ಬೆಂಗಳೂರು, (ಡಿ.9): ಅತ್ತ ಅಧಿವೇಶನದಲ್ಲಿ ಜೆಡಿಎಸ್ ಸದಸ್ಯರು ಭೂ ಸುಧಾರಣೆ ಕಾಯ್ದೆಗೆ ಬೆಂಬಲಿಸಿದ್ರೆ, ಇತ್ತ ಸಮಾಜಿಕ ಜಾಲತಾಣಗಳಲ್ಲಿ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ದೇವೇಗೌಡ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಇದರ ನಡುವೆಯೂ ಮಾಜಿ ಸಚಿವ, ಮಡಿಕೇರಿ ಜೆಡಿಎಸ್ ಪ್ರಭಾವಿ ನಾಯಕ ಜಿ.ವಿಜಯ ಅವರು ಇಂದು (ಬುಧವಾರ) ಕಾಂಗ್ರೆಸ್‍ಗೆ ಸೇರ್ಪಡೆಯಾದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಿ.ವಿಜಯ ಅವರಿಗೆ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.

ಕೆಲ ನಾಯಕರುಗಳಿಗೆ ಡಿಕೆಶಿ ಗಾಳ: ಶೀಘ್ರದಲ್ಲೇ ಮತ್ತಷ್ಟು ಮುಖಂಡರು ಕಾಂಗ್ರೆಸ್ ಸೇರ್ಪಡೆ

ನಂತರ ಮಾತನಾಡಿದ ಜಿ.ವಿಜಯ, ದೇಶದಲ್ಲಿ ಜಾತ್ಯಾತೀತ ತತ್ವಗಳಿಗೆ ತೊಂದರೆ ಆಗುತ್ತಿದೆ. ನಿನ್ನೆ ಜೆಡಿಎಸ್ ಪಕ್ಷದ ನಿಲುವು ನೋಡಿ ನನಗೆ ರಾತ್ರಿ ನಿದ್ದೆ ಬರಲಿಲ್ಲ. ಜಾತ್ಯಾತೀತ ಅಂತ ಹೇಳಿಕೊಳ್ಳುವ ಪಕ್ಷದ ನಡೆ ನೋಡಿ ನನಗೆ ತೀವ್ರ ಬೇಸರವಾಗಿದೆ ಎಂದು ಭೂ ಸುಧಾರಣಾ ಕಾಯ್ದೆ ಪಾಸ್ ಮಾಡಲು ಬಿಜೆಪಿಗೆ ಸಹಕರಿಸಿದ ಜೆಡಿಎಸ್ ವಿರುದ್ಧ ಟೀಕಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಡಕೇರಿ ಜಿಲ್ಲೆಯ ಪ್ರಭಾವಿ ನಾಯಕ ಜಿ.ವಿಜಯ ಮತ್ತು ಅವರ ಬಹಳಷ್ಟು ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮಡಕೇರಿಯಲ್ಲಿ ಕಾಂಗ್ರೆಸ್‍ಗೆ ದೊಡ್ಡ ಶಕ್ತಿ ಬಂದಾಂತಾಗಿದೆ ಎಂದರು.