯದ ಮೇಲಾಗುವ ಪರಿಣಾಮವೇನು?

ಗುಜರಾತ್‌ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಇದು ರಾಜ್ಯದ ರಾಜಕೀಯದಲ್ಲಿ ಪರಿಣಾಮ ಬೀರುವ ಸಾಧ್ಯತೆಗಳು ಅಧಿಕ. ಗುಜರಾತ್‌ನಲ್ಲಿ ಬಿಜೆಪಿ ಹೆಚ್ಚೂ ಕಡಿಮೆ ಕ್ಲೀನ್‌ಸ್ವೀಪ್‌ ಮಾಡಿದ್ದರೂ, ಇದೇ ರೀತಿಯ ಫಲಿತಾಂಶವನ್ನು ಕರ್ನಾಟಕದಲ್ಲಿ ನಿರೀಕ್ಷೆ ಮಾಡುವುದು ಕಷ್ಟ. ಇನ್ನು ಕಾಂಗ್ರೆಸ್ ಕೂಡ ಗುಜರಾತ್‌ನಲ್ಲಿ ಸೋತಷ್ಟು ಹೀನಾಯವಾಗಿ ಕರ್ನಾಟಕದಲ್ಲಿ ಸೋಲುವ ಸಾಧ್ಯತೆಯಂತೂ ಇಲ್ಲ.
 

Gujarat Election Results effect to karnataka assembly elections and Politics san
Author
First Published Dec 8, 2022, 7:04 PM IST

ಬೆಂಗಳೂರು (ಡಿ.8): ಬಹುನಿರೀಕ್ಷಿತ ಗುಜರಾತ್‌ ವಿಧಾನಸಭೆಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್‌ ಧೂಳೀಪಟವಾಗಿದ್ದರೆ, ಬಿಜೆಪಿ ಭಾರೀ ಬಹುಮತದೊಂದಿಗೆ ಗೆಲುವು ಕಂಡಿದೆ. ಇನ್ನೊಂದಡೆ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಬದಲಾವಣೆಯಾಗಿದ್ದು, ಕಾಂಗ್ರೆಸ್‌ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ಅಂದಾಜು 40 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುವ ಹಾದಿಯಲ್ಲಿದ್ದರೆ, ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ನ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಕೊಂಚ ಮಟ್ಟಿಗೆ ಪರಿಣಾಮ ಬೀರುವುದಂತೂ ಖಚಿತ. ಎರಡೂ ರಾಜ್ಯಗಳ ಫಲಿತಾಂಶದಿಂದ ರಾಜ್ಯದಲ್ಲಿರುವ ಎರಡು ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಮೇಲೆ ಪರಿಣಾಮ ಬೀರಲಿದೆ. ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರಾನೇರ ಫೈಟ್‌ ಇದ್ದರೆ, ಜೆಡಿಎಸ್‌ ಪ್ರಭಾವ ಕೂಡ ಕಡಿಮೆ ಏನಿಲ್ಲ. ಗುಜರಾತ್‌ ಚುನಾವಣೆಯ ವೇಳೆ ಬಿಜೆಪಿ ತೋರಿದ ಕೆಲವು ದಿಟ್ಟ ನಿರ್ಧಾರ ರಾಜ್ಯದಲ್ಲಿ ಮಾದರಿಯಾಗುವುದರೆ, ಕಾಂಗ್ರೆಸ್‌ನ ನಾಯಕರು ತೋರಿದ ನಿರಾಸಕ್ತಿ ಕೂಡ ಪಾಠವಾಗಬೇಕಿದೆ. ಚುನಾವಣೆ ಹೋರಾಟ ಮಾಡುವ ಮುನ್ನವೇ ಗುಜರಾತ್‌ನಲ್ಲಿ ಕಾಂಗ್ರೆಸ್‌ ಶಸ್ತ್ರತ್ಯಾಗ ಮಾಡಿತ್ತು. ಪಕ್ಷದ ಪ್ರಮುಖ ನಾಯಕ ಎನಿಸಿಕೊಂಡಿದ್ದ ರಾಹುಲ್‌ ಗಾಂಧಿ, ಇಡೀ ಗುಜರಾತ್‌ ಚುನಾವಣೆಯ ಅಭಿಯಾನದಲ್ಲಿ ಮಾಡಿದ್ದು ಕೇವಲ 2 ಸಮಾವೇಶಗಳು ಮಾತ್ರ. ಈ ಎಲ್ಲಾ ನಿರಾಸಕ್ತಿಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ರಾಜ್ಯ ಕಾಂಗ್ರೆಸ್ ಮುಂದಿರುವ ಸವಾಲುಗಳು: ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕಾದಲ್ಲಿ ಸಮರ್ಪಿತ ಕಾರ್ಯಕರ್ತರ ಪಡೆ ಅನಿವಾರ್ಯತೆ ಖಂಡಿತಾ ಇದೆ. ಅದರೊಂದಿಗೆ ತೀಕ್ಷ್ಣವಾಗಿ ಹಾಗೂ ನಿರ್ದಾಕ್ಷಿಣ್ಯವಾಗಿ ಯಾವುದೇ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳುವ ಅಗತ್ಯ ಕೂಡ ಇದೆ.  ಇನ್ನು ಪಕ್ಷದಲ್ಲಿ ನಾಯಕತ್ವದ ಕುರಿತಂತೆ ದೊಡ್ಡ ಮಟ್ದ ಅಸಮಾಧಾನ ಇದೆ. ಡಿಕೆ ಶಿವಕುಮಾರ್‌ ಹಾಗೂ ಸಿದ್ಧರಾಮಯ್ಯ ಅವರ ಬಣದೊಂದಿಗೆ ಈಗ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಣ ಕೂಡ ಕಾಂಗ್ರೆಸ್‌ನಲ್ಲಿ ಚಾಲ್ತಿಯಲ್ಲಿದೆ. ಈ ಬಣಗಳ ನಡುವಿನ ತಿಕ್ಕಾಟ ಚುನಾವಣೆಯಲ್ಲಿ ಎಫೆಕ್ಟ್‌ ಆಗದೇ ಇರುವ ರೀತಿಯಲ್ಲಿ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ನಾಯಕತ್ವ ಕುರಿತಂತೆ ಅಸಮಾಧಾನ ಇತ್ಯರ್ಥದ ಅನಿವಾರ್ಯತೆ ಪಕ್ಷದಲ್ಲಿ ಎದ್ದು ಕಾಣುತ್ತಿದೆ.

