ಅಧಿಕಾರಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಗ್ರಾಂ.ಪಂ. ಅಭ್ಯರ್ಥಿ: ಮರು ಮತ ಎಣಿಕೆಯಲ್ಲೂ ಪರಾಭವ..!
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾನೂನು ಹಾಗೂ ಕೋರ್ಟ್ ಇರೋದ್ರಿಂದ ಇಲ್ಲಿ ಯಾರಿಗೂ ಯಾವ ಕಾರಣಕ್ಕೂ ಅನ್ಯಾಯ ಆಗೋದಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕೋಡಿ
ಚಿಕ್ಕೋಡಿ(ಅ.21): ಚುನಾವಣೆ, ರಾಜಕೀಯ, ಅಂದ್ರೇನೆ ಹಾಗೆ ಇಲ್ಲಿ ಜಿದ್ದು ಪ್ರತಿಷ್ಠೆ ಅನ್ನೋದೆ ಲೆಕ್ಕಕ್ಕೆ ಬರೋದು. ಕೇವಲ ಒಂದು ಮತದಿಂದ ಪರಭಾವಗೊಂಡಿದ್ದಕ್ಕೆ ಗ್ರಾಂ.ಪಂ ಚುನಾವಣೆಗೆ ನಿಂತಿದ್ದ ಅಭ್ಯರ್ಥಿ ಮರು ಮತ ಎಣಿಕೆ ಮಾಡಿ ಅಂತ ಅಧಿಕಾರಿಗಳ ಬಳಿ ಕೇಳಿಕೊಳ್ತಾನೆ ಅದಕ್ಕೆ ಒಪ್ಪದ ಅಧಿಕಾರಿಗಳನ್ನ ಕೋರ್ಟ್‌ಗೆ ಎಳೆದು ಕೊನೆಗೆ ಕೋರ್ಟ್‌ನಲ್ಲಿಯೇ ಮತ ಎಣಿಕೆ ಪ್ರಕ್ರಿಯೆಯನ್ನ ಜಡ್ಜ್ ಮುಂದೆಯೇ ಮಾಡಿಸ್ತಾನೆ. ಮರು ಮತ ಎಣಿಕೆ ಆಗಿ ವಿಜಯದ ಮಾಲೆ ಒಲಿದಿದ್ದು ಯಾರಿಗೆ ಗೊತ್ತಾ ಈ ಸ್ಟೋರಿ ನೋಡಿ.
ಎರಡು ವರ್ಷಗಳ ಬಳಿಕ ಮರು ಮತ ಎಣಿಕೆ
ಹೀಗೆ ಕೋರ್ಟ್ ಮುಂದೆ ನಿಂತಿರುವ ಈ ವ್ಯಕ್ತಿಯ ಹೆಸರು ರಾವಸಾಹೇಬ್ ಪಾಟೀಲ್ ಅಂತ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಂ.ಪಂ. ಚುನಾವಣೆಯಲ್ಲಿ 2020 ರಲ್ಲಿ ಸ್ಪರ್ಧಾಳುವಾಗಿ ಸ್ಪರ್ಧೆಗೆ ಇಳಿದಿದ್ದಿದ್ದರು. ವಾರ್ಡ್ ನಂಬರ್ ಎರಡರಿಂದ ಸ್ಪರ್ಧೆ ಮಾಡಿದ್ದ ರಾವಸಾಹೇಬ್ 505 ಮತಗಳನ್ನು ಪಡೆದು ಪರಾಭವಗೊಂಡಿದ್ದರು.. ಇನ್ನು ಇವರ ಎದುರಾಳಿ ತವನಪ್ಪ ಹೊಸೂರ 506 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದರು. ಸ್ವಲ್ಪ ಕನ್ಯ್ಪೂಸ್ ಇದೆ ಇನ್ನೊಂದು ಸಲ ಮತ ಎಣಿಕೆ ಮಾಡಿ ಅಂತ ಸೋತ ರಾವಸಾಹೇಬ್ ಪಾಟೀಲ್ ಅಧಿಕಾರಿಗಳ ಬಳಿ ಕೇಳಿಕೊಂಡಿದ್ದರು. ಆದರೆ ಅದಕ್ಕೆ ಒಪ್ಪದ ಅಧಿಕಾರಿಗಳು ಬೇಕಾದ್ರೆ ನೀವು ಕೋರ್ಟಿಗೆ ಹೋಗಿ ಅಂತ ಹೇಳಿದ್ರು..
ಬೆಳಗಾವಿ: ಮತ್ತೆರೆಡು ನೀರಾವರಿ ಯೋಜನೆಗೆ ಹಸಿರು ನಿಶಾನೆ
ರಾವಸಾಹೇಬ್ ಪಾಟೀಲ್ ಕೋರ್ಟ್ ಮೆಟ್ಟಿಲೇರಿದ ಪರಾಜಿತ ಅಭ್ಯರ್ಥಿ
ಮತ ಎಣಿಕೆ ಪ್ರಕ್ರಿಯೇ ಮುಗಿದ 15 ದಿನಗಳ ನಂತರ ರಾವಸಾಹೇಬ್ ಸಂಕೇಶ್ವರ ಜೆಎಂಎಫ್‌ಸಿ ಕೋರ್ಟ್ ಮೊರೆ ಹೋಗಿದ್ದರು. ಮರು ಮತ ಎಣಿಕೆ ಮಾಡುವಂತೆ ಕೋರ್ಟ್ ಗೆ ಮನವಿ ಸಲ್ಲಿದ್ದರು. ರಾವಸಾಹೇಬ್ ಮನವಿ ಪುರಸ್ಕರಿಸಿದ್ದ ಕೋರ್ಟ್ ಅಕ್ಟೋಬರ್ 20 ರಂದು ಜಡ್ಜ್ ಸಮ್ಮುಖದಲ್ಲಿಯೇ ಮರು ಮತ ಎಣಿಕೆ ಮಾಡಲು ಆದೇಶ ಮಾಡಿತ್ತು. ಅದರಂತೆ ನಿನ್ನೆ(ಗುರುವಾರ) ಮತ ಎಣಿಕೆ ಪ್ರಕ್ರಿಯೆ ಅಧಿಕಾರಿಗಳ ಹಾಗೂ ಜಡ್ಸ್ ಸಮ್ಮುಖದಲ್ಲಿಯೇ ಮುಗಿದಿದ್ದು ಯಾವ ಬದಲಾವಣೆಯೂ ಆಗಿಲ್ಲ ಮರು ಮತ ಎಣಿಕೆಯಲ್ಲೂ ಸಹ ತವನಪ್ಪ ಹೊಸೂರ ಅವರೇ ವಿಜಯ ಶಾಲಿಯಾಗಿದ್ದು ಮರು ಮತ ಎಣಿಕೆ ಪ್ರಕ್ರಿಯೆ ಮಾಡುವಂತೆ ಕೋರ್ಟ್ ಮೊರೆ ಹೋಗಿದ್ದ ರಾವಸಾಹೇಬ್ ಅವರಿಗೆ ಮತ್ತೆ ಮುಖಭಂಗವಾಗಿದೆ.
ಒಟ್ಟಿನಲ್ಲಿ ಸತತ 2 ವರ್ಷಗಳ ನಂತರ ಮರು ಮತ ಎಣಿಕೆ ನಡೆದು ಯಥಾ ಸ್ಥಿತಿ ಅಂದು ಬಂದ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಂದು ಅಧಿಕಾರಿಗಳು ನೀಡಿದ ಫಲಿತಾಂಶ ಸರಿಯಾಗಿಯೇ ಇದೆ ಎನ್ನುವುದು ಕೋರ್ಟ್‌ನಲ್ಲಿ ಪ್ರೂವ್ ಆಗಿದೆ. ಮತ್ತು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾನೂನು ಹಾಗೂ ಕೋರ್ಟ್ ಇರೋದ್ರಿಂದ ಇಲ್ಲಿ ಯಾರಿಗೂ ಯಾವ ಕಾರಣಕ್ಕೂ ಅನ್ಯಾಯ ಆಗೋದಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.