JDS Pancharatna Rathayatra: ಮಧುಗಿರಿಯಲ್ಲಿ ಪಂಚರತ್ನ ಯಾತ್ರೆಗೆ ಅದ್ಧೂರಿ ಸ್ವಾಗತ
ಪಂಚರತ್ನ ಯಾತ್ರೆ ಶುಕ್ರವಾರ ಮಧುಗಿರಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಕಾಟಗಾನಹಟ್ಟಿಬಳಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬೈಕ್ ರಾರಯಲಿ ಮೂಲಕ ನೂರಾರು ಕಾರ್ಯಕರ್ತರು ಶಾಸಕ ಎಂ.ವಿ.ವೀರಭದ್ರಯ್ಯ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ ಕೋರಿದರು.
ಮಧುಗಿರಿ (ಡಿ.03): ಪಂಚರತ್ನ ಯಾತ್ರೆ ಶುಕ್ರವಾರ ಮಧುಗಿರಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಕಾಟಗಾನಹಟ್ಟಿಬಳಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬೈಕ್ ರಾರಯಲಿ ಮೂಲಕ ನೂರಾರು ಕಾರ್ಯಕರ್ತರು ಶಾಸಕ ಎಂ.ವಿ.ವೀರಭದ್ರಯ್ಯ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ ಕೋರಿದರು. ಮಧುಗಿರಿ ಗ್ರಾಮ ದೇವತೆ ದಂಡಿಮಾರಮ್ಮ ದೇಗುಲಕ್ಕೆ ಕುಮಾರಸ್ವಾಮಿ ಭೇಟಿ ನೀಡಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಪಂಚರತ್ನ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಕುಮಾರಸ್ವಾಮಿ, ನಿಮ್ಮ ಋುಣ ನಮ್ಮ ಕುಟುಂಬದ ಮೇಲಿದೆ. 2009ರಲ್ಲಿ ನನ್ನ ಧರ್ಮ ಪತ್ನಿ ಅನಿತಾಕುಮಾರಸ್ವಾಮಿಗೆ ಆಶೀರ್ವಾದ ಮಾಡಿದ ದಿನವನ್ನು ನಾನು ಎಂದಿಗೂ ಮರೆಯಲಾರೆ.
ಆದರೆ ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಾಗಿಲ್ಲ, ಕಾರಣ 37 ಸ್ಥಾನ ಗೆದ್ದ ನಾವು ಸಿಎಂ ಆದ 14 ತಿಂಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದವರ ಅಣತಿಯಂತೆ ಕೆಲಸ ಮಾಡಬೇಕಿತ್ತು. ಆಗಾಗಿ ನಿಮ್ಮ ಋುಣ ತಿರೀಸಲು ಆಗಿಲ್ಲ ಎಂದರು. 30,40 ಸೀಟ್ ಗೆದ್ದು ಈ ಕಳ್ಳ ಕಾಕರ ಜೊತೆ ಕೆಲಸ ಮಾಡೋಕೆ ನನಗಿಷ್ಟವಿಲ್ಲ, ರಾಜ್ಯದ ಜನತೆ ಸಂಪೂರ್ಣ ಬಹುಮತದೊಂದಿಗೆ 123 ಶಾಸಕರನ್ನು ನಮ್ಮ ಪಕ್ಷಕ್ಕೆ ಆಯ್ಕೆ ಮಾಡಿ ಕೊಟ್ಟು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದರೆ, ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸ್ವಸಹಾಯ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು.
ಜೆಡಿಎಸ್ ಸ್ವತಂತ್ರ ಸರ್ಕಾರಕ್ಕೆ ಅವಕಾಶ ಕೊಡಿ: ಎಚ್.ಡಿ.ಕುಮಾರಸ್ವಾಮಿ
ಇದೇ ದೇವೇಗೌಡರಿಗೆ ಸಾವು ಬಯಸಿ ಕೀಳು ಮಟ್ಟದ ಹೇಳಿಕೆ ಕೊಟ್ಟಿರುವ ವ್ಯಕ್ತಿಗೆ 2004ರಲ್ಲಿ ರಾಜಕೀಯ ಜನ್ಮ ಕೊಟ್ಟಿದ್ದು ನಮ್ಮ ಜೆಡಿಎಸ್ ಪಕ್ಷದಿಂದ ದೊಡ್ಡೇರಿ ಭಾಗದ ಮಹಾ ಜನತೆ, ಅಂದು ದೇವೇಗೌಡರಿಗೆ ಅನಾರೋಗ್ಯವಿದ್ದರೂ ಸಹ ರಾಜಣ್ಣನ ಗೆಲುವಿಗಾಗಿ ದೊಡ್ಡೇರಿಗೆ ಬಂದು ಪ್ರಚಾರ ಮಾಡಿದ್ದಕ್ಕೆ ಒಂದು ಸಾವಿರ ಮತಗಳ ಅಂತರದಿಂದ ಗೆದ್ದರು. ಆದರೆ ಇಂದು ಅವರ ಬಗ್ಗೆ ಕೀಳು ಮಟ್ಟದ ಭಾಷೆಯಲ್ಲಿ ಮಾತನಾಡಿ ಅವರ ಸಾವು ಬಯಸಿರುವುದು ಎಷ್ಟುಸರಿ, ಡಿಸಿಸಿ ಬ್ಯಾಂಕ್ ದುರ್ಬಳಕೆ ಮಾಡಿಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಅಧಿಕಾರದ ಚುಕ್ಕಾಣಿ ಹಿಡಿದರೆ ಜಿಲ್ಲೆಯ 11 ತಾಲೂಕುಗಳನ್ನು ವಿಭಜಿಸಿ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಚಿಂತನೆ ನಡೆಸುವುದಾಗಿ ಭರವಸೆ ನೀಡಿದ ಕುಮಾರಸ್ವಾಮಿ ಈ ಬಗ್ಗೆ ಶಾಸಕ ವೀರಭದ್ರಯ್ಯ ಜಿಲ್ಲೆ ಮಾಡುವಂತೆ ಸಾಕಷ್ಟು ಸಲ ಚರ್ಚಿಸಿದ್ದಾರೆ. ಮಧುಗಿರಿಯಲ್ಲಿ ಈ ಸಲ ಜೆಡಿಎಸ್ ಗೆಲುವು ಸಾಧಿಸಿ ರಾಜ್ಯದಲ್ಲಿ 123 ಸೀಟ್ ಗೆದ್ದು ಅಧಿಕಾರಕ್ಕೆ ಬಂದರೆ ವೀರಭದ್ರಯ್ಯಗೆ ಸಚಿವ ಸ್ಥಾನ ಕೊಡುವುದಾಗಿ ಭರವಸೆ ನೀಡಿದರು. ಯಾತ್ರೆಯಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜಿನಪ್ಪ, ಪುರಸಭೆ ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಲ್ ಗಂಗರಾಜು.ಕೆ.ನಾರಯಣ್,ನರಸಿಂಹಮೂರ್ತಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಬಾಲಕ ಸಾವು, ಶವ ಹಿಡಿದು ಎಚ್ಡಿಕೆ ಕಣ್ಣೀರು: ಆಸ್ಪತ್ರೆಯೊಂದರಲ್ಲಿ ವೈದ್ಯರಿಲ್ಲದೆ ಬಾಲಕ ಸಾವಿಗೀಡಾಗಿದ್ದು, ಶವವನ್ನು ಕುಟುಂಬಸ್ಥರು ಮಾಜಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಅವರ ಮುಂದಿಟ್ಟು ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡ ಘಟನೆ ಮಧುಗಿರಿ ತಾಲೂಕಿನ ಕೊಡಿಗೆನಹಳ್ಳಿಯಲ್ಲಿ ನಡೆಯಿತು. ಕೊಡಿಗೆನಹಳ್ಳಿ ನಿವಾಸಿ ಚೌಕತ್ ಎಂಬವರ ಪುತ್ರ ಸಾಧಿಕ್ ಸಾವಿಗೀಡಾದ ಬಾಲಕ. ಶಾಲೆ ಮುಗಿಸಿ ಮನೆಗೆ ಬಂದ ಈತ ಬಳಿಕ ನೀರಿನ ಸಂಪ್‌ಗೆ ಬಿದ್ದು ಅಸ್ವಸ್ಥನಾಗಿದ್ದ.
ಕೂಡಲೇ ಕುಟುಂಬಸ್ಥರು ಬಾಲಕನನ್ನು ಕೊಡಿಗೆನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಆ ಸಮಯಕ್ಕೆ ಆಂಬ್ಯುಲೆನ್ಸ್ ವ್ಯವಸ್ಥೆ, ವೈದ್ಯರಿಲ್ಲದೆ ಸರಿಯಾದ ಚಿಕಿತ್ಸೆ ಸಿಗದಿ ದ್ದರಿಂದ ಬಾಲಕ ಮೃತಪಟ್ಟಿದ್ದಾನೆ. ಈ ವೇಳೆ ಪಂಚರತ್ನ ರಥಯಾತ್ರೆಯಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ ಎದುರಾಗಿದ್ದು, ಪೋಷಕರ ಕೈಯಲ್ಲಿ ಮಗುವಿನ ಪಾರ್ಥಿವ ಶರೀರ ಕಂಡು ತಕ್ಷಣ ಮಗುವನ್ನು ಪಂಚರತ್ನ ವಾಹನದ ಮೇಲಕ್ಕೆ ಎತ್ತಿಕೊಂಡು ಕಣ್ಣೀರಿಟ್ಟಿದ್ದಾರೆ.
Pancharatna Rathayatra: ದೊಡ್ಡಬಳ್ಳಾಪುರ ಗೆಲ್ಲೋದೆ ನಮ್ಮ ಗುರಿ: ಎಚ್.ಡಿ.ಕುಮಾರಸ್ವಾಮಿ
ಡಿಎಚ್‌ಓ ಸ್ಪಷ್ಟನೆ: ಕೊಡಿಗೇನಹಳ್ಳಿಯಲ್ಲಿ ಸಂಪಿಗೆ ಬಿದ್ದ ಮಗುವನ್ನು ಅವರ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಬಂದಾಗಲೇ ಉಸಿರಾಟ ನಿಂತಿತು. ಆಸ್ಪತ್ರೆಯಲ್ಲಿ ಆಂಬ್ಯು ಲೆನ್ಸ್ ಹಾಗೂ ಚಾಲಕ ಎರಡೂ ಸೌಲಭ್ಯ ಇತ್ತು. ಮೇಲ್ನೋಟಕ್ಕೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಯಾವುದೇ ಲೋಪ ಆಗಿಲ್ಲ. ಮಗುವಿನ ಮರಣೋತ್ತರ ವರದಿ ಬಂದ ಬಳಿಕ ವರದಿ ಆದರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಹೆಚ್‌ಓ ಡಾ.ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.