ಕರ್ನಾಟಕದಲ್ಲೂ ಮಹಾ ಕ್ರಾಂತಿ, 3 ತಿಂಗಳು ಕಾದು ನೋಡಿ: ಹೊಸ ಬಾಂಬ್ ಸಿಡಿಸಿದ ಕೆ.ಎಸ್.ಈಶ್ವರಪ್ಪ
ಮಹಾರಾಷ್ಟ್ರದಲ್ಲಿ ಆದ ಸ್ಥಿತಿಯೇ ಕರ್ನಾಟಕದಲ್ಲೂ ಆಗಲಿದ್ದು, ಇನ್ನು ಮೂರು ತಿಂಗಳು ಕಾದು ನೋಡಿ. ಎನ್‌ಸಿಪಿ ಮುಖಂಡ ಅಜಿತ್ ಪವಾರ್ ರೀತಿಯ ನಾಯಕನೊಬ್ಬ ಕಾಂಗ್ರೆಸ್‌ನಲ್ಲೇ ಹುಟ್ಟುತ್ತಾನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ದಾವಣಗೆರೆ (ಜು.06): ಮಹಾರಾಷ್ಟ್ರದಲ್ಲಿ ಆದ ಸ್ಥಿತಿಯೇ ಕರ್ನಾಟಕದಲ್ಲೂ ಆಗಲಿದ್ದು, ಇನ್ನು ಮೂರು ತಿಂಗಳು ಕಾದು ನೋಡಿ. ಎನ್‌ಸಿಪಿ ಮುಖಂಡ ಅಜಿತ್ ಪವಾರ್ ರೀತಿಯ ನಾಯಕನೊಬ್ಬ ಕಾಂಗ್ರೆಸ್‌ನಲ್ಲೇ ಹುಟ್ಟುತ್ತಾನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಬುಧವಾರ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಜನ್ಮದಿನಾಚರಣೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ದಿನ ನಡೆಯುವುದಿಲ್ಲ.
ಹೆಚ್ಚೆಂದರೆ ಇನ್ನು ಕೇವಲ 3 ತಿಂಗಳು ಮಾತ್ರ ಈ ಸರ್ಕಾರ ಇರುತ್ತದೆ. ಕಾದು ನೋಡಿ ಎಂದು ಹೇಳುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ. ಕಾಂಗ್ರೆಸ್ ಶಾಸಕರಲ್ಲಿ ಸಾಕಷ್ಟುನೋವುಗಳಿವೆ. ನಾವು ಸುಳ್ಳು ಗ್ಯಾರಂಟಿ ಭರವಸೆಗಳನ್ನು ನೀಡಿ, ಜನರಿಗೆ ಮೋಸ ಮಾಡಿದ್ದೇವೆಂಬುದಾಗಿ ಆ ಪಕ್ಷದ ಶಾಸಕರಿಗೆ ಸಹಜವಾಗಿಯೇ ಬೇಸರ ಇದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರವೂ ಹೋಗಲಿದೆ ಎಂದರು. ನಾವು ಜಾರಿಗೊಳಿಸಿದ್ದ ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ಸಿಗರು ಹೇಳಿದ್ದಾರೆ.
ಶಕ್ತಿ ಯೋಜನೆಯಿಂದ ನಷ್ಟವಾದ ಆಟೋ ಚಾಲಕರಿಗೆ ನೆರವು: ಸಚಿವ ರಾಮಲಿಂಗಾರೆಡ್ಡಿ
ಸರ್ಕಾರದ ಇಂಥ ಹೇಳಿಕೆ ವಿರುದ್ಧ ಹಿಂದೂ ಸಮಾಜದ ಎಲ್ಲಾ ಸ್ವಾಮೀಜಿಗಳೂ ಈಗ ಹೋರಾಟಕ್ಕಿಳಿದಿದ್ದಾರೆ. ಇದೇ ಕಾರಣಕ್ಕೆ ಸದ್ಯ ಕಾಯ್ದೆಗಳ ವಾಪಸಾತಿ ಇಲ್ಲ ಎಂದು ಸರ್ಕಾರ ಹೇಳಿದೆ ಎಂದು ತಿಳಿಸಿದರು. ಒಂದು ವೇಳೆ ಮುಂದೆಯೂ ಸರ್ಕಾರ ಇಂಥ ನಿರ್ಧಾರಕ್ಕೆ ಬಂದರೆ, ನಮ್ಮ ಹೋರಾಟ ನಿಶ್ಚಿತ. ರಾಜ್ಯದ ಜನತೆಗೆ ಚುನಾವಣೆ ಪೂರ್ವ ನೀಡಿದ್ದ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸುವವರೆಗೂ ಸದನದ ಒಳ, ಹೊರಗೆ ನಮ್ಮ ಪಕ್ಷದ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಎಚ್ಚರಿಸಿದರು.
ರಾಜ್ಯಾಧ್ಯಕ್ಷರ ನೇಮಕ ಶೀಘ್ರ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ, ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿರುವುದು ನಿಜ. ಕರ್ನಾಟಕ ರಾಜ್ಯಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು, ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತದೆ. ಈ ಸಂಬಂಧ ಶೀಘ್ರ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ಈಶ್ವರಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರ ಮಹಾರಾಷ್ಟ್ರ ರೀತಿ 3 ತಿಂಗಳಲ್ಲಿ ಪತನ: ರಾಜ್ಯದ ಕಾಂಗ್ರೆಸ್ ಸರ್ಕಾರ ಮುಂದಿನ ಮೂರು ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಪತನವಾಗಲಿದೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಪ್ರತಿಭಟನೆ ವೇಳೆ ಮಾತನಾಡಿದ ಈಶ್ವರಪ್ಪ, ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಕರ್ನಾಟಕದಲ್ಲಿಯೂ ಆಗುವ ದಿನಗಳು ದೂರವಿಲ್ಲ. ಸರ್ಕಾರ ಪತನಗೊಳಿಸಲು ಕರ್ನಾಟಕದಲ್ಲಿಯೂ ಒಬ್ಬ ಅಜಿತ್ ಪವಾರ್ ಕಾಯುತ್ತಿದ್ದು, ಇನ್ನು ಮೂರು ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪತನವಾಗಲಿದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ನಾನು ನೋಟಿಸ್‌ಗೆ ಉತ್ತರ ಕೊಡಲ್ಲ: ರೇಣುಕಾಚಾರ್ಯ ಮತ್ತೆ ಕಿಡಿ
ರಾಜ್ಯ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯದೆ ಹಿಂಪಡೆಯಲು ಪ್ರಯತ್ನಿಸುತ್ತಿದೆ. ಕೇರಳ ಫೈಲ್ಸ್ ಸಿನಿಮಾ ಮಾಡಿದರೆ, ಮತಾಂತರ ಕಾಯ್ದೆ ಹಿಂಪಡೆಯಲ್ಲ. ಬೇಕಾದರೆ ನಾನೇ ನಿಮಗೆಲ್ಲ ಟಿಕೆಟ್ ಕೊಟ್ಟು ಸಿನಿಮಾ ತೋರಿಸಲು ಸಿದ್ಧ. ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವುದು ಸರಿಯಲ್ಲ. ಇದನ್ನು ರಾಜ್ಯದ ಜನ ಸಹಿಸಲ್ಲ. ಐದು ಗ್ಯಾರಂಟಿಗಳನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.