ಕಳೆದ ನಾಲ್ಕೈದು ತಿಂಗಳಿಂದ ಗ್ಯಾರಂಟಿ ಹಣವೇ ಬಂದಿಲ್ಲ, ಯಾವುದಾದರೂ ಚುನಾವಣೆಗಳು ಸಮೀಪಿಸಿದಾಗ ಮಾತ್ರ ಮ್ಯಾಜಿಕ್‌ ಆಗಿ ಗೃಹಲಕ್ಷ್ಮಿ, ಯುವನಿಧಿ ಹಣ ಜಮೆಯಾಗುತ್ತದೆ ಎಂದು ಸರ್ಕಾರದ ವಿರುದ್ಧ ಜೆಡಿಎಸ್‌ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದ್ದಾರೆ. 

ಬೆಂಗಳೂರು (ಫೆ.28): ಕಳೆದ ನಾಲ್ಕೈದು ತಿಂಗಳಿಂದ ಗ್ಯಾರಂಟಿ ಹಣವೇ ಬಂದಿಲ್ಲ, ಯಾವುದಾದರೂ ಚುನಾವಣೆಗಳು ಸಮೀಪಿಸಿದಾಗ ಮಾತ್ರ ಮ್ಯಾಜಿಕ್‌ ಆಗಿ ಗೃಹಲಕ್ಷ್ಮಿ, ಯುವನಿಧಿ ಹಣ ಜಮೆಯಾಗುತ್ತದೆ ಎಂದು ಸರ್ಕಾರದ ವಿರುದ್ಧ ಜೆಡಿಎಸ್‌ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ವಿಳಂಬ ಮಾಡದೆ, ಕಾರಣವೂ ಹೇಳದೆ ಹಣ ವರ್ಗಾಯಿಸಬೇಕು. ಗ್ಯಾರಂಟಿ ಹಣ ಜಮೆಗೆ ನಿಗದಿತ ದಿನಾಂಕ ಘೋಷಣೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ರೂಪಿಸುವಲ್ಲಿ ನಿರತರಾಗಿದ್ದಾರೆ. ವಿಪರ್ಯಾಸವೆಂದರೆ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹಣಕ್ಕಾಗಿ ಮೂರ್ನಾಲ್ಕು ತಿಂಗಳು ಕಾಯಬೇಕಾಗಿದೆ. ಯಾವುದಾದರೂ ಚುನಾವಣೆಗಳು ಸಮೀಪಿಸಿದಾಗ ಮಾತ್ರ ಮ್ಯಾಜಿಕ್ ಆಗಿ ಹಣ ಜಮೆಯಾಗುತ್ತೆ. ಗೃಹಲಕ್ಷ್ಮಿ ಮತ್ತು ಯುವ ನಿಧಿ ಸೇರಿ ಐದು ಗ್ಯಾರಂಟಿ ಯೋಜನೆಗಳ ಭರವಸೆಯೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಪ್ರತಿ ತಿಂಗಳು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡುವುದಾಗಿ ಬಣ್ಣದ ಮಾತುಗಳನ್ನು ಹೇಳಿತ್ತು. ಆದರೆ, ನುಡಿದಂತೆ ನಡೆಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ಗೆ ತಿರಸ್ಕಾರ: ಗ್ಯಾರಂಟಿ ಯೋಜನೆಗಳಿಂದಲೇ ಜನರು ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ಪಕ್ಷದ ಸಂಘಟನೆ ಹಾಗೂ ಮುಂದಿನ ಪಂಚಾಯಿತಿ ಚುನಾವಣೆಗಳ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಲಿ, ಮಾಜಿ ಶಾಸಕರು, ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ಉಪ ಚುನಾವಣೆಯಲ್ಲಿ ಆಪಕ್ಷದ ಅಭ್ಯರ್ಥಿಗಳು ಅಧಿಕಾರ, ಹಣಬಲ, ತೋಳ್ಬಲದಿಂದ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿದರು.

ಮುಸ್ಲಿಮರನ್ನು ಬ್ರದರ್ಸ್‌ ಎಂದಿದ್ದ ಡಿಸಿಎಂ ಹೊಸ ಅವತಾರ: ಡಿ.ಕೆ.ಶಿವಕುಮಾರ್‌ ಹಿಂದೂ ಮಂತ್ರ ಏಕೆ?

ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಮಹಿಳೆಯರಿಗೆ ಮಾತ್ರ ಮೂರು ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಮಾಡಿದರು. ರಾಜ್ಯದ ಎಲ್ಲ ಮಹಿಳೆಯರಿಗೆ ಈ ಸೌಭಾಗ್ಯ ಇಲ್ಲ. ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಮಾತನಾಡಿ ಇದು ಕೇವಲ ಕಾರ್ಯಕರ್ತರ ಚುನಾವಣೆಯಾಗಿದೆ. ಅಲ್ಲದೆ ಎರಡು ಪಕ್ಷಗಳ ಸಮನ್ವಯ ಸಮಿತಿ ಮತ್ತು ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ. ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಈಗಾಗಲೇ ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದರು.