ಗುಜರಾತ್ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಗೆ ಆಘಾತ ಎದುರಾಗಿದೆ. ಹಿರಿಯ ನಾಯಕ, ಮಾಜಿ ಸಚಿವ ಬಿಜೆಪಿ ತೊರೆದಿದ್ದಾರೆ. ಇದೀಗ ಕಾಂಗ್ರೆಸ್ ಅಥವಾ ಆಮ್ ಆದ್ಮಿ ಪಾರ್ಟಿ ಸೇರಿಕೊಳ್ಳಲು ಸಜ್ಜಾಗಿದ್ದಾರೆ.

ಅಹಮ್ಮದಾಬಾದ್(ನ.05): ಗುಜರಾತ್ ಚುನಾವಣೆ ರಾಜಕೀಯವಾಗಿ ಅತೀ ಮುಖ್ಯ ಚುನಾವಣೆ. ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ ಭರ್ಜರಿ ಕಸರತ್ತು ನಡೆಸುತ್ತಿದೆ. ಕಳೆದೆರಡು ದಶಕದಿಂದ ಗುಜರಾತ್ ಬಿಜೆಪಿಯ ಭದ್ರಕೋಟೆ. ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಹೋರಾಟ ಮಾಡಿದರೆ, ಕಾಂಗ್ರೆಸ್ ಅಧಿಕಾರ ಮರಳಿ ಪಡೆಯಲು ಹಾಗೂ ಆಪ್ ಹೊಸ ಇತಿಹಾಸ ರಚಿಸಲು ಯತ್ನಿಸುತ್ತಿದೆ. ಈ ಪ್ರಯತ್ನಗಳ ನಡುವೆ ಬಿಜೆಪಿ ಪಾಳಯಕ್ಕೆ ಪಕ್ಷಾಂತರ ಪರ್ವ ಬಿಸಿ ತಟ್ಟಿದೆ. ಇದೀಗ ಬಿಜೆಪಿ ಹಿರಿಯ ನಾಯಕ, ಮಾಜಿ ಆರೋಗ್ಯ ಸಚಿವ ಜಯ್ ನಾರಾಯಣ್ ವ್ಯಾಸ ಪಕ್ಷ ತೊರೆದಿದ್ದಾರೆ. ಬಿಜೆಪಿಯಿಂದ ಈ ಬಾರಿ ಜಯ್ ನಾರಾಯಣ್ ವ್ಯಾಸ್ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಡೌಟ್. ಇದರ ಬೆನ್ನಲ್ಲೇ ಪಕ್ಷ ತೊರೆದಿದ್ದಾರೆ. ಇದೀಗ ಕಾಂಗ್ರೆಸ್ ಅಥವಾ ಆಮ್ ಆದ್ಮಿ ಪಾರ್ಟಿ ಸೇರಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. 

ಬಿಜೆಪಿಯಲ್ಲಿ ನಾನೊಬ್ಬ ಹಿರಿಯ ರಾಜಕಾರಣಿ. ಆದರೆ ಕಳೆದ ಕೆಲ ವರ್ಷದಿಂದ ದೂರುದಾರನಾಗಿ ಮಾತ್ರ ಉಳಿದುಕೊಂಡಿದ್ದೇನೆ. ನೋವು, ದೂರುಗಳನ್ನು ನೀಡುತ್ತಲೇ ಬಂದಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬಿಜೆಪಿ ತೊರೆಯುತ್ತಿದ್ದೇನೆ. ಪಕ್ಷ ಸೇರುವುದರ ಕುರಿತು ಮುಕ್ತವಾಗಿದ್ದೇನೆ. ಎರಡು ಆಯ್ಕೆಗಳು ಮುಂದಿದೆ. ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ. ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಜಯ್ ನಾರಾಯಣ್ ವ್ಯಾಸ್ ಹೇಳಿದ್ದಾರೆ.

ಔಷಧಿ, ಸರ್ಕಾರ ಬದಲಿಸುವುದು ಸೂಕ್ತವಲ್ಲ, ಹಿಮಾಚಲ ಸಂಪ್ರದಾಯಕ್ಕೆ ಅಂತ್ಯ ಹಾಡಲು ಮೋದಿ ಮನವಿ!

ಇತ್ತೀಚೆಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಗುಜರಾತ್ ಪ್ರವಾಸದ ವೇಳೆ ನಾರಾಯಣ್ ವ್ಯಾಸ್ ಭೇಟಿಯಾಗಿದ್ದರು. ಈ ವೇಳೆ ಕಾಂಗ್ರೆಸ್ ಸೇರಿಕೊಳ್ಳುವಂತೆ ಆಹ್ವಾನ ನೀಡಲಾಗಿತ್ತು ಅನ್ನೋ ಮಾತುಗಳು ಕೇಳಿಬಂದಿತ್ತು. ಕಳೆದೊಂದು ವರ್ಷದಿಂದ ಬಿಜೆಪಿಯಿಂದ ದೂರವಿರುವ ನಾರಾಯಣ್ ವ್ಯಾಸ್ ಇದೀಗ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಬಿಜೆಪಿ ವ್ಯಾಸ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇಲ್ಲ. ಹೀಗಾಗಿ ಟಿಕೆಟ್‌ಗಾಗಿ ಕಾಂಗ್ರೆಸ್ ಅಥವಾ ಆಮ್ ಆದ್ಮಿ ಪಾರ್ಟಿ ಜೊತೆ ಮಾತುಕತೆ ನಡೆಸಿ ಪಕ್ಷ ಸೇರಿಕೊಳ್ಳುವ ಸಾಧ್ಯತೆ ಇದೆ.

ಗುಜರಾತ್‌ನಲ್ಲಿ ಬಿಜೆಪಿ ಸ್ಪಷ್ಟಬಹುಮತ
ಮುಂಬರುವ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಅಧಿಕಾರರೂಢ ಬಿಜೆಪಿ ಮತ್ತೊಮ್ಮೆ ಭರ್ಜರಿ ಜಯಗಳಿಸಲಿದೆ ಎಂದು ಇನ್ನೊಂದು ಸಮೀಕ್ಷಾ ವರದಿ ತಿಳಿಸಿದೆ. ಎಬಿಪಿ ನ್ಯೂಸ್‌ ಮತ್ತು ಸಿ ವೋಟರ್‌ ನಡೆಸಿದ ಸಮೀಕ್ಷೆಯ ಪ್ರಕಾರ ಬಿಜೆಪಿ 135 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಕಾಂಗ್ರೆಸ್‌ 35 ಸ್ಥಾನಗಳಲ್ಲಿ ಜಯಗಳಿಸಲಿದೆ ಹಾಗೂ ಆಪ್‌ 11 ಸ್ಥಾನಗಳನ್ನು ಗೆದ್ದರೆ ಇತರರು 1 ಸ್ಥಾನ ಗಳಿಸಿಕೊಳ್ಳಲಿದ್ದಾರೆ.

Rozgar Mela: ರಾಜ್ಯದಲ್ಲಿ 1000 ಯುವಕರಿಗೆ ಕೇಂದ್ರ ನೌಕರಿ

182 ವಿಧಾನಸಭಾ ಸ್ಥಾನಗಳಿರುವ ಗುಜರಾತ್‌ನಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, 89 ಸೀಟುಗಳಿಗೆ ಡಿ.1ರಂದು ಹಾಗೂ ಉಳಿದ 93 ಸೀಟುಗಳಿಗೆ ಡಿ.5ರಂದು ಮತದಾನ ನಡೆಯಲಿದೆ. ಎರಡೂ ಹಂತಕ್ಕೆ ಕ್ರಮವಾಗಿ ನ.5 ಹಾಗೂ ನ.10ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ.