Gujarat Election Result 2022: ಡಿ.12ಕ್ಕೆ ಭೂಪೇಂದ್ರ ಪಟೇಲ್ ಸಿಎಂ ಆಗಿ ಪ್ರಮಾಣವಚನ
ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಖಚಿತವಾಗುತ್ತಿದ್ದ ಬೆನ್ನಲ್ಲಿಯೇ ಪಕ್ಷದಲ್ಲಿ ಮುಂದಿನ ಪ್ರಕ್ರಿಯೆಗಳು ಆರಂಭವಾಗಿದೆ. ಗುಜರಾತ್‌ನ ಒಟ್ಟು 182 ಸ್ಥಾನಗಳ ಪೈಕಿ 152ರಲ್ಲಿ ಬಿಜೆಪಿ ಶೇ.54ರಷ್ಟು ಮತ ಹಂಚಿಕೆಯೊಂದಿಗೆ ಮುಂದಿರುವ ಕಾರಣ ಗೆಲುವು ಕೂಡ ಸರಳ ಎನ್ನಲಾಗಿದೆ.
ಅಹಮದಾಬಾದ್ (ಡಿ.8): ಭಾರತೀಯ ಜನತಾ ಪಕ್ಷವು ಗುಜರಾತ್‌ನಲ್ಲಿ ಅಭೂತಪೂರ್ವ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. ಇದರ ನಡುವೆ ಗುಜರಾತ್ ಬಿಜೆಪಿಯಲ್ಲಿ ಮುಂದಿನ ಕೆಲಸಗಳು ಆರಂಭವಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಡಿಸೆಂಬರ್ 12 ರಂದು ಮತ್ತೊಮ್ಮೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಗುರುವಾರ ನಡೆದ ಮತ ಎಣಿಕೆಯಲ್ಲಿ ರಾಜ್ಯದ ಜನರು ಮತ್ತೊಮ್ಮೆ ಬಿಜೆಪಿಯ ಕೈಹಿಡಿದಿದ್ದಾರೆ. ಈ ಎಲ್ಲಾ ಶ್ರೇಯಸ್ಸನ್ನು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ. ಚುನಾವಣೆಯಲ್ಲಿ ರಾಜ್ಯದ ಜನತೆ ದೇಶ ವಿರೋಧಿ ಶಕ್ತಿಗಳನ್ನು ತಿರಸ್ಕರಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿದೆ ಎಂದಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ ಆರ್ ಪಾಟೀಲ್, ಭೂಪೇಂದ್ರ ಪಟೇಲ್ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಡಿಸೆಂಬರ್ 12 ರಂದು ಅವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಗುಜರಾತ್‌ನ ಒಟ್ಟು 182 ಸ್ಥಾನಗಳಲ್ಲಿ 152 ಸ್ಥಾನಗಳಲ್ಲಿ ಸುಮಾರು 54 ಪ್ರತಿಶತದಷ್ಟು ವೋಟ್ ಶೇರ್‌ನೊಂದಿಗೆ ಬಿಜೆಪಿ ಮುಂದಿದೆ. 2002ರಲ್ಲಿ ನರೇಂದ್ರ ಮೋದಿ ರಾಜ್ಯ ಮುಖ್ಯಮಂತ್ರಿಯಾಗಿದ್ದಾಗ ನಡೆದ ಚುನಾವಣೆಯಲ್ಲಿ ಬಿಜೆಪಿ 127 ಸ್ಥಾನಗಳನ್ನುಗೆದ್ದಿತ್ತು. ಈ ಬಾರಿ ಈ ಸ್ಥಾನಗಳನ್ನೂ ಕೂಡ ಬಿಜೆಪಿ ಮೀರಿಸಲಿದೆ. 1985ರಲ್ಲಿ ಮಾಧವಸಿನ್ಹ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಗುಜರಾತ್‌ನಲ್ಲ 149 ಸ್ಥಾನಗಳನ್ನು ಗೆದ್ದಿದ್ದು ಸಾರ್ವಕಾಲಿಕ ದಾಖಲೆ ಎನಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಭೂಪೇಂದ್ರ ಪಟೇಲ್ ( Gujarat CM Bhupendra Patel ), 'ಗುಜರಾತ್ ಜನತೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ, ಗುಜರಾತ್‌ನ ಜನಸಾಮಾನ್ಯರು ಬಿಜೆಪಿಯನ್ನು ಆಯ್ಕೆ ಮಾಡಿದ್ದರೆ, ಅವರ ನಿರೀಕ್ಷೆಗೆ ತಕ್ಕಂತೆ ನಾವು ಆಡಳಿತ ನೀಡುತ್ತೇವೆ' ಎಂದು ಹೇಳಿದ್ದಾರೆ.
