ಬದುಕಿರುವಾಗಲೇ ‘ಗುಬ್ಬಿ ಶಾಸಕ ಶ್ರೀನಿವಾಸ್ ತಿಥಿ ಕಾರ್ಡ್’ ವೈರಲ್

* ಮುಗಿಯುತ್ತಲೇ ಇಲ್ಲ ಗುಬ್ಬಿ ಶಾಸಕ ಶ್ರೀನಿವಾಸ್ ಮತ್ತು ಕುಮಾರಸ್ವಾಮಿ ನಡುವಿನ ಜಟಾಪಟಿ.
* ಉಭಯ ನಾಯಕರ ಅಭಿಮಾನಿಗಳ ನಡುವೆಯೂ ಹೆಚ್ಚಾಗಿದೆ ಪೈಪೋಟಿ.
* ಇಬ್ಬರು ನಾಯಕರ ತಿಥಿ ಕಾರ್ಡ್ ಹಂಚಲು ಸಾಮಾಜಿಕ ಜಾಲತಾಣದಲ್ಲಿ ಪೈಪೋಟಿ.

gubbi Srinivas death anniversary cards created By JDS Workers rbj

ತುಮಕೂರು, (ಜೂನ್.11): ರಾಜ್ಯಸಭೆ ಚುನಾವಣೆಯಲ್ಲಿ ಗುಬ್ಬಿ ಶ್ರೀನಿವಾಸ್‌ ಗೌಡ ಹಾಗೂ ಕೋಲಾರ ಶ್ರೀನಿವಾಸ್ ಅಡ್ಡಮತದಾನ ಮಾಡಿದ್ದು, ಜೆಡಿಎಸ್‌ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೇ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಕಾರ್ಯಕರ್ತರು ಶ್ರೀನಿವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಷ್ಟಕ್ಕೆ ಬಿಡದೇ ಜೆಡಿಎಸ್ ಕಾರ್ಯಕರ್ತರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಬದುಕಿದ್ದರೂ ಅವರ ಫೋಟೋ ಸಹಿತ ತಿಥಿ ಕಾರ್ಡ್​ ತಯಾರಿಸಿ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ಫೇಸ್​ಬುಕ್​ನಲ್ಲಿ ಪ್ರಚಂಡ ಭೈರವ ಹೆಸರಿನ ಖಾತೆಯಿಂದ ತಿಥಿ ಕಾರ್ಡ್​ ಅಪ್​ಲೋಡ್​ ಆಗಿದ್ದು, ಹಲವರಿಗೆ ಟ್ಯಾಗ್​ ಮಾಡಲಾಗಿದೆ. ಈ ಕಾರ್ಡ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೂನ್​ 10ರಂದು ನಿಧನರಾಗಿದ್ದಾರೆ, ಜೂನ್​ 21ರಂದು ಸ್ವಕ್ಷೇತ್ರ ಗುಬ್ಬಿಯಲ್ಲಿ ಕೈಲಾಸ ಸಮಾರಾಧಾನೆ ನಡೆಯಲಿದೆ ಎಂದು ಬರೆಯಲಾಗಿದೆ. ಶ್ರೀನಿವಾಸ್​ರ ಅಭಿಮಾನಿಗಳು ಇದನ್ನು ನೋಡಿ ವಿಕೃತಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕುಮಾರಸ್ವಾಮಿ ಊಸರವಳ್ಳಿ ಇದ್ದಂತೆ, ದೊಡ್ಡ ನಾಟಕಕಾರ: ಗುಬ್ಬಿ ಶ್ರೀನಿವಾಸ್ ಕೆಂಡ

ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಶ್ರೀನಿವಾಸ್​ ಅಡ್ಡ ಮತದಾನ ಮಾಡಿದ್ದರು. ಈ ಬಗ್ಗೆ ಎಚ್​ಡಿಕೆ ಗರಂ ಆಗಿದ್ದರು. ಶನಿವಾರ ಬೆಳಗ್ಗೆ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಶ್ರೀನಿವಾಸ್​, ತಾಕತ್ತಿದ್ದರೆ ನನ್ನ ಕ್ಷೇತ್ರದಲ್ಲಿ ನನ್ನ ವಿರುದ್ಧ ಚುನಾವಣೆಗೆ ಬಂದು ಸ್ಪಧಿಸಿ ಗೆಲ್ಲಲಿ. ಅವನು ಗೆದ್ದರೆ ನನ್ನ ಜೀವನ ಪೂರ ಆತನ ಮನೆಯಲ್ಲೇ ಕೂಲಿ ಕೆಲಸ ಮಾಡುವೆ ಎಂದು ಓಪನ್​ ಚಾಲೆಂಜ್​ ಮಾಡಿದ್ದರು. ಅಷ್ಟೇ ಅಲ್ಲ, ಇಂದು ತುಮಕೂರಲ್ಲಿ ಶ್ರೀನಿವಾಸ್​ರ ಮನೆ ಮುಂದೆ ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಶ್ರೀನಿವಾಸ್​ ಪರ ಇವರ ಅಭಿಮಾನಿಗಳೂ ಪ್ರತಿಭಟನೆ ನಡೆಸಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಶ್ರೀನಿವಾಸ್​ ಹೆಸರಲ್ಲಿ ತಿಥಿ ಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಈ ಬಗ್ಗೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಗುಬ್ಬಿ ಶಾಸಕ ಶ್ರೀನಿವಾಸ್, ಕುಮಾರಸ್ವಾಮಿದು ಕಚ್ಚೆ ಸರಿ ಇಲ್ಲ, ಬಾಯಿ ಸರಿ ಇಲ್ಲ. ಹೀಗಿದ್ದೂ ಇನ್ನೊಬ್ಬರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇವರಿಗೆ ಇದೆ.? ಇವನ ವಿರುದ್ಧ ಹೋರಾಟ ಮಾಡೋದೇ ನನ್ನ ಮುಂದಿನ ನಡೆ ಎಂದು ಗುಡುಗಿದರು.

ಜೆಡಿಎಸ್ ವಿರುದ್ದ ಅಡ್ಡ ಮತದಾನ ಮಾಡಿದ್ದೂ ಅಲ್ಲದೆ ಹೆಚ್​.ಡಿ. ಕುಮಾರಸ್ವಾಮಿ ಅವರಿಗೆ ಏಕವಚನ ಬಳಸಿ ಮಾತನಾಡಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಗುಬ್ಬಿ ಶ್ರೀನಿವಾಸ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ನಲ್ಲಿರುವ ಕೋಲಾರ ಶಾಸಕ ಶ್ರೀನಿವಾಸ ಗೌಡ ಅವರ ಮನೆ ಮುಂದೆ ಕೂಡಾ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಇಬ್ಬರ ತಿಥಿ ಕಾರ್ಡ್​ಗಳನ್ನು ಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್​​​ಲೋಡ್ ಮಾಡಲಾಗಿದೆ.

ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗುಬ್ಬಿ ಶಾಸಕ ಎಸ್​. ಆರ್. ಶ್ರೀನಿವಾಸ್ ಖಾಲಿ ಬ್ಯಾಲೆಟ್ ಪೇಪರನ್ನು ಮತಪೆಟ್ಟಿಗೆಯೊಳಗೆ ಹಾಕಿದ್ದಾರೆ ಎನ್ನಲಾದರೆ, ಕೋಲಾರ ಶಾಸಕ ಶ್ರೀನಿವಾಸ ಗೌಡ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರು. ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ಹೆಚ್​.ಡಿ. ಕುಮಾರಸ್ವಾಮಿ ನನಗೆ ಗುಬ್ಬಿ ಶ್ರೀನಿವಾಸ್ ಮೇಲೆ ಮೊದಲಿನಿಂದಲೂ ಅನುಮಾನ ಇತ್ತು. ನಿನ್ನೆಯೇ ನಾನು ಅವರೊಂದಿಗೆ ಮಾತನಾಡಿದ್ದೆ. ನಿಮಗೆ ಇಷ್ಟವಿಲ್ಲದಿದ್ದರೆ ಮತದಾನ ಮಾಡುವುದಿಲ್ಲ ಎಂದು ಹೇಳಿಬಿಡಿ. ನನಗೆ ಖಂಡಿತ ಬೇಸರವಿಲ್ಲ, ನನಗೆ ಅವರ ಬಗ್ಗೆ ನಿರೀಕ್ಷೆ ಇರಲಿಲ್ಲ. ಖಾಲಿ ಬ್ಯಾಲೆಟ್ ಪೇಪರನ್ನು ಪೆಟ್ಟಿಗೆಯೊಳಗೆ ಹಾಕಿ ನಾನು ಜೆಡಿಎಸ್​​​ಗೆ ಮತ ಹಾಕಿದೆ ಎಂದು ಟ್ವೀಟ್​​​​ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಜನರೇ ಅರ್ಥ ಮಾಡಿಕೊಳ್ಳಲಿ. ಅವರಿಗೆ ಆತ್ಮಸಾಕ್ಷಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

Latest Videos
Follow Us:
Download App:
  • android
  • ios