ಬೆಂಗಳೂರು, (ಡಿ.02): ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಯಮಾವಳಿಯನ್ನು ರಾಜ್ಯ ಸರ್ಕಾರ ಚುನಾವಣಾ ಆಯೋಗದ ನಿರ್ದೇಶನದಂತೆ ಅಧಿಸೂಚನೆ ಹೊರಡಿಸಿದೆ. 

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ 30 ತಿಂಗಳ ಅಧಿಕಾರವಧಿ ಹಂಚಿಕೆ ಮಾಡಿ ಇಂದು (ಶನಿವಾರ) ರಾಜ್ಯ ಸರ್ಕಾರ  ಆದೇಶ ಹೊರಡಿಸಿದೆ. ಇನ್ನು ಮೀಸಲಾತಿ ಪ್ರಕಟಿಸುವುದನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.

 ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ನೀಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಯ ಅನುಪಾತಕ್ಕೆ ತಕ್ಕಂತೆ ಸಮಾನವಾಗಿ ಹಂಚಿಕೆ ಮಾಡಬೇಕು. ಹಿಂದುಳಿದ ವರ್ಗಕ್ಕೆ ಸರಿ ಸುಮಾರು1/3 ಸಂಖ್ಯೆಯಷ್ಟು ಹುದ್ದೆಗಳನ್ನು ಮೀಸಲಿರಿಸತಕ್ಕದ್ದು, ಎಸ್ಸಿ,ಎಸ್ಟಿ ಹಾಗೂ ಓಬಿಸಿ ವರ್ಗಗಳಿಗೆ ಒಟ್ಟು ಹುದ್ದೆಗಳ ಸಂಖ್ಯೆಯು ಪಂಚಾಯಿತಿಗಳ ಒಟ್ಟು ಹುದ್ದೆಗಳ ಶೇ. 50ರಷ್ಟನ್ನು ಮೀರತಕ್ಕದ್ದಲ್ಲ ಎಂದು ನಿಬಂಧನೆ ಹಾಕಲಾಗಿದೆ.

ಗ್ರಾ.ಪಂ. ಅಧ್ಯಕ್ಷರ, ಉಪಾಧ್ಯಕ್ಷ ಆಯ್ಕೆ ಬಗ್ಗೆ ಸೇರಿದಂತೆ ನೂತನ ಸದಸ್ಯರಿಗೆ ಈಶ್ವರಪ್ಪ ಮಾಹಿತಿ

ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿ ವೇಳೆ ಹುದ್ದೆಗಳ ಸಂಖ್ಯೆ ಕಡಿಮೆ ಇದ್ದು, ಸದಸ್ಯರ ಸಂಖ್ಯೆ ಸಮವಾಗಿದ್ದರೆ ಅಂತಹ ಪಂಚಾಯಿತಿಗಳ ಸದಸ್ಯರ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ಅಧ್ಯಕ್ಷರು, ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ನಿಯಮಾವಳಿಯಲ್ಲಿ ತಿಳಿಸಲಾಗಿದೆ.

ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳನ್ನು ಆಯ್ಕೆ ಮಾಡುವಾಗ ಗ್ರಾಮ ಪಂಚಾಯಿತಿಗಳಿಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ(ಅ), ಹಿಂದುಳಿದ ವರ್ಗ(ಬ), ಸಾಮಾನ್ಯ(ಮಹಿಳೆ) ಸಾಮಾನ್ಯ ಕ್ರಮದಲ್ಲಿ ನಿಗದಿಪಡಿಸತಕ್ಕದ್ದು, ಒಂದೇ ಗ್ರಾಮ ಪಂಚಾಯಿತಿಯಲ್ಲಿ ಏಕ ಕಾಲದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳನ್ನು ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳಿಗೆ ನಿಗದಿಪಡಿಸುವಂತಿಲ್ಲ. 

ಅಂತೆಯೇ ಹಿಂದುಳಿದ ವರ್ಗ(ಅ)ಮತ್ತು ಹಿಂದುಳಿದ ವರ್ಗ(ಅ) ಹಿಂದುಳಿದ ವರ್ಗ(ಬ) ಮತ್ತು ಹಿಂದುಳಿದ ವರ್ಗ(ಬ)ಗಳಿಗೆ ಏಕಕಾಲದಲ್ಲಿ ನೀಡಲು ಸಾಧ್ಯವಿಲ್ಲ.

ತಾಲೂಕುವಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳನ್ನು ನಿಗದಿಪಡಿಸುವಾಗ ಮೊದಲು ಎಲ್ಲಾ ಅಧ್ಯಕ್ಷರ ಸ್ಥಾನಗಳ ಮೀಸಲಾತಿಯನ್ನು ನಿಗದಿಪಡಿಸಿ ಬಳಿಕ ಉಪಾಧ್ಯಕ್ಷರ ಮೀಸಲಾತಿಯನ್ನು ನಿಗದಿಪಡಿಸಿದರೆ ಸ್ಥಾನ ಹಂಚಿಕೆ, ಮೀಸಲಾತಿಯಲ್ಲಿ ಯಾರಿಗೂ ಅನ್ಯಾಯವಾಗುವುದನ್ನು ತಡೆಯಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.