Gujarat, HP Election Results 2022 Live: ಗುಜರಾತಲ್ಲಿ ವಿರೋಧ ಪಕ್ಷವೇ ಇಲ್ಲದ ಸರಕಾರ ರಚನೆಯಾಗುತ್ತಾ?
‘ಗುಜರಾತ್ ಜನತೆ ಈ ಚುನಾವಣೆಯಲ್ಲಿ ದೇಶವಿರೋಧಿ ಅಂಶಗಳನ್ನು ತಿರಸ್ಕರಿಸಿದ್ದು, ರಾಜ್ಯದಲ್ಲಿ ಬಿಜೆಪಿಯ ಅಭಿವೃದ್ಧಿಯ ದಾಖಲೆಗೆ ಮತ ಹಾಕಿದ್ದಾರೆ’ ಎಂದು ಅವರು ಹೇಳಿದರು."ಡೋಲ್" ರಾಜಕೀಯದಿಂದ ಗುಜರಾತ್ ಜನರನ್ನು ಕೀಳಾಗಿ ಕಾಣಲು ಪ್ರಯತ್ನಿಸುತ್ತಿರುವ ಗುಜರಾತ್ ಚುನಾವಣೆಯ ಹೊಸ ಪಕ್ಷ ಆಮ್ ಆದ್ಮಿಯನ್ನು ಟೀಕಿಸಿದ ಪಾಟೀಲ್, "ಎಎಪಿ ಗುಜರಾತಿಗಳ ಅಸ್ಮಿತೆಯ ಬಗ್ಗೆ ಎಂದಿಗೂ ಯೋಚಿಸಲಿಲ್ಲ ಮತ್ತು ಗುಜರಾತಿ ಜನರ ಮನಸ್ಸಿನೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ. " ಎಂದಿದ್ದಾರೆ. ಎಲ್ಲ ಗುಜರಾತಿ ವಿರೋಧಿ ಶಕ್ತಿಗಳನ್ನು ಸೋಲಿಸಲಾಗಿದೆ. ಜನಬೆಂಬಲವನ್ನು ಏಕೆ ಕಳೆದುಕೊಳ್ಳುತ್ತುದ್ದೇವೆ ಎಂಬುದನ್ನು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಅವರು ಹೇಳಿದರು.
Gujarat election results: ಸೋಲಿಗೆ ಹೆದರಿ ಸಾಯಲು ಯತ್ನಿಸಿದ ಕಾಂಗ್ರೆಸ್ ಅಭ್ಯರ್ಥಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶುಭಾಶಯ: ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆಯ ವಿಜಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟ್ ಮಾಡಿದ್ದಾರೆ. ಅದರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಮೋದಿಯವರ ನೇತೃತ್ವದಲ್ಲಿ ಗುಜರಾತ್ ಅಭಿವೃದ್ಧಿಯ ಹೊಸ ದಾಖಲೆಗಳನ್ನು ನಿರ್ಮಿಸಿದೆ ಮತ್ತು ಇಂದು ಗುಜರಾತ್ ಜನರು ಬಿಜೆಪಿಯನ್ನು ಆಶೀರ್ವದಿಸಿ ಹೊಸ ಗೆಲುವಿನ ದಾಖಲೆಯನ್ನು ಸೃಷ್ಟಿಸಿದ್ದಾರೆ. ಪ್ರತಿಯೊಂದು ವರ್ಗವೂ ಬಿಜೆಪಿಯನ್ನು ಮನಃಪೂರ್ವಕವಾಗಿ ಆಶೀರ್ವದಿಸಿದೆ. ಬಿಜೆಪಿಯ ನೀತಿಗಳಲ್ಲಿ ಜನರಿಗೆ ಅಚಲವಾದ ನಂಬಿಕೆ ಇದೆ ಎಂದು ಅವರು ಬರೆದಿದ್ದಾರೆ.