ಇನ್ನು ಜಾತಿಯ ಮುಲಾಜಿಗೆ ಕಟ್ಟುಬಿದ್ದು ಟಿಕೆಟ್ ಕೊಡುವ ಪದ್ಧತಿಯನ್ನು ಕಾಂಗ್ರೆಸ್‌ ಕೈಬಿಡಬೇಕಿದೆ. ಅದರೊಂದಿಗೆ ಓಲೈಕೆ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕಿರುವುದು ಕೂಡ ಮುಖ್ಯವಾಗಿದೆ. ಕಳೆದೊಂದು ವರ್ಷದಿಂದ ಧರ್ಮ ದಂಗಲ್‌ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರುಗಳ ಹೇಳಿಕೆಗಳನ್ನು ಜನ ಗಮನಿಸಿದ್ದಾರೆ. ಯಾವ ಸಮುದಾಯಕ್ಕೂ ಓಲೈಕೆ ಮಾಡದೇ ರಾಜಕಾರಣ ಮಾಡುವುದು ಕಾಂಗ್ರೆಸ್‌ಗೆ ಇರುವ ಸವಾಲು.

ಸಿಎಂ ಗಾದಿ ಗುದ್ದಾಟ: ಇನ್ನು ಕಾಂಗ್ರೆಸ್‌ನಲ್ಲಿ ಸಿಎಂ ಗಾದಿ ಗುದ್ದಾಟ ನಡೆಯುತ್ತಿದೆ. ಚುನಾವಣೆಯಲ್ಲಿ ಗೆದ್ದಲ್ಲಿ ತಾನೇ ಸಿಎಂ ಎಂದು ಡಿಕೆ ಶಿವಕುಮಾರ್‌ ಒಂದೆಡೆ ಹೇಳುತ್ತಿದ್ದರೆ, ಮಾಜಿ ಸಿಎಂ ಸಿದ್ಧರಾಮಯ್ಯ ಅವರದು ಕೂಡ ಇದೇ ಮಾತು. ಈ ಭಿನ್ನಾಭಿಪ್ರಾಯ ನೇರವಾಗಿ ಬಿಜೆಪಿಗೆ ಲಾಭ ತಂದುಕೊಡುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಗೆಲ್ಲುವರಿಗೆ ಮಾತ್ರವೇ ಕಾಂಗ್ರೆಸ್‌ ಪಕ್ಷ ಮಣೆ ಹಾಕಬೇಕಿದೆ. ಅದರೊಂದಿಗೆ ಗುಂಪುಗಾರಿಕೆ, ಜಾತಿ ನಾಯಕತ್ವ ತೊರೆಯಬೇಕಾದ ಅನಿವಾರ್ಯತೆ ಪಕ್ಷಕ್ಕೆ ಎದುರಾಗಿದೆ.

