Asianet Suvarna News Asianet Suvarna News

ತೆಲಂಗಾಣದಲ್ಲಿ ಸೋನಿಯಾ ಜನ್ಮದಿನಕ್ಕೆ ‘ಗ್ಯಾರಂಟಿ ಗಿಫ್ಟ್’: ಡಿ.ಕೆ.ಶಿವಕುಮಾರ್‌

ಜನರು ಬದಲಾವಣೆಯನ್ನು ಬಯಸಿದ್ದಾರೆ. ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್ ಅವರನ್ನು ಶಾಶ್ವತವಾಗಿ ಅವರ ಫಾರ್ಮ್‌ಹಾಸ್‌ಗೇ ಸೀಮಿತಗೊಳಿಸುವುದನ್ನು ನೋಡಲು ಇಚ್ಛಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Guarantee gift for Sonia Gandhi birthday in Telangana Says DK Shivakumar gvd
Author
First Published Nov 26, 2023, 2:00 AM IST

ಹೈದರಾಬಾದ್ (ನ.26): ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಬಳಿಕ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರ ಜನ್ಮದಿನವಾದ ಡಿಸೆಂಬರ್‌ 9 ರಂದೇ ಕಾಂಗ್ರೆಸ್‌ ಸರ್ಕಾರ ತನ್ನ ಮೊದಲ ಕ್ಯಾಬಿನೆಟ್‌ ಸಭೆ ನಡೆಸಲಿದ್ದು, ಅಂದೇ ರಾಜ್ಯಕ್ಕೆ ಕಾಂಗ್ರೆಸ್‌ ಭರವಸೆ ನೀಡಿರುವ 6 ಗ್ಯಾರಂಟಿಗಳನ್ನು ಜಾರಿ ಮಾಡುವ ನಿರ್ಣಯ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಟೀವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ‘ಜನರು ಬದಲಾವಣೆಯನ್ನು ಬಯಸಿದ್ದಾರೆ. ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್ ಅವರನ್ನು ಶಾಶ್ವತವಾಗಿ ಅವರ ಫಾರ್ಮ್‌ಹಾಸ್‌ಗೇ ಸೀಮಿತಗೊಳಿಸುವುದನ್ನು ನೋಡಲು ಇಚ್ಛಿಸಿದ್ದಾರೆ’ ಎಂದಿದರು. ಇದೇ ವೇಳೆ ತಮ್ಮ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮೋದನೆಯನ್ನು ಕರ್ನಾಟಕ ಸರ್ಕಾರ ಹಿಂಪಡೆದುಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಲೋಪದೋಷಗಳಿವೆ. ನನಗೆ ನಾನೇ ವಕೀಲನಾಗಲು ಇಚ್ಛಿಸಲ್ಲ. ನಾನು ಅಂದು ಕ್ಯಾಬಿನೆಟ್‌ ಸಭೆಗೆ ಹೋಗಿರಲಿಲ್ಲ. 

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲುವುದು ಖಚಿತ: ಕೇಂದ್ರ ಸಚಿವ ಭಗವಂತ್ ಖೂಬಾ

ಇದು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ. ಯಾವುದೇ ಅನುಮತಿ ನೀಡಿದರೂ ಅದು ಅಸಿಂಧು ಎಂದು ನಾನು ಅರ್ಜಿ ಸಲ್ಲಿಸಿದ್ದೆ. ಆದರೆ ಅನುಮತಿ ನೀಡಿಕೆ ಸರಿ ಅಲ್ಲ ಎಂದು ಅಂದಿನ ಅಡ್ವೊಕೇಟ್ ಜನರಲ್‌ ಹೇಳಿದ್ದರು. ಈಗಿನ ನಿರ್ಧಾರದ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು. ಇದೇ ವೇಳೆ ಜಾತಿಗಣತಿಯ ಪುಟಗಳು ನಾಪತ್ತೆಯಾಗಿದ್ದು, ರಾಜಕೀಯ ತಂತ್ರವೇ, ವರದಿಯನ್ನು ಮುಚ್ಚಿಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನಾವು ಘೋಷಿಸಿರುವ ಜಾತಿಗಣತಿ ಅಥವಾ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗೆ ನಾವು ಬದ್ಧರಾಗಿದ್ದೇವೆ. ಅದು ವ್ಯವಸ್ಥಿತವಾಗಿ ನಡೆಯಬೇಕಿದೆ. ಈ ಬಗ್ಗೆ ನಾನು ಹೆಚ್ಚೇನು ಹೇಳಲ್ಲ’ ಎಂದರು.

ಶಕ್ತಿ ಯಶಸ್ಸೇ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ: ಶಕ್ತಿ ಯೋಜನೆ ಅಡಿಯಲ್ಲಿ 100.47 ಕೋಟಿ ಮಹಿಳೆಯರು ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ. ಆ ಮೂಲಕ ಯೋಜನೆ ವಿರೋಧಿಸಿದ್ದ ಪ್ರತಿಪಕ್ಷಗಳಿಗೆ ತಕ್ಕ ಉತ್ತರ ಸಿಕ್ಕಂತಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಲ್ಲೊಂದಾಗಿರುವ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಶತಕೋಟಿ ದಾಟಿರುವುದು ಅಭಿನಂದನೀಯ. ಜೂ.11ಕ್ಕೆ ಆರಂಭವಾಗಿದ್ದ ಯೋಜನೆ ಅಡಿಯಲ್ಲಿ ನ. 23ಕ್ಕೆ 100.47 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. 

ಡಿಕೆಶಿ ಸಿಬಿಐ ತನಿಖೆ ವಾಪಸ್‌ ಕಾನೂನು ಬಾಹಿರ: ಸಂಸದ ಬಿ.ವೈ.ರಾಘವೇಂದ್ರ

ಇದನ್ನು ನಾವು ಹೇಳುತ್ತಿಲ್ಲ. ದಾಖಲೆಗಳು ಹೇಳುತ್ತವೆ. ಯೋಜನೆಯು ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಅಭಿವೃದ್ಧಿಗೆ ಪೂರಕವಾಗಿದೆ. ಶಕ್ತಿ ಯೋಜನೆಯಿಂದ ನಷ್ಟವುಂಟಾಗುತ್ತದೆ, ರಾಜ್ಯ ಆರ್ಥಿಕ ದಿವಾಳಿಯಾಗುತ್ತದೆ ಎಂದು ಪ್ರತಿಪಕ್ಷಗಳು ಸಾಕಷ್ಟು ಆರೋಪ ಮಾಡಿದ್ದವು. ಆದರೆ, ಶಕ್ತಿ ಯೋಜನೆಯ ಯಶಸ್ಸು ಅದಕ್ಕೆ ತಕ್ಕ ಉತ್ತರ ನೀಡಿದೆ. ಆರ್ಥಿಕವಾಗಿ ಹೆಚ್ಚು ಸಹಕಾರಿಯಾದ ಯೋಜನೆ ಇದು ಎಂಬುದನ್ನು ತೋರಿಸಿದೆ. ಎಲ್ಲ ಆರೋಪಗಳನ್ನು ಮೀರಿ ಶಕ್ತಿ ಯೋಜನೆ ಯಶಸ್ಸು ಕಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios