ಗುಜರಾತ್ ಚುನಾವಣೆಗೆ ಇಂದು ಆಪ್ ಸಿಎಂ ಅಭ್ಯರ್ಥಿ ಘೋಷಣೆ
ಗುಜರಾತ್ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲಿಯೇ ಆಮ್ ಆದ್ಮಿ ಪಾರ್ಟಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ. ಇಸುದನ್ ಗಡ್ವಿ ಹಾಗೂ ಗೋಪಾಲ್ ಇಟಾಲಿಯಾ ನಡುವೆ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಫೈಟ್ ನಡೆಯಲಿದೆ.
ಅಹಮದಾಬಾದ್ (ನ.4): ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಮ್‌ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಘೋಷಣೆಯಾಗಲಿದೆ. ಸಿಎಂ ಅಭ್ಯರ್ಥಿ ಆಯ್ಕೆಗೆ ಆಪ್ ಮತದಾರಿಂದ ದೂರವಾಣಿಯಲ್ಲಿ ಅಭಿಪ್ರಾಯ ಸಂಗ್ರಹಿಸಿತ್ತು. ಗುರುವಾರ ಸಂಜೆ 5 ಗಂಟೆಗೆ ಮತದಾನ ಮುಕ್ತಾಯವಾಗಲಿದ್ದು, ಶುಕ್ರವಾರ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪಕ್ಷದ ಸಿಎಂ ಅಭ್ಯರ್ಥಿ ಹೆಸರು ಘೋಷಿಸಲಿದ್ದಾರೆ. ಸದ್ಯ ರೇಸ್‌ನಲ್ಲಿ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಇಸುದನ್ ಗಡ್ವಿ ಮತ್ತು ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಇದ್ದಾರೆ. ಗಡ್ವಿ, ಈ ಹಿಂದೆ ಸ್ಥಳೀಯ ಸುದ್ದಿವಾಹಿನಿಯೊಂದರಲ್ಲಿ ಜನಪ್ರಿಯ ಆ್ಯಂಕರ್ ಆಗಿದ್ದವರು. ಇನ್ನು ಇಟಾಲಿಯಾ ಇತ್ತೀಚೆಗೆ ಮೋದಿ ವಿರುದ್ಧ ಕೀಳು ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇವರಿಬ್ಬರ ಪೈಕಿ ಒಬ್ಬರ ಹೆಸರು ಶುಕ್ರವಾರ ಘೋಷಣೆಯಾಗಲಿದ್ದಾರೆ. ಅರವಿಂದ್ ಕೇಜ್ರಿವಾಲ್ ಶುಕ್ರವಾರದಿಂದ 5 ದಿನ ಗುಜರಾತ್ ಪ್ರವಾಸ ಕೈಗೊಳ್ಳಲಿದ್ದು, 11 ಕಡೆ ರೋಡ್ ಶೋ ನಡೆಸಲಿದ್ದಾರೆ.
ಈ ಮೊದಲು ಪಂಜಾಬ್ ಚುನಾವಣೆಯಲ್ಲೂ ಸಿಎಂ ಅಭ್ಯರ್ಥಿ ಆಯ್ಕೆಗೆ ಆಪ್ ಇದೇ ತಂತ್ರ ಅನುಸರಿಸಿತ್ತು. ಜನರ ಆಯ್ಕೆಯಲ್ಲಿ ಮುಂದಿದ್ದ ಭಗವಂತ್ ಮಾನ್ ಅವರನ್ನೇ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು.
ಕಳೆದ ವಾರ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುಜರಾತ್‌ನಲ್ಲಿ ಪಕ್ಷದ ಸಿಎಂ ಅಭ್ಯರ್ಥಿ ಯಾರಾಗಬೇಕು ಎನ್ನುವ ನಿಟ್ಟಿನಲ್ಲಿ ಆಯ್ಕೆ ಮಾಡಲು ಪ್ರಚಾರವನ್ನು ಪ್ರಾರಂಭಿಸಿದರು. "ಗುಜರಾತ್‌ನ ವಾತಾವರಣವು ಎಎಪಿ ಸರ್ಕಾರವನ್ನು ರಚಿಸಲಿದೆ ಎಂದು ಸೂಚನೆ ನೀಡಿದೆ. ನಾವು ಗುಜರಾತ್‌ನ ಜನರಿಗೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಕೇಳಲು ಬಯಸುತ್ತೇವೆ ಮತ್ತು ಅದಕ್ಕಾಗಿ ನಾವು ಸಂಪರ್ಕ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನೀಡುತ್ತಿದ್ದೇವೆ ..." ಎಂದು ಅವರು ಹೇಳಿದ್ದರು.