Gujarat Election Results 2022 Live: ಬಿಜೆಪಿ ಕಚೇರಿಗೆ ಆಗಮಿಸಿದ ಮೋದಿ, ಗುಜರಾತ್ ಸರ್ಕಾರ ರಚನೆ ಸಭೆ

ಬಿಜೆಪಿಗೂ ಇದೆ ಸವಾಲು: ಇನ್ನು ರಾಜ್ಯ ಬಿಜೆಪಿ ಗುಜರಾತ್‌ ಚುನಾವಣೆಯ ಗೆಲುವನ್ನು ಎದೆತಟ್ಟಿಕೊಂಡು ಸಂಭ್ರಮಿಸುತ್ತಿದೆ. ಆದರೆ, ಅದಕ್ಕಾಗಿ ಗುಜರಾತ್‌ ಬಿಜೆಪಿ ತೆಗೆದುಕೊಂಡ ಸ್ಪಷ್ಟ ನಿರ್ಧಾರಗಳು ಕೂಡ ಕಾರಣ. ನಿಮಗೆ ನೆನಪಿರಲಿ, ಗುಜರಾತ್‌ನಲ್ಲಿ ಈ ಬಾರಿ ಚುನಾವಣೆಯಲ್ಲಿ ಐವರು ಕ್ಯಾಬಿನೆಟ್‌ ಸಚಿವರನ್ನು ಸೇರಿಸಿ 38 ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ನೀಡಿರಲಿಲ್ಲ. ಅದರ ಫಲಿತಾಂಶ ನೇರವಾಗಿ ಈಗ ಪಕ್ಷ ಪಡೆದುಕೊಂಡಿದೆ. ಯಾವುದೇ ಜಾತಿಯ ಮುಲಾಜಿಗೆ, ಹಿರಿತನಕ್ಕೆ ಕಟ್ಟುಬೀಳುವ ಬದಲು ಗೆಲ್ಲುವ ಅಭ್ಯರ್ಥಿಗಳನ್ನು ಮಾತ್ರವೇ ಗುರುತಿಸಿ ಟಿಕೆಟ್‌ ನೀಡಿದರೆ ಗುಜರಾತ್‌ ರೀತಿಯ ಗೆಲುವು ಅಸಾಧ್ಯವಲ್ಲ.

Assembly election: ಗುಜರಾತ್ ಬಿಜೆಪಿ ಮಾಡೆಲ್ ಕರ್ನಾಟಕಕ್ಕೂ ಅನ್ವಯ ?

ಹಿರಿಯರಿಗೆ ಟಿಕೆಟ್‌ ನಿರಾಕರಣೆ ವಿಚಾರದಲ್ಲಿ ಮಾತನಾಡಿರುವ ಮಾಜಿ ಸಿಎಂ ಸದಾನಂದ ಗೌಡ,  'ಈ ತಿರ್ಮಾನ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಆಡಳಿತ ವಿರೋಧಿ ಅಲೆ ಸರಿಪಡಿಸಲು ಪ್ರಯತ್ನ ಮಾಡಿದೆ. ಅಲೆ ಪಕ್ಷದ ವಿರುದ್ಧ ಅಲ್ಲ ವ್ಯಕ್ತಿಯ ವಿರುದ್ಧ ಇರುತ್ತೆ. ಹೀಗಾಗಿ ಆ ನಾಯಕರಿಗೆ ಟಿಕೆಟ್ ನಿರಾಕರಿಸಿದೆ. ಗುಜರಾತ್ ಮಾದರಿಯನ್ನು ಕರ್ನಾಟಕದಲ್ಲಿ ಜಾರಿ ಮಾಡಬಹುದು. ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ.  ಉತ್ತರ ಮತ್ತು ದಕ್ಷಿಣ ಭಾರತದ ಚುನಾವಣೆ ಬೇರೆ ರಾಜ್ಯಗಳ ಚುನಾವಣೆ ರಾಜ್ಯಗಳ ವಿಚಾರಗಳ ಮೇಲೆ ಚುನಾವಣೆ ನಡೆಯುತ್ತವೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios