Gujarat Election Result 2022: ಮೋದಿ-ಅಮಿತ್ ಶಾ ತವರಲ್ಲಿ ಅರಳಿದ ಕಮಲ, ಆರೆಸ್ಸೆಸ್ ತಂತ್ರಗಾರಿಕೆ ಸಿಕ್ಕ ಫಲ!
ದೇಶವನ್ನೆಲ್ಲಾ ಗೆದ್ದು ತನ್ನ ನೆಲದಲ್ಲಿ ರಾಜ ಸೋತಂತ ಪರಿಸ್ಥಿತಿ 2017ರ ಗುಜರಾತ್ ವಿಧಾನಸಭೆ ಚುನಾವಣೆಯ ವೇಳೆ ನಡೆದಿತ್ತು. ಇಡೀ ದೇಶದಲ್ಲಿ ಮೋದಿ ಹಾಗೂ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, 2017ರ ಗುಜರಾತ್ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ತವರು ಗ್ರಾಮದಲ್ಲಿಯೇ ಬಿಜೆಪಿ ನೆಲಕಚ್ಚಿತ್ತು. ಆದರೆ, ಈ ಬಾರಿ ಆರೆಸ್ಸೆಸ್ ತಂತ್ರಗಾರಿಕೆಯೊಂದಿಗೆ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಾಧಿಸಿದೆ.
ಅಹಮದಾಬಾದ್ (ಡಿ.8): ಪ್ರಧಾನಿ ನರೇಂದ್ರ ಮೋದಿ ಅವರ ತವರು ವಡ್‌ನಗರ ಗ್ರಾಮ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾನ್ಸಾ ಗ್ರಾಮದಲ್ಲಿ ಈ ಬಾರಿ ಬಿಜೆಪಿ ಅರಳಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿತ್ತು. ಆದರೆ, ಈ ಬಾರಿ ಸಂಪೂರ್ಣ ಭಿನ್ನ ತಂತ್ರಗಾರಿಕೆ ಮಾಡಿದ ಬಿಜೆಪಿ, ವಡ್‌ನಗರ ಹಾಗೂ ಮಾನ್ಸಾದಲ್ಲಿ ಕಮಲವನ್ನು ಅರಳಿಸಲು ಯಶಸ್ವಿಯಾಗಿದೆ. ವಡ್‌ನಗರ ಗ್ರಾಮ ಒಳಗೊಂಡಿರುವ ಊಂಜಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಿರೀತ್‌ಭಾಯಿ ಪಟೇಲ್ ಬರೋಬ್ಬರಿ 46 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಅರವಿಂದ್ ಪಟೇಲ್ ಹಾಗೂ ಆಪ್‌ನ ಊರ್ವೀಶ್ ಕುಮಾರ್ ಪಟೇಲ್ ರನ್ನು ಇವರು ಸೋಲಿಸಿದ್ದಾರೆ. ಮಾನ್ಸಾದಲ್ಲಿ ಪಕ್ಷದ ಅಭ್ಯರ್ಥಿ ಜಯಂತಿ ಭಾಯಿ ಪಟೇಲ್ ಮುನ್ನಡೆ ಕಂಡುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ತವರು ಊಂಜಾ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಕೀರ್ತಿಭಾಯಿ ಪಟೇಲ್‌ಗೆ ಟಿಕೆಟ್ ನೀಡಿತ್ತು. ಕಿರೀತ್‌ಭಾಯಿ ಪಟೇಲ್ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಆಪ್ತ ಎಂದು ಹೆಸರಾಗಿದ್ದವರು.
ಬಿಜೆಪಿ ಕಾರ್ಯಕರ್ತರ ಪ್ರಕಾರ, ಕಿರೀತ್ ಪಟೇಲ್ ಹೆಸರು ನಿರ್ಧಾರವಾಗುವ ಮೊದಲು, ಟಿಕೆಟ್ ವಿಷಯದಲ್ಲಿ ಗುಂಪುಗಾರಿಕೆ ಇತ್ತು. ಆದರೆ, ಕಿರೀತ್ ಹೆಸರು ಪ್ರಕಟವಾದ ಬಳಿಕ ಈ ಎಲ್ಲಾ ಗುಂಪುಗಾರಿಕೆ ಕೊನೆಯಾಗಿತ್ತು. ಆರೆಸ್ಸೆಸ್ ಮುಖ್ಯಸ್ಥರ ನಿಕಟವರ್ತಿಯಾದ ಕಾರಣ, ಸಂಘದ ಸ್ವಯಂಸೇವಕರು ಅವರ ಪರವಾಗಿ ಪ್ರಚಾರ ಮಾಡಲು ಒಂದು ಸಣ್ಣ ಅವಕಾಶವನ್ನೂ ಬಿಡಲಿಲ್ಲ.