ಗುಜರಾತ್ ಚುನಾವಣೆ ದಿನಾಂಕ ಪ್ರಕಟ, ಉಚಿತ ಆಫರ್ ಘೋಷಿಸಿದ ಕೇಜ್ರಿವಾಲ್!
ಬಿಜೆಪಿಗೆ ಅನುಕೂಲ ಮಾಡಿಕೊಡಲು ವಿಳಂಬ- ಕಾಂಗ್ರೆಸ್: ಅ.14ರಂದು ಹಿಮಾಚಲ ಪ್ರದೇಶಕ್ಕೆ ಚುನಾವಣೆ ಘೋಷಿಸಿದಾಗಲೇ ಗುಜರಾತ್‌ಗೂ ಚುನಾವಣೆ ಘೋಷಿಸಲಾಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ, ಅಂದು ಘೋಷಿಸದೆ ಗುಜರಾತ್‌ಗೆ ಈಗ ಚುನಾವಣೆ ಘೋಷಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ಕಿಡಿಕಾರಿದ್ದು, ಬಿಜೆಪಿಗೆ ಅನುಕೂಲ ಮಾಡಿಕೊಡಲೆಂದೇ ಚುನಾವಣಾ ಆಯೋಗ ವಿಳಂಬ ಮಾಡಿದೆ. ಸರ್ಕಾರದ ಖರ್ಚಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಗುಜರಾತ್‌ನಲ್ಲಿ ನಾನಾ ಸಮಾವೇಶಗಳನ್ನು ನಡೆಸಲು ಅನುಕೂಲ ಮಾಡಿಕೊಡುವುದಕ್ಕೆ ಚುನಾವಣಾ ಆಯೋಗ ಹೀಗೆ ಮಾಡಿದೆ. ಹಿಮಾಚಲ ಪ್ರದೇಶದ ಜೊತೆಗೇ ಮತ ಎಣಿಕೆ ಮಾಡಲಿರುವುದರಿಂದ ಚುನಾವಣಾ ದಿನಾಂಕವನ್ನು ಏಕೆ ತಡವಾಗಿ ಪ್ರಕಟಿಸಬೇಕಿತ್ತು ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.
Gujarat Election 2022: ಗುಜರಾತ್‌ನಲ್ಲಿ ಡಿಸೆಂಬರ್ 1, 5ಕ್ಕೆ ಎರಡು ಹಂತದ ಮತದಾನ, 8ಕ್ಕೆ ಫಲಿತಾಂಶ!
ವಿಳಂಬ ಮಾಡಿಲ್ಲ- ಚುನಾವಣಾ ಆಯೋಗ: ಮೋರ್ಬಿ ದುರಂತದಿಂದಾಗಿ ಗುಜರಾತ್‌ನಲ್ಲಿ ಶೋಕಾಚರಣೆಯಿತ್ತು. ಗುಜರಾತ್ ವಿಧಾನಸಭೆಯ ಅವಧಿ 2023ರ ಫೆಬ್ರವರಿ 18ರವರೆಗೂ ಇದೆ. 110 ದಿನ ಮೊದಲೇ ಚುನಾವಣೆ ಘೋಷಿಸಿದ್ದೇವೆ. ಒಂದು ರಾಜ್ಯಕ್ಕೆ ಚುನಾವಣಾ ದಿನಾಂಕಗಳನ್ನು ನಿಗದಿಪಡಿಸುವಾಗ ಹಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಹೀಗಾಗಿ ಗುಜರಾತ್ ಚುನಾವಣೆ ಘೋಷಣೆಯಲ್ಲಿ ವಿಳಂಬ ಮಾಡಿಲ್ಲ ಹಾಗೂ ಯಾವುದೇ ರಾಜಕೀಯ ಪಕ್ಷಕ್ಕೆ ಅನುಕೂಲವನ್ನೂ ಮಾಡಿಕೊಟ್ಟಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.