ಸದನದಲ್ಲಿ ಗುಡುಗಿದ ಯತ್ನಾಳ್: ಖುದ್ದು ಸಿಎಂ ಎದ್ದು ನಿಂತು ತನಿಖೆಗೆ ಆದೇಶಿಸಿದ್ರು..!
ಸದಾ ಒಂದಿಲ್ಲೊಂದು ಸುದ್ದಿಯಾಗುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲಿ ಘರ್ಜಿಸಿದ್ದಾರೆ. ಇದರಿಂದ ಎಚ್ಚೆತ್ತ ಸಿಎಂ ತನಿಖೆಗೆ ಆದೇಶಿಸಿದ್ದಾರೆ.
ಬೆಂಗಳೂರು, (ಡಿ.9): ಭೂ ಸುಧಾರಣೆ, ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರ ಮಧ್ಯೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲಿ ತಮ್ಮ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.
ಹೌದು....ಸದನದ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದ ವಿವಿಧೆಡೆ ಶುದ್ದ ಕುಡಿಯುವ ನೀರಿನ ಘಟಕಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಸಚಿವ ಕೆ.ಎಸ್. ಈಶ್ವರಪ್ಪನವರು ಮೌನ ವಹಿಸಿದ್ದಾರೆ ಎಂದು ಸದನದಲ್ಲಿ ಎದ್ದು ನಿಂತು ಹೇಳಿದರು.
ಈ ಪ್ರಶ್ನೆ ಹಾಕುತ್ತಿದ್ದಂತೆಯೇ ದಿಢೀರ್ ಆಗಿ ಎದ್ದು ನಿಂತ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ರಾಜ್ಯದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಬಂದ್ ಆಗಿರುವ ಬಗ್ಗೆ ಸರ್ವೆ ಮಾಡಲಾಗಿದ್ದು, ಶೇ.30 ಕಾರಣಾಂತರಗಳಿಂದ ತಾತ್ಕಾಲಿಕವಾಗಿ ಬಂದ್ ಆಗಿವೆ ಎಂದು ಉತ್ತರಿಸಿದರು.
ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಚಿವ, ಕೈಗೆ ದೊಡ್ಡ ಶಕ್ತಿ ಬಂದಾಂತಾಗಿದೆ ಎಂದ ಡಿಕೆಶಿ
ಈ ಬಗ್ಗೆ ಅರಗ ಜ್ಞಾನೇಂದ್ರ, ಸಿದ್ದು ಸವದಿ, ಯು.ಟಿ.ಖಾದರ್ ಸೇರಿದಂತೆ ಅನೇಕ ಸದಸ್ಯರು ಶುದ್ದ ಕುಡಿಯುವ ನೀರಿನ ಘಟಕಗಳ ಖರೀದಿಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಮಾರುಕಟ್ಟೆಯಲ್ಲಿ 3-4 ಲಕ್ಷಕ್ಕೆ ಒಂದು ಘಟಕಗಳು ಸಿಕ್ಕರೆ, ಅಕಾರಿಗಳು 14ರಿಂದ 15 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.
ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ನಾನು ಅನೇಕ ಕಡೆ ಭೇಟಿ ಕೊಟ್ಟಾಗ ದೊಡ್ಡ ಪ್ರಮಾಣದ ಭ್ರಷ್ಟಚಾರ ನಡೆದಿರುವುದು ಗಮನಕ್ಕೆ ಬಂದಿದೆ.
ಈ ಬಗ್ಗೆ ದೂರುಗಳು ಬಂದಿವೆ. ಕೆಲವರು ಸರ್ಕಾರಕ್ಕೆ ಟೋಪಿ ಹಾಕಿ ಹೋಗಿದ್ದಾರೆ. ಹೀಗಾಗಿ ಇದನ್ನು ಜಂಟಿ ಸದನ ಸಮಿತಿ ಮೂಲಕ ತನಿಖೆ ಮಾಡಿಸಲಾಗುವುದು. ಎರಡು ತಿಂಗಳೊಳಗೆ ಸಮಗ್ರ ತನಿಖೆ ನಡೆಸಿ ಸದನದಲ್ಲೇ ವರದಿಯನ್ನು ಮಂಡಿಸಲಾಗುವುದು ಎಂದು ಹೇಳಿದರು.
ಒಟ್ಟಿನಲ್ಲಿ ಬಸನಗೌಡ ಪಾಟೀಲ್ ಹಾಕಿದ ಒಂದು ಪ್ರಶ್ನೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ತನಿಖೆಗೆ ಆದೇಶಿಸಿರುವುದು ವಿಶೇಷ.