2017ರಲ್ಲಿ ಊಂಜಾದಲ್ಲಿ ಸೋತಿತ್ತು ಬಿಜೆಪಿ: ಊಂಜಾ ವಿಧಾನಸಭಾ ಕ್ಷೇತ್ರ ಬಿಜೆಪಿಯ ಪ್ರಾಬಲ್ಯವಿರುವ ಕ್ಷೇತ್ರವಾಗಿತ್ತು. 1995ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ. 2017ರಲ್ಲಿ ಕಾಂಗ್ರೆಸ್‌ನ ಆಶಾ ಪಟೇಲ್ ಬಿಜೆಪಿಯ ನಾರಾಯಣ್ ಭಾಯ್ ಲಲ್ಲುದಾಸ್ ಅವರನ್ನು ಸೋಲಿಸಿದ್ದರು. ಅದಕ್ಕೆ ಎರಡು ಕಾರಣಗಳಿದ್ದವು. ಆಗ ಇದ್ದ ಪಾಟಿದಾರ್ ಚಳವಳಿ ಇದಕ್ಕೆ ಕಾರಣವಾಗಿದ್ದರೆ, ಇನ್ನೊಂದು ನಾಲ್ಕು ಬಾರಿಯ ಶಾಸಕರಾಗಿದ್ದ ನಾರಾಯಣ್ ಭಾಯ್ ವಿರುದ್ಧದ ಅಸಮಾಧಾನವೂ ಮುಖ್ಯವಾಗಿತ್ತು. ಹಾಗಾಗಿ ಈ ಬಾರಿ ಇಡೀ ಊಂಜಾ ಕ್ಷೇತ್ರದ ಪ್ರಚಾರದಿಂದ ಹಿಡಿದು ಸಂಪೂರ್ಣ ಕಾರ್ಯದ ಜವಾಬ್ದಾರಿಯನ್ನು ಆರೆಸ್ಸೆಸ್ ವಹಿಸಿಕೊಂಡಿತ್ತು. ಈ ಕ್ಷೇತ್ರಕ್ಕೆ ಅಭ್ಯರ್ಥಿ ಫೈನಲ್ ಆಗುವ ಮುನ್ನವೇ ಕಿರೀತ್ ಹೆಸರಲ್ಲಿ ಊಂಜಾದಲ್ಲಿ ಆರೆಸ್ಸೆಸ್ ದೊಡ್ಡ ಮಟ್ಟದ ಪ್ರಚಾರ ನಡೆಸಿತ್ತು.
ಕಾಂಗ್ರೆಸ್ ಎದುರಾಳಿಯೇ ಇಲ್ಲಿ ಗೆಲ್ಲೋದು: ಊಂಜಾದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಟೇಲ್ ಬಾಬುಲಾಲ್ ನತಲಾಲ್ ಅವರು ಹೇಳುವ ಪ್ರಕಾರ, ಕಳೆದ 50 ವರ್ಷಗಳಿಂದ ಕಾಂಗ್ರೆಸ್ ವಿರುದ್ಧದ ಪಕ್ಷದ ಅಭ್ಯರ್ಥಿ ಇಲ್ಲಿ ಗೆಲ್ಲುತ್ತಿದ್ದಾರೆ. ಮೊದಲು ಜನತಾದಳದ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಬಳಿಕ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲಲು ಆರಂಭಿಸಿದರು. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಪಾಟಿದಾರರ ಹೆಚ್ಚಿನ ಜನಸಂಖ್ಯೆ. ಪಾಟೀದಾರ್‌ಗಳು ಎಂದಿಗೂ ಕಾಂಗ್ರೆಸ್‌ಗೆ ಮತ ಹಾಕೋದಿಲ್ಲ. ಬ್ರಾಹ್ಮಣ, ಬನಿಯಾ, ಮೋದಿ ಮತ್ತು ಪ್ರಜಾಪತಿ 20 ವರ್ಷಗಳ ಹಿಂದೆ ಕಾಂಗ್ರೆಸ್ ಮತದಾರರಾಗಿದ್ದರು, ಆದರೆ ಅವರು ಈಗ ಬಿಜೆಪಿಯ ಭದ್ರ ಮತಬ್ಯಾಂಕ್ ಆಗಿದ್ದಾರೆ.
Gujarat, HP Election Results 2022 Live: ಗುಜರಾತ್‌ನಲ್ಲಿ ಬಿಜೆಪಿ 156 ಕ್ಷೇತ್ರಗಳಲ್ಲಿ ಮುನ್ನಡೆ
ಮಾನ್ಸಾಗಾಗಿ ಅಮಿತ್ ಶಾ ತಂತ್ರ: ಇನ್ನು ಮಾನ್ಸಾದಲ್ಲಿ ಗೆಲುವಿಗಾಗಿ ಅಮಿತ್ ಶಾ ರಣತಂತ್ರ ರೂಪಿಸಿದ್ದರು. ಹಿಂದಿನ ಎರಡೂ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಇಡೀ ಚುನಾವಣೆಯ ರೂಪುರೇಷೆ ಅಮಿತ್ ಶಾ ನೇತೃತ್ವದಲ್ಲಿಯೇ ನಡೆದಿತ್ತು. ಮಾನ್ಸಾ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಮಾಡುವುದನ್ನೂ ಬಿಜೆಪಿ ಅದೇ ಕಾರಣಕ್ಕೆ ತಡ ಮಾಡಿತ್ತು. ಸಾಕಷ್ಟು ಸಮೀಕ್ಷೆಗಳ ಬಳಿಕ ಜಯಂತಿ ಪಟೇಲ್‌ಗೆ ಟಿಕೆಟ್ ನೀಡಲಾಗಿತ್ತು. ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಮೋಹನ್ ಸಿಂಗ್ ಠಾಕೂರ್‌ರನ್ನು ಕಣಕ್ಕೆ ಇಳಿಸಿತ್ತು.
ಆಪರೇಷನ್ ಕಮಲದ ಭೀತಿ, ಗೆಲುವಿನ ಬಳಿಕ ತಕ್ಷಣವೇ ಕಚೇರಿಗೆ ಬನ್ನಿ, ಕಾಂಗ್ರೆಸ್ ಆದೇಶ!
ಪಾಟೀದಾರ್ ಮನ ಗೆದ್ದ ಬಿಜೆಪಿ: ಮಾನ್ಸಾದಲ್ಲಿ ಪಾಟೀದಾರ್ ಸಂಖ್ಯೆ ಹೆಚ್ಚಿದೆ. ಅಂದಾಜು 45 ಸಾವಿರ ವೋಟ್‌ಗಳನ್ನು ಹೊಂದಿದ್ದಾರೆ. ಇನ್ನು ಠಾಕೂರ್‌ಗಳ ವೋಟು 42 ಸಾವಿರವಿದ್ದರೆ, ರಜಪೂತರು 30 ಸಾವಿರ ಹಾಗೂ ಚೌಧರಿ 23 ಸಾವಿರ ಮತಗಳಿವೆ. ಬ್ರಾಹ್ಮಣ ಹಾಗೂ ಬನಿಯಾ ಜನಸಂಖ್ಯೆ ಬಹಳ ಕಡಿಮೆ ಇದೆ. ಈ ಬಾರಿ ಪಾಟಿದಾರರ ಮತಗಳನ್ನು ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂಬುದನ್ನು ಗಮನಿಸಬಹುದಾಗಿದೆ. ಮಾನ್ಸಾದಲ್ಲಿ ಬಹುತೇಕ ಎಲ್ಲಾ ಪಕ್ಷಗಳು ಪಾಟಿದಾರ್ ಹಾಗೂ ಠಾಕೂರ್ ಮತಗಳು ಒಂದಡೆ ಬೀಳಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟ ಮಾಡುತ್ತವೆ. ಈ ಎರಡೂ ಸಮುದಾಯದವರ ವೋಟ್ ಬಿದ್ದಲ್ಲಿ ಯಾವ ಪಕ್ಷದ ಅಭ್ಯರ್ಥಿ ಬೇಕಾದರೂ ಇಲ್ಲಿ ಗೆಲುವು ಸಾಧಿಸಬಹುದಾಗಿದೆ.